Wednesday, July 29, 2026
Homeಜಿಲ್ಲಾ ಸುದ್ದಿಗಳುಉತ್ತರ ಕನ್ನಡಮಹಜರ್ ಸ್ಥಗಿತ, ಮನೆ ಅನುದಾನ ಬಂದಿಲ್ಲ, ಬರದ ಬರೆ – ಮುಂಡಗೋಡ ಜನರ ಬದುಕು ಅತಂತ್ರ...

ಮಹಜರ್ ಸ್ಥಗಿತ, ಮನೆ ಅನುದಾನ ಬಂದಿಲ್ಲ, ಬರದ ಬರೆ – ಮುಂಡಗೋಡ ಜನರ ಬದುಕು ಅತಂತ್ರ…

ಅರಣ್ಯ ಹಕ್ಕು ಕಾಯ್ದೆ ಜಾರಿ ವಿಳಂಬ, ಮೂರು ವರ್ಷದಿಂದ ಮನೆಗಳಿಗೆ ಅನುದಾನ ಸ್ಥಗಿತ, ಏತ ನೀರಾವರಿ ಕಾಮಗಾರಿ ಕುಂಟು; ಸರ್ಕಾರಕ್ಕೆ ಸಮಗ್ರ ಮನವಿ

ಮುಂಡಗೋಡ, ಜುಲೈ 28 (ವಿಶೇಷ ವರದಿ): ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಅರಣ್ಯ ಹಕ್ಕು, ವಸತಿ, ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆಗಳು ಒಂದರ ಮೇಲೊಂದು ಸೇರ್ಪಡೆಯಾಗಿ ಸಾವಿರಾರು ಗ್ರಾಮೀಣ ಕುಟುಂಬಗಳ ಬದುಕನ್ನು ಸಂಕಷ್ಟಕ್ಕೆ ತಳ್ಳಿವೆ. ಅರಣ್ಯ ಭೂಮಿ ಮಹಜರ್ ಪ್ರಕ್ರಿಯೆ ವಿಳಂಬ, ಪ್ರಧಾನ ಮಂತ್ರಿ ಆವಾಸ ಹಾಗೂ ಆಶ್ರಯ ಯೋಜನೆಯ ಮನೆಗಳಿಗೆ ಮೂರು ವರ್ಷಗಳಿಂದ ಅನುದಾನ ಬಿಡುಗಡೆಯಾಗದಿರುವುದು, ಮಳೆಯ ಕೊರತೆಯಿಂದ ಬರದ ಆತಂಕ ಹಾಗೂ ಎಂಟು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಏತ ನೀರಾವರಿ ಯೋಜನೆ ವಿರುದ್ಧ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಮಹಜರ್ ಆಗದ ಕಾರಣ ಹಕ್ಕುಪತ್ರ ಕನಸೇ?

ಅರಣ್ಯ ಹಕ್ಕುಗಳ ಕಾಯ್ದೆ–2006ರ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅನೇಕ ಅರಣ್ಯ ಅವಲಂಬಿತ ರೈತರ ಮಹಜರ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಹಲವು ಕುಟುಂಬಗಳಿಗೆ ಅರಣ್ಯ ಹಕ್ಕುಪತ್ರ ದೊರೆಯದೆ ಕೃಷಿ ಸಾಲ, ನೀರಾವರಿ, ಮನೆ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಲಾಭ ಸಿಗುತ್ತಿಲ್ಲ.

ವರ್ಷಗಳಿಂದ ಒಂದೇ ಭೂಮಿಯಲ್ಲಿ ಕೃಷಿ ಮಾಡಿಕೊಂಡಿದ್ದರೂ ಕಾನೂನುಬದ್ಧ ಹಕ್ಕು ಸಿಗದಿರುವುದು ಅರಣ್ಯವಾಸಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಮಹಜರ್ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕೆಂದು ಆಗ್ರಹಿಸಲಾಗಿದೆ.

ಮನೆ ಕಟ್ಟಿದರೂ ಅನುದಾನವಿಲ್ಲ

ಪ್ರಧಾನ ಮಂತ್ರಿ ಆವಾಸ ಹಾಗೂ ಆಶ್ರಯ ಯೋಜನೆಯಡಿ ಮಂಜೂರಾದ ಸುಮಾರು 80% ಮನೆಗಳಿಗೆ 2023ರಿಂದ ಸರ್ಕಾರದ ಅನುದಾನ ಬಿಡುಗಡೆಯಾಗಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಬಡ ಕುಟುಂಬಗಳು ಸಾಲ ಮಾಡಿ ಮನೆ ನಿರ್ಮಾಣ ಆರಂಭಿಸಿದರೂ ಅನುದಾನ ಸಿಗದ ಕಾರಣ ಕಾಮಗಾರಿ ಅರ್ಧದಲ್ಲೇ ನಿಂತಿದೆ. ಅನೇಕ ಕುಟುಂಬಗಳು ಅಪೂರ್ಣ ಮನೆ ಬಿಟ್ಟು ಸಂಬಂಧಿಕರ ಮನೆ, ಜಗಲಿ ಹಾಗೂ ತಾತ್ಕಾಲಿಕ ಆಶ್ರಯಗಳಲ್ಲಿ ವಾಸಿಸುವ ದುಸ್ಥಿತಿ ಎದುರಿಸುತ್ತಿವೆ.

ಬರದ ಸಂಕಷ್ಟ: ರೈತರ ಬದುಕು ಸಂಕಟದಲ್ಲಿ

ಕಡಿಮೆ ಮಳೆಯಿಂದ ಬೆಳೆಗಳು ಒಣಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಿ ಬೆಳೆ ವಿಮೆ ಪರಿಹಾರ, ಜಾನುವಾರುಗಳಿಗೆ ಮೇವು, ಕುಡಿಯುವ ನೀರಿನ ವಿಶೇಷ ವ್ಯವಸ್ಥೆ ಹಾಗೂ ರೈತರಿಗೆ ತುರ್ತು ನೆರವು ಒದಗಿಸಬೇಕೆಂದು ಒತ್ತಾಯಿಸಲಾಗಿದೆ.

ಎಂಟು ವರ್ಷದಿಂದ ಏತ ನೀರಾವರಿ ಯೋಜನೆ ಅಪೂರ್ಣ

ಯರೈಬಲ್–ಸುಳಳ್ಳಿ ಭಾಗದ ಕೆರೆ ತುಂಬಿಸುವ ಏತ ನೀರಾವರಿ ಯೋಜನೆ ಎಂಟು ವರ್ಷಗಳಿಂದ ಪೂರ್ಣಗೊಳ್ಳದೆ ವಿಳಂಬವಾಗುತ್ತಿದೆ. ಯೋಜನೆ ಸಮಯಕ್ಕೆ ಪೂರ್ಣಗೊಂಡಿದ್ದರೆ ಈ ವರ್ಷದ ಬರ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಬಹುಮಟ್ಟಿಗೆ ತಡೆಯಬಹುದಾಗಿತ್ತು ಎಂದು  ತಾಲೂಕಿನ ರೈತರು ಸಮಾನ ಮನಸ್ಕ ಸಂಘಟನೆ ಗಳ ಮುಖಂಡರುಗಳು ಅಭಿಪ್ರಾಯಪಟ್ಟಿದ್ದಾರೆ.

ಜನಪ್ರತಿನಿಧಿಗಳು, ಸರ್ಕಾರ ತಕ್ಷಣ ಸ್ಪಂದಿಸಲಿ

ಈ ಎಲ್ಲ ಸಮಸ್ಯೆಗಳನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಿ ಮುಖ್ಯಮಂತ್ರಿ, ಸಂಬಂಧಿತ ಸಚಿವರು ಹಾಗೂ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಬೇಕು. ಅರಣ್ಯ ಭೂಮಿ ಮಹಜರ್ ಪೂರ್ಣಗೊಳಿಸಿ ಹಕ್ಕುಪತ್ರ ವಿತರಣೆ, ಮನೆಗಳ ಬಾಕಿ ಅನುದಾನ ಬಿಡುಗಡೆ, ಬರ ಪರಿಹಾರ ಘೋಷಣೆ ಮತ್ತು ಏತ ನೀರಾವರಿ ಯೋಜನೆ ಪೂರ್ಣಗೊಳಿಸುವ ಮೂಲಕ ಮುಂಡಗೋಡ ತಾಲೂಕಿನ ಬುಡಕಟ್ಟು, ಆದಿವಾಸಿ, ಅರಣ್ಯ ಅವಲಂಬಿತರು, ರೈತರು, ಕೃಷಿ ಕೂಲಿಕಾರರು ಹಾಗೂ ಮಹಿಳೆಯರ ಬದುಕಿಗೆ ಭದ್ರತೆ ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ವರದಿಗಾರರು: ಲಕ್ಷ್ಮಣ ಮೊಳೆ

ಹೆಚ್ಚಿನ ಸುದ್ದಿ