ಲೊಯೊಲಾ ವಿಕಾಸ ಕೇಂದ್ರ, ಮುಂಡಗೋಡಿನಲ್ಲಿ ವಿಭಿನ್ನ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಪ್ರೇರಣೆ
ಮುಂಡಗೋಡ:04 ಲೊಯೊಲಾ ವಿಕಾಸ ಕೇಂದ್ರದ ವಸತಿ ನಿಲಯದ ಪ್ರಾಥಮಿಕ ಹಾಗೂಪ್ರೌಢಶಾಲಾ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಅಕ್ಟೋಬರ್ 2ರಿಂದ 4ರವರೆಗೆ ಮೂರು ದಿನಗಳ ದಸರಾ ರಜಾದಿನಗಳ ಶಿಬಿರವನ್ನು ಲೊಯೊಲಾ ವಿಕಾಸ ಕೇಂದ್ರ, ಮುಂಡಗೋಡಿನಲ್ಲಿ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಪ್ರೇರಣೆ, ಅಧ್ಯಯನ ಕೌಶಲ್ಯ, ಜೀವನ ಕೌಶಲ್ಯ, ಸೃಜನಶೀಲತೆ, ಕರಕುಶಲ ಪ್ರತಿಭೆ ಹಾಗೂ ಪಠ್ಯೇತರ ಚಟುವಟಿಕೆಗಳ ಆಸಕ್ತಿಯನ್ನು ಬೆಳೆಸುವುದು ಶಿಬಿರದ ಪ್ರಮುಖ ಉದ್ದೇಶವಾಗಿತ್ತು.
ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಂಡಗೋಡಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಸುಮಾ ಜಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ರೂಪಾ ಅಂಗಡಿ, ಮುಂಡಗೋಡ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಶ್ರೀ ಸಂತೋಷ್ ಕುಮಾರ್ ಎ.ಎಚ್. ಹಾಗೂ ಲೊಯೊಲಾ ವಿಕಾಸ ಕೇಂದ್ರದ ನಿರ್ದೇಶಕ ಫಾ. ಅನಿಲ್ ಡಿಸೋಜಾ ಉಪಸ್ಥಿತರಿದ್ದರು.
ಅತಿಥಿಗಳು ತಮ್ಮ ಜೀವನಾನುಭವಗಳನ್ನು ಮಕ್ಕಳೊಂದಿಗೆ ಹಂಚಿಕೊಂಡು, ಶಿಕ್ಷಣದ ಮಹತ್ವ, ಶಿಸ್ತು, ಪರಿಶ್ರಮ ಮತ್ತು ಉತ್ತಮ ಗುರಿಯನ್ನು ಹೊಂದುವ ಅಗತ್ಯತೆ ಕುರಿತು ಮಾರ್ಗದರ್ಶನ ನೀಡಿದರು. ಶಿಕ್ಷಣದ ಜೊತೆಗೆ ತಮ್ಮ ಆಸಕ್ತಿ ಮತ್ತು ಪ್ರತಿಭೆಗೆ ತಕ್ಕಂತೆ ಭವಿಷ್ಯದಲ್ಲಿ ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಮೂರು ದಿನಗಳ ಶಿಬಿರದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದು, ಜೀವನ ಕೌಶಲ್ಯ ತರಬೇತಿ, ಜೇಡಿಮಣ್ಣಿನ ಕರಕುಶಲ ಕಲೆ, ಸ್ಥಳೀಯ ಜಾನಪದ ಕಲೆ ಮತ್ತು ಸಂಸ್ಕೃತಿ, ದೈನಂದಿನ ಜೀವನಶೈಲಿ, ಆರೋಗ್ಯ ಹಾಗೂ ವೈಯಕ್ತಿಕ ನೈರ್ಮಲ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಾಯೋಗಿಕ ಚಟುವಟಿಕೆಗಳ ಮೂಲಕ ತರಬೇತಿ ಪಡೆದರು. ಈ ಚಟುವಟಿಕೆಗಳು ಮಕ್ಕಳಲ್ಲಿರುವ ಸೃಜನಶೀಲತೆ, ಪ್ರತಿಭೆ ಹಾಗೂ ಆತ್ಮವಿಶ್ವಾಸವನ್ನು ಹೊರತರುವಲ್ಲಿ ಸಹಕಾರಿಯಾದವು.
ಶಿಬಿರದ ಮತ್ತೊಂದು ಆಕರ್ಷಣೆಯಾಗಿ ವಿದ್ಯಾರ್ಥಿಗಳಿಗೆ ಪಿ.ಆರ್.ಎಸ್. ವಾಟರ್ ಪಾರ್ಕ್ಗೆ ಶೈಕ್ಷಣಿಕ ಹಾಗೂ ಮನರಂಜನಾ ಭೇಟಿ ಆಯೋಜಿಸಲಾಗಿತ್ತು. ಇದರ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆ, ಅನುಭವ ಮತ್ತು ಮನರಂಜನೆಯನ್ನು ಒಟ್ಟಿಗೆ ಪಡೆಯುವ ಅವಕಾಶ ಕಲ್ಪಿಸಲಾಯಿತು.
ದಸರಾ ರಜೆಯ ಅವಧಿಯನ್ನು ಕೇವಲ ಮನರಂಜನೆಗೆ ಸೀಮಿತಗೊಳಿಸದೆ, ಮಕ್ಕಳ ವ್ಯಕ್ತಿತ್ವ ವಿಕಸನ, ಜೀವನ ಕೌಶಲ್ಯ ಮತ್ತು ಸೃಜನಶೀಲ ಪ್ರತಿಭೆ ಬೆಳೆಸುವ ಅರ್ಥಪೂರ್ಣ ಅವಕಾಶವನ್ನಾಗಿ ರೂಪಿಸಿದ ಈ ಮೂರು ದಿನಗಳ ಶಿಬಿರವು ವಿದ್ಯಾರ್ಥಿಗಳಿಗೆ ಹೊಸ ಅನುಭವ, ಪ್ರೇರಣೆ ಹಾಗೂ ಆತ್ಮವಿಶ್ವಾಸವನ್ನು ನೀಡಿತು.
