Thursday, May 28, 2026
Homeಜಿಲ್ಲಾ ಸುದ್ದಿಗಳುಬಡವರ ಪಿಂಚಣಿ ಅನ್ಯಾಯ ಪ್ರಶ್ನಿಸಿದ ‘ಗ್ರಾಮ ಒನ್’ ಆಪರೇಟರ್‌ಗೆ ಜೀವ ಬೆದರಿಕೆ: ಉಪ ತಹಸೀಲ್ದಾರ್ ದರ್ಪ!

ಬಡವರ ಪಿಂಚಣಿ ಅನ್ಯಾಯ ಪ್ರಶ್ನಿಸಿದ ‘ಗ್ರಾಮ ಒನ್’ ಆಪರೇಟರ್‌ಗೆ ಜೀವ ಬೆದರಿಕೆ: ಉಪ ತಹಸೀಲ್ದಾರ್ ದರ್ಪ!

“ನಿನ್ನ ಖಲಾಸಾ ಮಾಡ್ತೀನಿ, ಅಟ್ರಾಸಿಟಿ ಕೇಸ್ ಹಾಕ್ತೀನಿ” ಎಂದು ಧಮಕಿ; ಯಾದಗಿರಿಯಲ್ಲಿ ಕಂದಾಯ ಅಧಿಕಾರಿಯ ಅತಿರೇಕ; ಡಿಸಿಗೆ ದೂರು ನೀಡಿದ್ದೇ ತಪ್ಪಾಯಿತೇ?

ಯಾದಗಿರಿ:ಬಡವರು ಮತ್ತು ಅರ್ಹ ಫಲಾನುಭವಿಗಳ ಸಾಮಾಜಿಕ ಭದ್ರತಾ ಪಿಂಚಣಿ ಅರ್ಜಿಗಳನ್ನು ವಿನಾಕಾರಣ ತಿರಸ್ಕರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಗ್ರಾಮ ಒನ್ ಕೇಂದ್ರದ ಆಪರೇಟರ್‌ಗೆ ಉಪ ತಹಸೀಲ್ದಾರರೊಬ್ಬರು ಜೀವ ಬೆದರಿಕೆ ಹಾಗೂ ಅಟ್ರಾಸಿಟಿ ಕೇಸ್ ದಾಖಲಿಸುವ ಬೆದರಿಕೆ ಹಾಕಿದ್ದಾರೆ ಎನ್ನಲಾದ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಈ ಘಟನೆಯು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರಿ ಸೇವಾ ಕೇಂದ್ರಗಳ ನಿರ್ವಹಣಾ ಸಿಬ್ಬಂದಿಯ ಸುರಕ್ಷತೆಯ ಬಗ್ಗೆ ದೊಡ್ಡ ಆತಂಕ ಮೂಡಿಸಿದೆ.

ಪ್ರಕರಣದ ಹಿನ್ನೆಲೆ:
ಜಿಲ್ಲೆಯ ಹಲವಾರು ಅರ್ಹ ವೃದ್ಧರು ಮತ್ತು ಅಸಹಾಯಕರು ಇಂದಿರಾ ಗಾಂಧಿ ವೃದ್ಧಾಪ್ಯ ವೇತನ ಹಾಗೂ ಇತರೆ ಸಾಮಾಜಿಕ ಭದ್ರತಾ ಪಿಂಚಣಿಗಳಿಗಾಗಿ ಗ್ರಾಮ ಒನ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಿದ್ದರು. ಆದರೆ, ಕಂದಾಯ ಇಲಾಖೆಯ ಅಧಿಕಾರಿಗಳು ಈ ಅರ್ಜಿಗಳನ್ನು ಯಾವುದೇ ಸೂಕ್ತ ಕಾರಣ ನೀಡದೆ ಅನ್ಯಾಯವಾಗಿ ರಿಜೆಕ್ಟ್ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.
ಇದರಿಂದ ಬೇಸತ್ತ ಗ್ರಾಮ ಒನ್ ಆಪರೇಟರ್ ಸಿದ್ದೂ ಪೂಜಾರಿ, ಫಲಾನುಭವಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಕೋರಿ ನೇರವಾಗಿ ಜಿಲ್ಲಾಧಿಕಾರಿಗಳ (DC) ಗಮನಕ್ಕೆ ತಂದು ದೂರು ನೀಡಿದ್ದರು. ಇದು ಕಂದಾಯ ಇಲಾಖೆಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ ಎನ್ನಲಾಗಿದೆ.

“ಖಲಾಸಾ ಮಾಡ್ತೀನಿ” ಎಂದು ಪ್ರಾಣ ಬೆದರಿಕೆ:
ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರಿಂದ ಕೆರಳಿದ ಸಂಬಂಧಪಟ್ಟ ಉಪ ತಹಸೀಲ್ದಾರರು, ಆಪರೇಟರ್‌ಗೆ ನೇರವಾಗಿ ಧಮಕಿ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. “ನಿನ್ನ ಖಲಾಸಾ ಮಾಡ್ತೀನಿ… ನೀ ಇರಬೇಕು ಇಲ್ಲಾ ನಾನು ಇರಬೇಕು…” ಎಂದು ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂದು ಸಂತ್ರಸ್ತ ಆಪರೇಟರ್ ಆರೋಪಿಸಿದ್ದಾರೆ.

ಅಟ್ರಾಸಿಟಿ ಕಾಯ್ದೆ ದುರುಪಯೋಗದ ಅಸ್ತ್ರ?
ಅಷ್ಟೇ ಅಲ್ಲದೆ, ತನ್ನ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ “ನಿನ್ನ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿ ಜೈಲಿಗೆ ಅಟ್ಟುತ್ತೇನೆ” ಎಂದು ಅಧಿಕಾರಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಶೋಷಿತ ಸಮುದಾಯಗಳ ರಕ್ಷಣೆಗಾಗಿ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯನ್ನು ವೈಯಕ್ತಿಕ ದ್ವೇಷ ಹಾಗೂ ಕರ್ತವ್ಯ ಲೋಪವನ್ನು ಮುಚ್ಚಿಡಲು ಅಧಿಕಾರಿಯೊಬ್ಬರು ಅಸ್ತ್ರವಾಗಿ ಬಳಸಿಕೊಳ್ಳಲು ಯತ್ನಿಸಿರುವುದು ಸಾರ್ವಜನಿಕರ ತೀವ್ರ ಖಂಡನೆಗೆ ಒಳಗಾಗಿದೆ.

ಸಾರ್ವಜನಿಕರ ಆತಂಕ ಮತ್ತು ಒತ್ತಾಯ:

“ಸರ್ಕಾರದ ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸುವ ಗ್ರಾಮ ಒನ್ ಕೇಂದ್ರಗಳ ಆಪರೇಟರ್‌ಗಳಿಗೇ ಇಂತಹ ಪರಿಸ್ಥಿತಿ ಬಂದರೆ, ಇನ್ನು ಸಾಮಾನ್ಯ ಜನರ ಕಥೆ ಏನು? ಇಂತಹ ಅಧಿಕಾರಿಗಳಿಂದಾಗಿ ವ್ಯವಸ್ಥೆಯ ಮೇಲಿನ ನಂಬಿಕೆ ಕುಸಿಯುತ್ತಿದೆ” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತಕ್ಷಣವೇ ಮಧ್ಯಪ್ರವೇಶಿಸಿ, ತನಿಖೆ ನಡೆಸಿ, ಬೆದರಿಕೆ ಹಾಕಿದ ಅಧಿಕಾರಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಿಸಬೇಕು ಎಂದು ಸಾರ್ವಜನಿಕರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ತೀವ್ರವಾಗಿ ಒತ್ತಾಯಿಸಿದ್ದಾರೆ.

ಹೆಚ್ಚಿನ ಸುದ್ದಿ