ಕಲಬುರಗಿ: ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಅಫಜಲಪುರ ತಾಲ್ಲೂಕಿನ ಮಾಜಿ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಹಾಗೂ ಮಧ್ಯವರ್ತಿ ಶಿವಾನಂದ ಜಮಖಂಡಿ ಅವರಿಗೆ ಕಲಬುರಗಿಯ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 20 ಸಾವಿರ ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ನ್ಯಾಯಾಧೀಶರಾದ ಜಿ.ಎಲ್. ಲಕ್ಷ್ಮೀನಾರಾಯಣ ಅವರು ಸುದೀರ್ಘ ವಿಚಾರಣೆ ನಡೆಸಿ, ಆರೋಪಿಗಳ ಮೇಲಿನ ಭ್ರಷ್ಟಾಚಾರದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಕಠಿಣ ಶಿಕ್ಷೆ ಪ್ರಕಟಿಸಿದ್ದಾರೆ. ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಕರಣದ ಹಿನ್ನೆಲೆ: ನೆಪ ಒಡ್ಡಿ ಲಂಚಕ್ಕೆ ಬೇಡಿಕೆ
2017ರಲ್ಲಿ ಅಫಜಲಪುರ ತಾಲ್ಲೂಕಿನ ಕರಜಗಿ ನಾಡ ಕಚೇರಿಯಲ್ಲಿ ಶಿವಲಿಂಗಯ್ಯ ಬಸಯ್ಯ ಮಠ ಎಂಬುವವರು ಗುತ್ತಿಗೆ ಆಧಾರದ ಮೇಲೆ ಡೇಟಾ ಎಂಟ್ರಿ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸಾರ್ವಜನಿಕರಿಂದ ಶಿವಲಿಂಗಯ್ಯ ಅವರು ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಅಂದಿನ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಅವರು ವಿಚಾರಣೆ ನಡೆಸಿದ್ದರು.
ಈ ಪ್ರಕರಣದಿಂದ ತಮ್ಮನ್ನು ಪಾರು ಮಾಡುವಂತೆ ಶಿವಲಿಂಗಯ್ಯ ಕೋರಿದಾಗ, ತಹಶೀಲ್ದಾರ್ ಶಶಿಕಲಾ ಅವರು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಹಣವನ್ನು ಶಿವಾನಂದ ಜಮಖಂಡಿ ಎಂಬುವವರಿಗೆ ತಲುಪಿಸಬೇಕು, ಇಲ್ಲದಿದ್ದರೆ ಕೆಲಸದಿಂದ ವಜಾಗೊಳಿಸಿ ಬೇರೆಯವರನ್ನು ನೇಮಿಸಿಕೊಳ್ಳಲಾಗುವುದು ಎಂದು ಬೆದರಿಕೆ ಹಾಕಿದ್ದರು.
ಲೋಕಾಯುಕ್ತರ ‘ರೆಡ್‌ಹ್ಯಾಂಡ್’ ಕಾರ್ಯಾಚರಣೆ
ಲಂಚ ನೀಡಲು ಇಷ್ಟವಿಲ್ಲದ ಶಿವಲಿಂಗಯ್ಯ ಅವರು ಈ ಬಗ್ಗೆ ಲೋಕಾಯುಕ್ತ ಪೊಲೀಸರ ಮೊರೆ ಹೋಗಿದ್ದರು. ಲೋಕಾಯುಕ್ತ ಅಧಿಕಾರಿಗಳ ಮಾರ್ಗದರ್ಶನದಂತೆ 2017ರ ಆಗಸ್ಟ್ 31ರಂದು ಶಿವಲಿಂಗಯ್ಯ ಅವರಿಂದ ಲಂಚದ ಹಣವನ್ನು ಪಡೆದ ಶಿವಾನಂದ ಜಮಖಂಡಿ, ಅದನ್ನು ತಹಶೀಲ್ದಾರ್ ಶಶಿಕಲಾ ಅವರಿಗೆ ತಲುಪಿಸಲು ಮುಂದಾಗಿದ್ದನು.
ಈ ವೇಳೆ ಹೊಂಚು ಹಾಕಿದ್ದ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಇಬ್ಬರನ್ನೂ ಲಂಚದ ಹಣದ ಸಮೇತ ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದರು. ಅಂದಿನ ಲೋಕಾಯುಕ್ತ ಡಿವೈಎಸ್‌ಪಿ ಸಂತೋಷ ಬನ್ನಟ್ಟಿ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಸರ್ಕಾರದಿಂದ ಕಡ್ಡಾಯ ನಿವೃತ್ತಿ ಶಿಕ್ಷೆ
ಲೋಕಾಯುಕ್ತ ಬಲೆಗೆ ಬಿದ್ದ ನಂತರವೂ ಸೇವೆಯಲ್ಲಿದ್ದ ಶಶಿಕಲಾ ಪಾದಗಟ್ಟಿ ಅವರು ಪ್ರಸ್ತುತ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಈ ಗಂಭೀರ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಕಳೆದೆರಡು ವಾರಗಳ ಹಿಂದೆಯಷ್ಟೇ ರಾಜ್ಯ ಸರ್ಕಾರ ಅವರಿಗೆ ‘ಕಡ್ಡಾಯ ನಿವೃತ್ತಿ’ (Compulsory Retirement) ನೀಡಿ, ಸೇವೆಯಿಂದ ಮುಕ್ತಿಗೊಳಿಸಿ ಆದೇಶ ಹೊರಡಿಸಿತ್ತು.
ತನಿಖೆ ಮತ್ತು ಸರ್ಕಾರದ ಪರ ಪ್ರಬಲ ವಾದ
ಈ ಹಗರಣದ ಸಮಗ್ರ ತನಿಖೆ ನಡೆಸಿದ್ದ ಲೋಕಾಯುಕ್ತ ತನಿಖಾಧಿಕಾರಿ ಕೃಷ್ಣಪ್ಪ ಕಲ್ಲದೇವರ ಅವರು ನ್ಯಾಯಾಲಯಕ್ಕೆ ಸಾಕ್ಷ್ಯಾಧಾರಗಳ ಸಮೇತ ದೋಷಾರೋಪಣ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು.
ವಿಚಾರಣೆ ವೇಳೆ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ (SPP) ಅಶೋಕ ಎಸ್. ಚಾಂದಕವಠ ಅವರು ಪ್ರಬಲ ವಾದ ಮಂಡಿಸಿ, ಭ್ರಷ್ಟ ಅಧಿಕಾರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕೋರಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಲೋಕಾಯುಕ್ತರು ಒದಗಿಸಿದ ಸಾಕ್ಷ್ಯಗಳನ್ನು ಪುರಸ್ಕರಿಸಿ ಇಬ್ಬರನ್ನೂ ಅಪರಾಧಿಗಳು ಎಂದು ಘೋಷಿಸಿ ಜೈಲು ಶಿಕ್ಷೆಯ ತೀರ್ಪು ನೀಡಿದೆ. ಈ ತೀರ್ಪು ಭ್ರಷ್ಟ ಅಧಿಕಾರಿಗಳ ವಲಯದಲ್ಲಿ ನಡುಕ ಹುಟ್ಟಿಸಿದೆ.
