ಬೆಂಗಳೂರು, ಜು.3: ಇತ್ತೀಚಿನ ನೀಟ್ ಪರೀಕ್ಷೆ ಅಕ್ರಮ ಹಾಗೂ ಸಿಬಿಎಸ್ಸಿ ಪರೀಕ್ಷೆಯ ಲೋಪಗಳು ಸೇರಿದಂತೆ ದೇಶಾದ್ಯಂತ ನಡೆದಿರುವ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ಹಾಗೂ ಯುವಜನರ ಸಮಸ್ಯೆಗಳನ್ನು ರಾಷ್ಟ್ರಮಟ್ಟದಲ್ಲಿ ಪ್ರಸ್ತಾಪಿಸುವ ಉದ್ದೇಶದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಮ್ಮಿಕೊಂಡಿರುವ ‘ಛಾತ್ರೋಂ ಕಿ ಗೂಂಜ್’ ರಾಷ್ಟ್ರವ್ಯಾಪಿ ಅಭಿಯಾನದ ಬೆಂಗಳೂರು ನಗರ ಸಂಯೋಜಕರಾಗಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ (ಕೆಪಿವೈಸಿಸಿ) ಅಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ಅವರನ್ನು ನೇಮಕ ಮಾಡಲಾಗಿದೆ.
ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ, ಇಂಡಿಯನ್ ಯೂತ್ ಕಾಂಗ್ರೆಸ್ ಹಾಗೂ ಎನ್ಎಸ್ಯುಐ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಈ 40 ದಿನಗಳ ಅಭಿಯಾನವು ವಿದ್ಯಾರ್ಥಿಗಳ ಸಮಸ್ಯೆಗಳು, ನಿರುದ್ಯೋಗ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬ ಹಾಗೂ ಶಿಕ್ಷಣ ವ್ಯವಸ್ಥೆಯ ಸುಧಾರಣೆಯಂತಹ ಪ್ರಮುಖ ವಿಷಯಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸುವ ಗುರಿ ಹೊಂದಿದೆ.
ಅಭಿಯಾನದ ಭಾಗವಾಗಿ ದೇಶದ 28 ಪ್ರಮುಖ ನಗರಗಳಿಗೆ ನಗರ ಸಂಯೋಜಕರನ್ನು ನೇಮಕ ಮಾಡಲಾಗಿದ್ದು, ಬೆಂಗಳೂರಿನ ಜವಾಬ್ದಾರಿಯನ್ನು ಮಂಜುನಾಥ್ ಗೌಡ ಅವರಿಗೆ ವಹಿಸಲಾಗಿದೆ. ರಾಜ್ಯದಲ್ಲಿ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಹಾಗೂ ಯುವಜನರನ್ನು ಅಭಿಯಾನದೊಂದಿಗೆ ಸಂಪರ್ಕಿಸುವುದು, ವಿವಿಧ ಜಾಗೃತಿ ಕಾರ್ಯಕ್ರಮಗಳು, ಸಂವಾದಗಳು ಮತ್ತು ಸಂಘಟನಾ ಚಟುವಟಿಕೆಗಳನ್ನು ಮುನ್ನಡೆಸುವುದು ಅವರ ಪ್ರಮುಖ ಜವಾಬ್ದಾರಿ.
ನಗರ ಸಂಯೋಜಕರಾಗಿ ಮಂಜುನಾಥ್ ಗೌಡ ಅವರ ನೇಮಕದೊಂದಿಗೆ ರಾಜ್ಯದಲ್ಲಿ ಅಭಿಯಾನಕ್ಕೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕತ್ವವು ದೇಶದಾದ್ಯಂತ ವಿದ್ಯಾರ್ಥಿಗಳ ಧ್ವನಿಯನ್ನು ಸಂಘಟಿತವಾಗಿ ಮುನ್ನೆಲೆಗೆ ತರುವ ಉದ್ದೇಶದಿಂದ ಈ ಅಭಿಯಾನವನ್ನು ಮುಂದುವರಿಸುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ವರದಿಗಾರರು: ಸೋಮಶೇಖರ ಲಮಾಣಿ
