100 ಎಕರೆ ವಿಸ್ತೀರ್ಣ, 80 ಸಾವಿರ ಆಸನ ಸಾಮರ್ಥ್ಯದ ಕ್ರೀಡಾಂಗಣದ ಸಿದ್ಧತೆ ಪರಿಶೀಲಿಸಿದ ಸಚಿವ ಜಮೀರ್ ಅಹಮದ್ ಖಾನ್

ಬೆಂಗಳೂರು:ರಾಜಧಾನಿ ಬೆಂಗಳೂರಿನ ಕ್ರೀಡಾ ಇತಿಹಾಸದಲ್ಲಿ ಹೊಸದೊಂದು ಐತಿಹಾಸಿಕ ಮೈಲಿಗಲ್ಲಿಗೆ ಮುನ್ನುಡಿ ಬರೆಯಲಾಗುತ್ತಿದೆ. ಬೆಂಗಳೂರಿನ ಸೂರ್ಯ ನಗರದ 4ನೇ ಹಂತದಲ್ಲಿ ನಿರ್ಮಾಣವಾಗಲಿರುವ, ಜಾಗತಿಕ ಗುಣಮಟ್ಟದ ಬೃಹತ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಭೂಮಿ ಪೂಜೆ ಕಾರ್ಯಕ್ರಮವು ಇದೇ ಮೇ 23ರಂದು ಅತ್ಯಂತ ವೈಭವದಿಂದ ನೆರವೇರಲಿದೆ.
ಈ ಮಹತ್ತರ ಯೋಜನೆಗೆ ಚಾಲನೆ ನೀಡುವ ಹಿನ್ನೆಲೆಯಲ್ಲಿ, ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಬಿ.ಜೆಡ್. ಜಮೀರ್ ಅಹಮದ್ ಖಾನ್ಅವರು ಕ್ರೀಡಾಂಗಣದ ಉದ್ದೇಶಿತ ಪ್ರದೇಶಕ್ಕೆ ಭೇಟಿ ನೀಡಿ, ಭೂಮಿ ಪೂಜೆ ಕಾರ್ಯಕ್ರಮದ ಪೂರ್ವಸಿದ್ಧತೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು.
ಯೋಜನೆಯ ಮುಖ್ಯಾಂಶಗಳು:
ವಿಶಾಲ ಜಾಗ:ಸೂರ್ಯ ನಗರದ 4ನೇ ಹಂತದಲ್ಲಿ ಬರೋಬ್ಬರಿ 100 ಎಕರೆ ವಿಸ್ತೀರ್ಣದ ವಿಶಾಲವಾದ ಜಾಗದಲ್ಲಿ ಈ ಕ್ರೀಡಾಂಗಣ ತಲೆಯೆತ್ತಲಿದೆ.
ಬೃಹತ್ ವೆಚ್ಚ: ಯೋಜನೆಗಾಗಿ ಒಟ್ಟು 943 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗುತ್ತಿದ್ದು, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವಿಶ್ವದರ್ಜೆಯ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗುತ್ತದೆ.
ಆಸನ ಸಾಮರ್ಥ್ಯ: ಬರೋಬ್ಬರಿ 80,000 ಪ್ರೇಕ್ಷಕರುಏಕಕಾಲದಲ್ಲಿ ಕುಳಿತು ಪಂದ್ಯ ವೀಕ್ಷಿಸಬಹುದಾದ ಬೃಹತ್ ವ್ಯವಸ್ಥೆ ಇಲ್ಲ ಇರಲಿದ್ದು, ಇದು ಪೂರ್ಣಗೊಂಡರೆ ದೇಶದ ಅತಿ ದೊಡ್ಡ ಕ್ರೀಡಾಂಗಣಗಳ ಪಟ್ಟಿಗೆ ಸೇರಲಿದೆ.
ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಚಿವರ ಪರಿಶೀಲನೆ
ಭೂಮಿ ಪೂಜೆಯ ಸಿದ್ಧತೆಗಳನ್ನು ಪರಿಶೀಲಿಸಿದ ಸಚಿವ ಜಮೀರ್ ಅಹಮದ್ ಖಾನ್ ಅವರು, ಕಾರ್ಯಕ್ರಮಕ್ಕೆ ಯಾವುದೇ ಲೋಪವಾಗದಂತೆ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಕ್ರೀಡಾಂಗಣದ ನಕ್ಷೆ, ಪ್ರವೇಶ ದ್ವಾರಗಳು ಮತ್ತು ಪಾರ್ಕಿಂಗ್ ವ್ಯವಸ್ಥೆಗಳ ಕುರಿತು ಸ್ಥಳದಲ್ಲೇ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಗೃಹ ಮಂಡಳಿ (KHB) ಅಧ್ಯಕ್ಷರಾದ ಶಿವಲಿಂಗೇ ಗೌಡ, ಸ್ಥಳೀಯ ಶಾಸಕರಾದ ಶಿವಣ್ಣ, ಗೃಹ ಮಂಡಳಿ ಪ್ರಧಾನ ಅಭಿಯಂತರರಾದ ರವಿಕುಮಾರ್, ಅಧಿಕಾರಿಗಳಾದ ಲೋಕೇಶ್ ಬಾಬು ಸೇರಿದಂತೆ ಹಲವು ಪ್ರಮುಖರು ಹಾಗೂ ಇಂಜಿನಿಯರ್‌ಗಳು ಉಪಸ್ಥಿತರಿದ್ದರು.
ಕ್ರೀಡಾ ಲೋಕದಲ್ಲಿ ಹೊಸ ಸಂಚಲನ
ಪ್ರಸ್ತುತ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ನಗರದ ಹೃದಯಭಾಗದಲ್ಲಿದ್ದು, ಸೀಮಿತ ಆಸನ ಸಾಮರ್ಥ್ಯವನ್ನು ಹೊಂದಿದೆ. ಈಗ ಸೂರ್ಯ ನಗರದಲ್ಲಿ ನಿರ್ಮಾಣವಾಗಲಿರುವ 80 ಸಾವಿರ ಸಾಮರ್ಥ್ಯದ ಹೊಸ ಕ್ರೀಡಾಂಗಣವು ಭವಿಷ್ಯದಲ್ಲಿ ಜಾಗತಿಕ ಮಟ್ಟದ ಐಪಿಎಲ್, ಟೆಸ್ಟ್ ಹಾಗೂ ವಿಶ್ವಕಪ್‌ನಂತಹ ಬೃಹತ್ ಪಂದ್ಯಾವಳಿಗಳಿಗೆ ಆತಿಥ್ಯ ವಹಿಸಲು ಪ್ರಮುಖ ವೇದಿಕೆಯಾಗಲಿದೆ. ಈ ಯೋಜನೆ ಇಡೀ ಕರ್ನಾಟಕದ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಕ್ರೀಡಾ ವಲಯದಲ್ಲಿ ಹರ್ಷ ವ್ಯಕ್ತವಾಗಿದೆ.
