Tuesday, November 24, 2026
Homeದೇಶಮೀನು ಹಿಟ್ಟು, ಮೀನು ಎಣ್ಣೆ ರಫ್ತು ನಿರ್ಬಂಧಕ್ಕೆ ವಿರೋಧ: ಕರಾವಳಿ ಬದುಕಿಗೆ ಹೊಡೆತದ ಆತಂಕ

ಮೀನು ಹಿಟ್ಟು, ಮೀನು ಎಣ್ಣೆ ರಫ್ತು ನಿರ್ಬಂಧಕ್ಕೆ ವಿರೋಧ: ಕರಾವಳಿ ಬದುಕಿಗೆ ಹೊಡೆತದ ಆತಂಕ

ಪ್ರಮೋದ್ ಮಧ್ವರಾಜ್‌: ನೀತಿ ಬದಲಾವಣೆಗೂ ಮುನ್ನ ಮೀನುಗಾರರ ಹಿತ ಪರಿಗಣನೆ ಅಗತ್ಯ

ಬೆಂಗಳೂರು: ಮೀನು ಹಿಟ್ಟು (Fish Meal) ಮತ್ತು ಮೀನು ಎಣ್ಣೆ (Fish Oil) ರಫ್ತಿಗೆ ಪ್ರಸ್ತಾಪಿಸಿರುವ ನಿರ್ಬಂಧ ಕ್ರಮವು ದೇಶದ ಕರಾವಳಿ ಭಾಗದ ಲಕ್ಷಾಂತರ ಮೀನುಗಾರರ ಜೀವನೋಪಾಯದ ಮೇಲೆ ಪರಿಣಾಮ ಬೀರುವ ಆತಂಕವನ್ನು ಹುಟ್ಟುಹಾಕಿದೆ ಎಂದು ಮೀನುಗಾರರ ಸಂಘಟನೆಗಳು ಹಾಗೂ ಉದ್ಯಮ ಪ್ರತಿನಿಧಿಗಳು ಎಚ್ಚರಿಸಿದ್ದಾರೆ.

ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಇಂಡಿಯಾ ಫಿಶ್‌ಮೀಲ್ ಮತ್ತು ಫಿಶ್‌ಆಯಿಲ್ ಎಕ್ಸ್‌ಪೋರ್ಟರ್ಸ್‌ ಅಂಡ್ ಮ್ಯಾನುಫ್ಯಾಕ್ಚರರ್ಸ್‌ ಅಸೋಸಿಯೇಷನ್‌ (IFAFEA) ಹಾಗೂ ನ್ಯಾಷನಲ್ ಫಿಶರ್‌ಮೆನ್ ಅಸೋಸಿಯೇಷನ್‌ ಆಫ್ ಇಂಡಿಯಾ (NFAI) ಪ್ರತಿನಿಧಿಗಳು ಮಾತನಾಡಿ, ಮೀನುಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ನೀತಿ ನಿರ್ಧಾರ ಕೈಗೊಳ್ಳುವ ಮುನ್ನ ಮೀನುಗಾರರು, ಉದ್ಯಮಿಗಳು ಹಾಗೂ ತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ ಮತ್ತು ತಮಿಳುನಾಡು ಸೇರಿದಂತೆ ಹಲವು ಕರಾವಳಿ ರಾಜ್ಯಗಳ ಮೀನುಗಾರರ ಮುಖಂಡರು, ಮೀನು ಹಿಟ್ಟು ತಯಾರಕರು ಹಾಗೂ ರಫ್ತುದಾರರು ಭಾಗವಹಿಸಿದ್ದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಮೀನುಗಾರಿಕಾ ಕ್ಷೇತ್ರವು ಕೇವಲ ಒಂದು ಉದ್ಯಮವಲ್ಲ; ಅದು ಕರಾವಳಿಯ ಲಕ್ಷಾಂತರ ಕುಟುಂಬಗಳ ಬದುಕಿನ ಆಧಾರವಾಗಿದೆ ಎಂದು ಹೇಳಿದರು.

“ರಫ್ತು ನೀತಿಯಲ್ಲಿ ಯಾವುದೇ ಬದಲಾವಣೆ ಮಾಡುವ ಮುನ್ನ ಮೀನುಗಾರರ ಹಿತಾಸಕ್ತಿ ಗಮನದಲ್ಲಿರಬೇಕು. ಅವರ ಜೀವನೋಪಾಯ, ಆದಾಯ ಮತ್ತು ಆರ್ಥಿಕ ಭದ್ರತೆ ಪ್ರಮುಖವಾಗಿರಬೇಕು” ಎಂದು ಅವರು ಹೇಳಿದರು.

ಮೀನು ಹಿಟ್ಟು ಮತ್ತು ಮೀನು ಎಣ್ಣೆ ಕೈಗಾರಿಕೆಗಳು ಮೀನುಗಾರರು ತರುವ ಮೀನಿಗೆ ಪ್ರಮುಖ ಮಾರುಕಟ್ಟೆ ಒದಗಿಸುತ್ತಿವೆ. ಈ ಕ್ಷೇತ್ರದಲ್ಲಿ ವ್ಯತ್ಯಯ ಉಂಟಾದರೆ ಮೀನು ಖರೀದಿ ದರ ಕುಸಿದು ನೇರವಾಗಿ ಮೀನುಗಾರರ ಆದಾಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

“ಈಗಾಗಲೇ ಮೀನುಗಾರರು ಹೆಚ್ಚುತ್ತಿರುವ ಡೀಸೆಲ್ ಬೆಲೆ, ಕಾರ್ಮಿಕ ವೆಚ್ಚ ಹಾಗೂ ದೋಣಿ ನಿರ್ವಹಣಾ ವೆಚ್ಚಗಳಿಂದ ಸಂಕಷ್ಟದಲ್ಲಿದ್ದಾರೆ. ನೀತಿ ಬದಲಾವಣೆಯಿಂದ ಮೀನು ಬೆಲೆ ಕುಸಿದರೆ ಅವರ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ” ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.

ಮೀನುಗಾರರ ಸಂಘಟನೆಗಳ ಪ್ರಕಾರ, ದೇಶದಲ್ಲಿ ಮೀನುಗಾರರು ಹಿಡಿಯುವ ಒಟ್ಟು ಮೀನಿನ ಸುಮಾರು 80 ಪ್ರತಿಶತವನ್ನು ಮೀನು ಹಿಟ್ಟು ಮತ್ತು ಮೀನು ಎಣ್ಣೆ ತಯಾರಿಕಾ ಘಟಕಗಳು ಖರೀದಿಸುತ್ತಿವೆ. ಹೀಗಾಗಿ ಮೀನುಗಾರಿಕೆ ಮತ್ತು ಸಂಸ್ಕರಣಾ ಉದ್ಯಮ ಪರಸ್ಪರ ಅವಲಂಬಿತವಾಗಿವೆ ಎಂದು ಹೇಳಿದರು.

ರಫ್ತು ನಿರ್ಬಂಧವನ್ನು ಯಾವುದೇ ಸಮಾಲೋಚನೆ ಇಲ್ಲದೆ ಜಾರಿಗೊಳಿಸಿದರೆ ಮೀನುಗಾರರು, ದೋಣಿ ಮಾಲೀಕರು, ಕಾರ್ಮಿಕರು, ವ್ಯಾಪಾರಿಗಳು ಸೇರಿದಂತೆ ಕರಾವಳಿ ಆರ್ಥಿಕತೆಯ ಮೇಲೆ ಅವಲಂಬಿತವಾಗಿರುವ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಸಂಘಟನೆಗಳು ಎಚ್ಚರಿಸಿದವು.

ಸರ್ಕಾರವು ವೈಜ್ಞಾನಿಕ ಅಧ್ಯಯನ, ದೇಶೀಯ ಬೇಡಿಕೆ-ಪೂರೈಕೆ ಸ್ಥಿತಿ ಹಾಗೂ ಮಾರುಕಟ್ಟೆ ವಾಸ್ತವಾಂಶಗಳನ್ನು ಆಧರಿಸಿ ನಿರ್ಧಾರ ಕೈಗೊಳ್ಳಬೇಕು. ಆತುರದ ಕ್ರಮಗಳಿಂದ ದೂರವಿರಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹಾಗೂ ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಪ್ರಸ್ತಾವಿತ ನಿರ್ಬಂಧ ಕ್ರಮವನ್ನು ಮರುಪರಿಶೀಲಿಸುವಂತೆ ಕೋರಲಾಗಿದೆ ಎಂದು ಸಂಘಟನೆಗಳು ತಿಳಿಸಿವೆ.

ಮೀನುಗಾರರ ಅಭಿಪ್ರಾಯ ಪಡೆಯದೆ ಕೈಗೊಳ್ಳುವ ಯಾವುದೇ ನಿರ್ಧಾರವು ಕರಾವಳಿ ಆರ್ಥಿಕತೆಯಲ್ಲಿ ಅನಿಶ್ಚಿತತೆ ಉಂಟುಮಾಡಲಿದೆ. ಅಂತಿಮ ನಿರ್ಧಾರಕ್ಕೂ ಮುನ್ನ ಸರ್ಕಾರವು ಮೀನುಗಾರರ ಸಂಘಟನೆಗಳು ಮತ್ತು ಉದ್ಯಮ ಪ್ರತಿನಿಧಿಗಳೊಂದಿಗೆ ಸಮಗ್ರ ಚರ್ಚೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಹೆಚ್ಚಿನ ಸುದ್ದಿ