ಬೆಂಗಳೂರು: ಗ್ಯಾರಂಟಿ ಯೋಜನೆ ಗೃಹಲಕ್ಷ್ಮಿ ಹಣದ ವಿಚಾರದಲ್ಲಿ ಸಿಎಜಿ, ನಕಲಿ ಖಾತೆಗಳಿಗೆ ಹಣ ಹೋಗಿದೆ. ಒಂದೇ ಖಾತೆಗೆ ಹಣ ಹಾಕಿದ್ದಾರೆ, ಸತ್ತವರ ಹೆಸರಿಗೆ ಹಣ ಹೋಗಿದೆ ಎಂದು ತಿಳಿಸಿದೆ. ಇದರ ಕುರಿತು ಯಾಕೆ ಇನ್ನೂ ಎಫ್‍ಐಆರ್ ದಾಖಲಿಸಿಲ್ಲ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಕೇಳಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಡವರ ಹೆಸರಿನಲ್ಲಿ ಲೂಟಿಯನ್ನು ಕಾಂಗ್ರೆಸ್ ಪಕ್ಷ ಸಮರ್ಥಿಸುವುದೇ ಎಂದು ಪ್ರಶ್ನೆ ಹಾಕಿದರು. ಯಾಕೆ ಇವತ್ತಿನವರೆಗೂ ಎಸ್‍ಐಟಿ ರಚಿಸಿಲ್ಲ? ಎಂದರು. ಗೃಹಲಕ್ಷ್ಮಿ ಯೋಜನೆಯ 2 ತಿಂಗಳಿನ 5 ಸಾವಿರ ಕೋಟಿ ಹಣ ಖಾತೆಗೇ ಜಮೆ ಆಗಿಲ್ಲವೆಂದು ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆ ಆಗಿದೆ. ಅವತ್ತಿನ ಸಚಿವೆ ಆರಂಭದಲ್ಲಿ ಉಡಾಫೆ ಮಾತನಾಡಿದ್ದರು.
ಮಹೇಶ್ ಟೆಂಗಿನಕಾಯಿಯವರು ದಾಖಲೆ ತಂದಿಟ್ಟರು. ಹೈದರಾಲಿ ಸೈನಿಕರ ಸಂಬಳ ಮುಂದೂಡಿ ಸಂಬಳ ಎಗರಿಸುತ್ತಿದ್ದ ವಿಚಾರವನ್ನು ಸುರೇಶ್ ಕುಮಾರ್ ಸದನದ ಮುಂದಿಟ್ಟಿದ್ದರು ಎಂದು ಗಮನ ಸೆಳೆದರು.
ಆ ಹಣ ಎಲ್ಲಿ ಹೋಗಿದೆ? ಅದರ ತನಿಖೆಗೆ ಹಾಗೂ ಈಗಿನ ಸಿಎಜಿ ವರದಿ ಕುರಿತು ತನಿಖೆಗೆ ಯಾಕೆ ಆದೇಶ ಮಾಡಿಲ್ಲ? ಎಂದು ಕೇಳಿದರು. ಇದರ ಹಿಂದೆ ಒಂದು ದೊಡ್ಡ ಷಡ್ಯಂತ್ರ ಇದ್ದಂತಿದೆ ಎಂದು ಆರೋಪಿಸಿದರು. ಇದರಲ್ಲೂ ಅಕ್ರಮದ ವಾಸನೆ ಬಡಿಯುತ್ತಿದೆ ಎಂದು ದೂರಿದರು.
ಸರಕಾರ ತಕ್ಷಣ ಕೇಸು ದಾಖಲಿಸಿಕೊಳ್ಳಬೇಕು. ವಿಶೇಷ ತನಿಖೆಗೆ ತಂಡವನ್ನು ನಿಯುಕ್ತಿ ಮಾಡಬೇಕೆಂದು ಆಗ್ರಹಿಸಿದರು.
ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿಗೆ ಈಗ್ಯಾಕೆ ಕಂಡಿಷನ್ ಎಂದು ಪ್ರಶ್ನಿಸಿದರು. ಆಗ ಕಾಕಾಪಾಟೀಲ್‍ಗೂ ಫ್ರೀ, ಮಹದೇವಪ್ಪನಿಗೂ ಫ್ರೀ ಎಂದಿದ್ದರು. ಈಗ್ಯಾಕೆ ಪರಿಷ್ಕರಣೆ, ಉದ್ದೇಶ ಏನು ಎಂದು ಪ್ರಶ್ನೆ ಮಾಡಿದರು. ನಮ್ಮ ಆರ್ಥಿಕ ಸ್ಥಿತಿ ಕಂಗೆಟ್ಟಿದೆ; ಕೊಡಲಾಗುತ್ತಿಲ್ಲ ಎಂದು ಹೇಳಿ ಎಂದು ಒತ್ತಾಯಿಸಿದರು.
ಎಸ್‍ಐಆರ್ ದೋಷಪೂರಿತ ಆಗಬೇಕೇ?
ಎಸ್‍ಐಆರ್ ವೇಳೆ ಅಲ್ಪಸಂಖ್ಯಾತರ ಮತ ಒಂದೂ ಬಿಟ್ಟು ಹೋಗಬಾರದೆಂದು ಮುಖ್ಯಮಂತ್ರಿಗಳಿದ್ದ ಅನಧಿಕೃತ ಸಭೆಯಲ್ಲಿ ತಾಕೀತು ಮಾಡಿದ ಮಾಹಿತಿ ಇದೆ. ಹಾಗಿದ್ದರೆ ಬಹುಸಂಖ್ಯಾತರ ಮತ ಬಿಟ್ಟು ಹೋಗಬಹುದೇ ಎಂದು ಪ್ರಶ್ನಿಸಿದರು. ಎಸ್‍ಐಆರ್ ದೋಷಪೂರಿತ ಆಗಬೇಕೆಂದು ಕಾಂಗ್ರೆಸ್ ಇಚ್ಛೆಯೇ ಎಂದು ಕೇಳಿದರು. ಜಿಲ್ಲಾಧಿಕಾರಿಗಳಿದ್ದ ಸಭೆಯಲ್ಲಿ ನಕಲಿ ಮತ ಸೇರಬಾರದೆಂದು ಹೇಳಿದ್ದರೆ ಅದು ಪ್ರಾಮಾಣಿಕ ಸೂಚನೆ ಆಗುತ್ತಿತ್ತು ಎಂದು ನುಡಿದರು.
ಡಬಲ್ ಮತ ಇರಬಾರದೆಂದು ಹೇಳಬೇಕಿತ್ತು. ಬಾಂಗ್ಲಾದೇಶಿಗಳಿಗೆ ಜಾಗ ಕೊಡಬಾರದೆಂದು ಹೇಳಬೇಕಿದ್ದರೂ ಅದನ್ನು ಹೇಳಿಲ್ಲ ಎಂದು ಟೀಕಿಸಿದರು. ಅಕ್ರಮ ಮಾಡಲು ಸಹಕರಿಸಬೇಕೆಂಬ ಒತ್ತಡವನ್ನು ಆರ್.ಒ.ಗಳು, ಜಿಲ್ಲಾಧಿಕಾರಿಗಳ ಮೇಲೆ ಹೇರುತ್ತಿರುವುದು ನಕಲಿ ಮಾಡುವ ಸಂಚನ್ನು ಕಾಂಗ್ರೆಸ್ ಮಾಡುತ್ತಿದೆ ಎಂಬ ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಚಿಕ್ಕಮಗಳೂರಿನಲ್ಲಿ ಹೆಸರು ತೆಗೆದವರ ಎಲ್ಲ ವಿವರವನ್ನು ವೆಬ್‍ಸೈಟಿನಲ್ಲಿ ತೋರಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಬಿಎಲ್‍ಒಗಳಿಗೆ ಮೇಲಿಂದ ಒತ್ತಡ ಹೇರಿದ್ದರಿಂದ ಅದಕ್ಕೆ ಮಣಿದು ಅವರು ಮ್ಯಾಪಿಂಗ್ ಸರಿಯಾಗಿ ಮಾಡಿಲ್ಲ ಎಂಬ ದೂರಿದೆ ಎಂದು ವಿವರ ನೀಡಿದರು. ಪ್ರಾಮಾಣಿಕ- ಪಾರದರ್ಶಕವಾಗಿ ಎಸ್‍ಐಆರ್ ನಡೆಸುವಂತೆ ಅವರು ಒತ್ತಾಯಿಸಿದರು.
ಡಿ.ವಿ.ಸದಾನಂದ ಗೌಡರ ಆಡಿಯೊ ಎನ್ನಲಾಗುತ್ತಿರುವುದಕ್ಕೆ ಅವರೇ ನನ್ನದಲ್ಲ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ. ಅವರೇ ನಿರಾಕರಿಸಿದ ಮೇಲೆ ಏನೂ ಹೇಳುವುದು ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಎಲ್ಲ ಕಾಲಕ್ಕೂ ನಮ್ಮಲ್ಲಿ ಒಗ್ಗಟ್ಟು ಇರುತ್ತದೆ. ವಿಷಯಾಧಾರಿತ ಹೋರಾಟ ಮತ್ತು ಒಗ್ಗಟ್ಟು ಮಾತ್ರ ನಮ್ಮನ್ನು ಬೆಳೆಸುತ್ತದೆ. ನಮ್ಮ ಪರವಾದ ವಾತಾವರಣ ನಿರ್ಮಾಣವಾಗುತ್ತದೆ ಎಂದರು.
ಕಾಂಗ್ರೆಸ್ ಆರೋಪ ಸುಳ್ಳು…
ಅಯೋಧ್ಯೆ ರಾಮಮಂದಿರ ಹುಂಡಿ ಕಳವು ಸಂಬಂಧ ನಾವು ಸ್ಪಷ್ಟವಾಗಿ ಹೇಳಿದ್ದೇವೆ. ಕಾಂಗ್ರೆಸ್ ನವರು ಆರೋಪ ಮಾಡುತ್ತಿರುವ ರೀತಿಯಲ್ಲಿ ಟ್ರಸ್ಟ್‍ನಲ್ಲಿ ಬಿಜೆಪಿಯವರು ಯಾರೂ ಇಲ್ಲ. ಆದರೂ ಬಿಜೆಪಿಯವರು ಲೂಟಿ ಮಾಡಿದ್ದಾರೆ ಎಂದು ಹೇಳುತ್ತಾರೆ. ಹುಂಡಿ ಕಳವು ಆಗಿರುವುದರಿಂದ ನಮಗೂ ನೋವಾಗಿದೆ. ಅಯೋಧ್ಯೆ ಐದು ಶತಮಾನಗಳ ಹೋರಾಟ. ಲಕ್ಷಾಂತರ ಜನ ರಾಮಮಂದಿರ ಪುನರ್ ನಿರ್ಮಾಣಕ್ಕಾಗಿ ಜೀವ ತೆತ್ತಿದ್ದಾರೆ. ಕೋಟ್ಯಂತರ ಜನರ ಭಾವನೆ ಬೆರೆಸಿ ಮಂದಿರ ನಿರ್ಮಾಣ ಆಗಿದೆ ಎಂದರು.
ರಾಮಮಂದಿರದ ನಿರ್ಮಾಣ ವಿರೋಧಿಗಳನ್ನು ಸೋಲಿಸಿ ಪರವಾಗಿದ್ದವರಿಗೆ ಮತ ಹಾಕಿ ಜನ ಅವರನ್ನು ಅಧಿಕಾರಕ್ಕೆ ತಂದಿದ್ದಾರೆ. ಕೆಲವರು ಹಣ ದುರುಪಯೋಗ ಮಾಡಿದ್ದಾರೆ. ಆರೋಪ ಬಂದ ತಕ್ಷಣ ಸರ್ಕಾರ ಎಸ್‍ಐಟಿ ರಚಿಸಲಾಗಿದೆ. ಎಂಟಕ್ಕೂ ಹೆಚ್ಚು ಜನರನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಕೋಟ್ಯಂತರ ಮೌಲ್ಯದ ಆಸ್ತಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಯಾವತ್ತೂ ಬಹಿರಂಗ ಸಮರ್ಥನೆ ಕೊಟ್ಟಿಲ್ಲ. ನಾಲ್ಕು ದಶಕಗಳಿಂದ ನಾನು ರಾಜಕೀಯದಲ್ಲಿದ್ದೇನೆ. ಇಷ್ಟು ದಿನವೂ ಕಾಂಗ್ರೆಸ್ ಮಂದಿರ ಆಗಬೇಕು ಎಂದು ಹೇಳಿಲ್ಲ. ಅವರು ಸಮರ್ಥನೆ ಮಾಡಿದ್ದರೆ ಇμÉ್ಟೂಂದು ಸಂಘರ್ಷ ಆಗುತ್ತಿರಲಿಲ್ಲ ಎಂದು ತಿಳಿಸಿದರು.
ಪ್ರಿಯಾಂಕ್ ಖರ್ಗೆ ಅವರೂ ಎರಡು ದಶಕಗಳಿಂದ ರಾಜಕೀಯದಲ್ಲಿದ್ದಾರೆ. ಅವರು ಒಂದು ದಿನವೂ ರಾಮಮಂದಿರ ನಿರ್ಮಾಣ ಆಗಬೇಕು ಎಂದು ಹೇಳಿಲ್ಲ. ಕಳಕಳಿ ವ್ಯಕ್ತಪಡಿಸಿಲ್ಲ. ಅವರ ತಂದೆಯೂ ಬೆಂಬಲಿಸಿಲ್ಲ. ನಾವು ಕರಸೇವೆಗೆ ಹೋದಾಗ ಜೈಲಿಗೆ ಕಳಿಸಿದರು. ಜೈ ಶ್ರೀರಾಮ್ ಎಂದು ಕೂಗಿದ್ದೇ ಅಪರಾಧ ಎಂದು ಹೇಳಿದರು ಎಂದರು.
ರಾಮಮಂದಿರ ಹುಂಡಿ ಹಣದ ಬಗ್ಗೆ ಮಾತನಾಡುವವರು, ಗೃಹಲಕ್ಷ್ಮಿ ಹಣ ಲೂಟಿ ಹೊಡೆದವರ ಬಗ್ಗೆಯೂ ತನಿಖೆ ಮಾಡಬೇಕು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲಹೆ ನೀಡುವವರು ಗೃಹಲಕ್ಷ್ಮಿ ಅಕ್ರಮದ ಬಗ್ಗೆಯೂ ತನಿಖೆ ಮಾಡಲು ಸಲಹೆ ನೀಡಲಿ ಎಂದರು.
ಟ್ವಿಟರ್ ಮಾತ್ರ ಸಕ್ರಿಯವಾಗಿದೆ..
ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಟ್ವಿಟರ್‍ನಲ್ಲಿ ಮಾತ್ರ ಸಕ್ರಿಯವಾಗಿದ್ದಾರೆ. ಅವರು ಲವ್ ಜಿಹಾದ್ ಬಗ್ಗೆ ಮಾತೇ ಆಡಲ್ಲ. ನರೇಗಲ್‍ನ ಸಣ್ಣ ಕಾರಣಕ್ಕೆ ಗಲಭೆ ಆಗಿದೆ. ಅದರ ಆರೋಪಿಗಳನ್ನು ಬಂಧಿಸಿಲ್ಲ. ಹಿಂದೂ ಕಾರ್ಯಕರ್ತರಾದರೆ ಬಹಳ ಪೌರುಷ ತೋರಿಸುತ್ತೀರಿ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ಅವರನ್ನು ರಾಜಕೀಯ ಹೇಳಿಕೆ ನೀಡಲು ಗೃಹ ಮಂತ್ರಿ ಮಾಡಿಲ್ಲ. ರಾಜ್ಯದಲ್ಲಿ ಡ್ರಗ್ಸ್ ಬಳಕೆ, ಅತ್ಯಾಚಾರ, ಬೆಟ್ಟಿಂಗ್, ಕೊಲೆ ಆದರೂ ಭಯ ಇಲ್ಲದೇ ಆರೋಪಿಗಳು ಇದ್ದಾರೆ. ಇವೂ ನಿಮ್ಮ ವ್ಯಾಪ್ತಿಗೆ ಬರುತ್ತವೆ. ಇದರ ಬಗ್ಗೆಯೂ ಗೃಹ ಸಚಿವರು ಉತ್ತರ ಕೊಡಲಿ ಎಂದು ಆಗ್ರಹಿಸಿದರು.
