Sunday, September 6, 2026
HomeUncategorizedಕಲೆ ಮತ್ತು ಸಾಹಿತ್ಯಅಮೆರಿಕದ ನೆಲದಲ್ಲಿ ಮೊಳಗಿದ ಕರುನಾಡಿನ ಡಿಂಡಿಮ: ಅಕ್ಕ ರಜತ ಮಹೋತ್ಸವ ವಿಶ್ವ ಕನ್ನಡ ಸಮ್ಮೇಳನಕ್ಕೆ ಭವ್ಯ...

ಅಮೆರಿಕದ ನೆಲದಲ್ಲಿ ಮೊಳಗಿದ ಕರುನಾಡಿನ ಡಿಂಡಿಮ: ಅಕ್ಕ ರಜತ ಮಹೋತ್ಸವ ವಿಶ್ವ ಕನ್ನಡ ಸಮ್ಮೇಳನಕ್ಕೆ ಭವ್ಯ ಚಾಲನೆ

ಫಿಲಡೆಲ್ಫಿಯಾ, ಪೆನ್ಸಿಲ್ವೇನಿಯಾ: ಸಾಗರದಾಚೆಯ ಅಮೆರಿಕದ ನೆಲದಲ್ಲಿ ಕರ್ನಾಟಕದ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯ ವೈಭವ ಅನಾವರಣಗೊಂಡಿತು. ಫಿಲಡೆಲ್ಫಿಯಾದ ಪ್ರತಿಷ್ಠಿತ ಪೆನ್ಸಿಲ್ವೇನಿಯಾ ಕನ್ವೆನ್ಷನ್ ಸೆಂಟರ್‌ನಲ್ಲಿ ರಂಗುರಂಗಿನ ಕಲಾ ವೈಭವ ಮತ್ತು ಸಡಗರ-ಸಂಭ್ರಮದ ನಡುವೆ ‘ಅಕ್ಕ’ (Association of Kannada Kootas of America–AKKA) ರಜತ ಮಹೋತ್ಸವ ವಿಶ್ವ ಕನ್ನಡ ಸಮ್ಮೇಳನ–2026ಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು.

ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ್ ಎಸ್. ತಂಗಡಗಿ ಅವರು ದೀಪ ಬೆಳಗಿಸುವ ಮೂಲಕ ಸಮ್ಮೇಳನಕ್ಕೆ ಅಧಿಕೃತ ಚಾಲನೆ ನೀಡಿದರು. ವಿಶ್ವದ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಕನ್ನಡಿಗರ ಹರ್ಷೋದ್ಗಾರ, ಜಯಘೋಷಗಳ ನಡುವೆ ಅಮೆರಿಕದ ನೆಲದಲ್ಲಿ ಕನ್ನಡದ ಕಹಳೆ ಮೊಳಗಿತು.

ಧಾರ್ಮಿಕ ಸಾನಿಧ್ಯ, ರಾಜಕೀಯ ಗಣ್ಯರ ಉಪಸ್ಥಿತಿ

ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಧ್ಯಾತ್ಮಿಕ ಸಾನಿಧ್ಯವೂ ವಿಶೇಷ ಮೆರುಗು ನೀಡಿತು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಸಿರಿಗೆರೆ ತರಳಬಾಳು ಜಗದ್ಗುರು ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ದಿವ್ಯ ಸಾನಿಧ್ಯ ಕಾರ್ಯಕ್ರಮದ ಗರಿಮೆಯನ್ನು ಹೆಚ್ಚಿಸಿತು.

ವೇದಿಕೆಯಲ್ಲಿ ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ, ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಗಣಿಗ ರವಿಕುಮಾರ್, ಮಾಜಿ ಸಚಿವ ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ ಹಾಗೂ ಬಸನಗೌಡ ಬಾದರ್ಲಿ, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ. ಶರವಣ ಸೇರಿದಂತೆ ಹಲವು ಗಣ್ಯರು ಹಾಗೂ ಅಕ್ಕ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅಮೆರಿಕದಲ್ಲಿ ಅನಾವರಣಗೊಂಡ ಕನ್ನಡದ ಸಾಂಸ್ಕೃತಿಕ ವೈಭವ

ವಿದೇಶದಲ್ಲಿ ನೆಲೆಸಿದ್ದರೂ ತಾಯ್ನಾಡಿನ ನುಡಿ, ಸಂಸ್ಕೃತಿ ಮತ್ತು ಪರಂಪರೆಯನ್ನು ಜೀವಂತವಾಗಿರಿಸಿಕೊಂಡಿರುವ ಕನ್ನಡಿಗರ ಪ್ರೀತಿಯ ಪ್ರತೀಕವಾಗಿ ಅಕ್ಕ ರಜತ ಮಹೋತ್ಸವ ವಿಶ್ವ ಕನ್ನಡ ಸಮ್ಮೇಳನ ಮೂಡಿಬಂದಿದೆ.

ಸಮ್ಮೇಳನದ ಮೊದಲ ದಿನವೇ ಕನ್ನಡಿಗರು ಸಾಂಪ್ರದಾಯಿಕ ಉಡುಗೆ-ತೊಡುಗೆಗಳಲ್ಲಿ ಕಂಗೊಳಿಸಿದರು. ಕರ್ನಾಟಕದ ಜನಪದ ಕಲೆಗಳು, ಯಕ್ಷಗಾನ, ಭರತನಾಟ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ಅಮೆರಿಕದ ಕನ್ನಡಿಗರಲ್ಲಿ ತವರೂರಿನ ನೆನಪುಗಳನ್ನು ಮರುಕಳಿಸಿದವು.

ಮುಂದಿನ ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ಸಾಹಿತ್ಯಕ ಗೋಷ್ಠಿಗಳು, ಉದ್ಯಮಿಗಳ ಸಮಾವೇಶ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಚಟುವಟಿಕೆಗಳು ನಡೆಯಲಿದ್ದು, ಅಮೆರಿಕದ ನೆಲದಲ್ಲಿ ಕರುನಾಡಿನ ಭಾಷೆ, ಕಲೆ ಮತ್ತು ಸಂಸ್ಕೃತಿಯ ಸೊಗಡನ್ನು ಮತ್ತಷ್ಟು ಪಸರಿಸಲಿವೆ.

ಹೆಚ್ಚಿನ ಸುದ್ದಿ