Tuesday, October 13, 2026
Homeಕ್ರೀಡೆಬೆಂಗಳೂರುದಲ್ಲಿ ಏಷ್ಯಾದ ಪ್ರತಿಷ್ಠಿತ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್

ಬೆಂಗಳೂರುದಲ್ಲಿ ಏಷ್ಯಾದ ಪ್ರತಿಷ್ಠಿತ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್

ಅಂತರರಾಷ್ಟ್ರೀಯ ತಂಡಗಳ ಆಗಮನದಿಂದ ಭಾರತೀಯ ಆಟಗಾರರಿಗೆ ಮಹತ್ವದ ವೇದಿಕೆ: ಡಾ. ಜಿ. ಪರಮೇಶ್ವರ

ಬೆಂಗಳೂರು: ಏಷ್ಯಾದ ಪ್ರತಿಷ್ಠಿತ ಮಹಿಳಾ ಕ್ಲಬ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್ ಬೆಂಗಳೂರಿನಲ್ಲಿ ನಡೆಯಲಿದ್ದು, ಇದು ಭಾರತದ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆಯ ಕ್ಷಣವಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಕ್ಟೋಬರ್ 20ರಿಂದ 25ರವರೆಗೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಚೈನೀಸ್ ತೈಪೆ, ಫಿಲಿಪೈನ್ಸ್ ಹಾಗೂ ಭಾರತ ಸೇರಿದಂತೆ ಆರು ಪ್ರಮುಖ ತಂಡಗಳು ಭಾಗವಹಿಸಲಿವೆ.

ಈ ಚಾಂಪಿಯನ್‌ಶಿಪ್ ಅನ್ನು ಬಾಸ್ಕೆಟ್‌ಬಾಲ್ ಫೆಡರೇಶನ್ ಆಫ್ ಇಂಡಿಯಾ (BFI) ಆಯೋಜಿಸುತ್ತಿದ್ದು, FIBA ಹಾಗೂ ಏಷ್ಯನ್ ಬಾಸ್ಕೆಟ್‌ಬಾಲ್ ಫೆಡರೇಶನ್ ಸಹಕಾರ ನೀಡುತ್ತಿವೆ.

ಜಪಾನ್‌ನ ಡೆನ್ಸೊ ಐರಿಸ್, ದಕ್ಷಿಣ ಕೊರಿಯಾದ ಚೆಂಗ್ಜು ಕೆಬಿ ಸ್ಟಾರ್ಸ್, ಚೀನಾದ ಸಿಚುವಾನ್ ಯುವಾಂಡಾ ಮೀಲೆ, ಚೈನೀಸ್ ತೈಪೆಯ ಕ್ಯಾಥೆ ಲೈಫ್ ಟೈಗರ್ಸ್, ಫಿಲಿಪೈನ್ಸ್‌ನ ಅಕಾರಿ ಸ್ಪಾರ್ಕ್ಸ್ ಹಾಗೂ ಭಾರತದ ಪರವಾಗಿ ಇಂಡಿಯನ್ ರೈಲ್ವೇಸ್ ತಂಡಗಳು ಕಣಕ್ಕಿಳಿಯಲಿವೆ.

“ಬೆಂಗಳೂರುದಲ್ಲಿ ಇಂತಹ ಪ್ರತಿಷ್ಠಿತ ಅಂತರರಾಷ್ಟ್ರೀಯ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್ ನಡೆಯುತ್ತಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯ. ಇದು ನಮ್ಮ ಭಾರತೀಯ ಆಟಗಾರರಿಗೆ ವಿಶ್ವಮಟ್ಟದ ಆಟಗಾರರೊಂದಿಗೆ ಸ್ಪರ್ಧಿಸುವ ಹಾಗೂ ಅನುಭವ ಪಡೆಯುವ ಉತ್ತಮ ಅವಕಾಶವನ್ನು ಕಲ್ಪಿಸಲಿದೆ” ಎಂದು ಡಾ. ಜಿ. ಪರಮೇಶ್ವರ ಹೇಳಿದರು.

ಈ ಟೂರ್ನಿಯನ್ನು ಬೆಂಗಳೂರಿನಲ್ಲಿ ಆಯೋಜಿಸಲು ಅವಕಾಶ ದೊರಕುವಲ್ಲಿ ಏಷ್ಯನ್ ಬಾಸ್ಕೆಟ್‌ಬಾಲ್ ಫೆಡರೇಶನ್ ಅಧ್ಯಕ್ಷ ಡಾ. ಕೆ. ಗೋವಿಂದರಾಜ್ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಶ್ಲಾಘಿಸಿದರು. ಅವರ ಪ್ರಯತ್ನದಿಂದ ಅಂತರರಾಷ್ಟ್ರೀಯ ಮಟ್ಟದ ಈ ಕ್ರೀಡಾಕೂಟ ಕರ್ನಾಟಕದ ರಾಜಧಾನಿಗೆ ಬಂದಿದೆ ಎಂದು ಹೇಳಿದರು.

ಪ್ರತಿ ತಂಡದಲ್ಲೂ ಅನುಭವಿ ಅಂತರರಾಷ್ಟ್ರೀಯ ಆಟಗಾರ್ತಿಯರು ಭಾಗವಹಿಸಲಿದ್ದು, ಮಹಿಳಾ ಬಾಸ್ಕೆಟ್‌ಬಾಲ್ ಬೆಳವಣಿಗೆಗೆ ಈ ಚಾಂಪಿಯನ್‌ಶಿಪ್ ಹೊಸ ದಿಕ್ಕು ನೀಡಲಿದೆ.

ಪ್ರತಿದಿನ ಪಂದ್ಯಗಳು ನಡೆಯಲಿದ್ದು, ದೇಶದ ಕ್ರೀಡಾಭಿಮಾನಿಗಳಿಗೆ ವಿಶ್ವಮಟ್ಟದ ಮಹಿಳಾ ಬಾಸ್ಕೆಟ್‌ಬಾಲ್ ವೀಕ್ಷಿಸುವ ಅಪರೂಪದ ಅವಕಾಶ ದೊರೆಯಲಿದೆ. ಈ ಮೂಲಕ ಬೆಂಗಳೂರನ್ನು ಅಂತರರಾಷ್ಟ್ರೀಯ ಕ್ರೀಡಾ ನಕ್ಷೆಯಲ್ಲಿ ಮತ್ತಷ್ಟು ಗುರುತಿಸುವಂತಾಗಿದೆ.

ಹೆಚ್ಚಿನ ಸುದ್ದಿ