ಮೈಸೂರು / ಬೆಂಗಳೂರು,ಅಕ್ಟೋಬರ್ 12 :ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ ಅವರು ದಸರಾ ಪುಸ್ತಕ ಮೇಳದಲ್ಲಿ ವಿವಿಧ ಪುಸ್ತಕಗಳನ್ನು ವೀಕ್ಷಣೆ ಮಾಡಿದರು.
ನಗರದ ಭಾರತ್ ಸೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಮೈಸೂರು ದಸರಾ ಮಹೋತ್ಸವ-2026ರ ಅಂಗವಾಗಿ ಅ.11 ರಿಂದ 20ರವರೆಗೆ “ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು, ಸೋಮವಾರ ದಸರಾ ಪುಸ್ತಕ ಮೇಳದ ಮಳಿಗೆಗಳಿಗೆ ಭೇಟಿಕೊಟ್ಟ ಅವರು, ಹಲವಾರು ಪುಸ್ತಕಗಳನ್ನು ವೀಕ್ಷಣೆ ಮಾಡಿ, ಪುಸ್ತಕದಲ್ಲಿನ ಬರವಣಿಗೆಯನ್ನು ಕಣ್ಣಾಡಿಸಿದರು.
ಸುಮಾರು ಒಂದು ಗಂಟೆಗೂ ಅಧಿಕ ಸಮಯವನ್ನು ಪುಸ್ತಕ ಮೇಳದಲ್ಲಿ ಪುಸ್ತಕಗಳ ವೀಕ್ಷಣೆಯಲ್ಲಿ ಕೆಳೆ ಸ್ವಾಮೀಜಿ ಅವರು,ಕೆಲವು ಪುಸ್ತಕಗಳ ಹೆಸರು ಮತ್ತು ಲೇಖಕರ ಹಸರನ್ನು ಸ್ವತಃ ತಮ್ಮ ನೋಟ್ ಪುಸ್ತಕದಲ್ಲಿ ಬರೆದುಕೊಂಡರು. ಸ್ವಾಮೀಜಿ ಅವರಿಗೆ ವಿವಿಧ ಪ್ರಕಾಶಕರು ತಮ್ಮ ಪ್ರಕಾಶನದಲ್ಲಿ ಮುದ್ರಣಗೊಂಡಿರುವ ಪುಸ್ತಕಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕಿ ಎಸ್.ನಿರ್ಮಲ ಮಠಾಪತಿ, ಕನ್ನಡ ಪುಸ್ತಕ ಪ್ರಾಧಿಕಾರ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್, ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಇತರರು ಇದ್ದರು.
