ಕಾರವಾರ: ಅಕ್ರಮ ಗೋವಾ ಮದ್ಯ ಸಾಗಾಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕದ್ರಾ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಸಂತೋಷ್ ಲಮಾಣಿ ಅವರನ್ನು ಸೇವೆಯಿಂದ ವಜಾಗೊಳಿಸಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ದೀಪನ್ ಆದೇಶ ಹೊರಡಿಸಿದ್ದಾರೆ.
ಸಂತೋಷ್ ಲಮಾಣಿ ಅವರು 2024ರ ಜೂನ್‌ನಲ್ಲಿ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡಿ ಗೋಕರ್ಣದ ಓಂ ಬೀಚ್ ಪ್ರದೇಶದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಗೋಕರ್ಣ ಪೊಲೀಸರು ದಾಳಿ ನಡೆಸಿ ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದರು. ಆ ವೇಳೆ ಅವರಿಂದ ಸುಮಾರು ₹50 ಸಾವಿರಕ್ಕೂ ಅಧಿಕ ಮೌಲ್ಯದ ಗೋವಾ ಮದ್ಯ ಹಾಗೂ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ನ್ಯಾಯಾಂಗ ಬಂಧನಕ್ಕೊಳಗಾದ ಅವರನ್ನು ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತುಗೊಳಿಸಿದ್ದರು.
ಈ ಪ್ರಕರಣದ ಬಳಿಕ ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಲಾಗಿತ್ತು. ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಸಂತೋಷ್ ಲಮಾಣಿ ವಿರುದ್ಧದ ಆರೋಪಗಳು ದೃಢಪಟ್ಟಿದ್ದು, ತನಿಖಾ ವರದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಲಾಗಿತ್ತು. ವರದಿಯ ಆಧಾರದ ಮೇಲೆ ಇಲಾಖಾ ಶಿಸ್ತು ಕ್ರಮವಾಗಿ ಅವರನ್ನು ಪೊಲೀಸ್ ಸೇವೆಯಿಂದ ವಜಾಗೊಳಿಸಲಾಗಿದೆ.
ಸಂತೋಷ್ ಲಮಾಣಿ ಈ ಹಿಂದೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಬಳಿಕ ಕಾರವಾರ ತಾಲೂಕಿನ ಚಿತ್ತಾಕುಲ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದರು. ಕರ್ನಾಟಕ-ಗೋವಾ ಗಡಿಯ ಮಾಜಾಳಿ ಚೆಕ್‌ಪೋಸ್ಟ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ವೇಳೆ ಅಕ್ರಮ ಮದ್ಯ ಸಾಗಾಟದ ಬಗ್ಗೆ ಮಾಹಿತಿ ಪಡೆದು ಬಳಿಕ ಸ್ವತಃ ಈ ದಂಧೆಯಲ್ಲಿ ತೊಡಗಿದ್ದರೆಂಬ ಆರೋಪ ಕೇಳಿಬಂದಿತ್ತು.
ಇದೇ ವೇಳೆ ಅಂಕೋಲಾ ಪೊಲೀಸ್ ಠಾಣೆಯಲ್ಲಿಯೂ ಅಕ್ರಮ ಮದ್ಯ ಸಾಗಾಟ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿದ್ದು, ತನಿಖೆ ನಡೆಸಲಾಗಿತ್ತು. ಅಮಾನತಿನಲ್ಲಿದ್ದ ಅವಧಿಯಲ್ಲಿಯೂ ಅಕ್ರಮ ಮದ್ಯ ಸಾಗಾಟ ಮುಂದುವರಿಸಿದ್ದರೆಂಬ ಆರೋಪವೂ ವ್ಯಕ್ತವಾಗಿತ್ತು.
ಪೊಲೀಸ್ ಸಿಬ್ಬಂದಿಯೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಯಾವುದೇ ರೀತಿಯ ರಾಜಿ ಇಲ್ಲ ಎಂಬ ಸಂದೇಶವನ್ನು ಈ ಕ್ರಮದ ಮೂಲಕ ಇಲಾಖೆ ನೀಡಿದೆ. ಶಿಸ್ತಿನ ಇಲಾಖೆಯಾದ ಪೊಲೀಸ್ ಇಲಾಖೆಯಲ್ಲಿ ಅಕ್ರಮ ಚಟುವಟಿಕೆ ನಡೆಸುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ದೀಪನ್ ಅವರ ಈ ಆದೇಶ ನೀಡಿದಂತಾಗಿದೆ.
