ವಿದಾನ ಪರಿಷತ್ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗಳು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಯಾವ ಸಮಸ್ಯೆಗಳು ಚುನಾವಣೆಯ ಚರ್ಚೆಯ ವಿಷಯವಾಗಿವೆ??
ಪದವಿ ಪಡೆದ ಪದವೀಧರರು ಸ್ನಾತಕೋತ್ತರ ಪದವಿ, ಶಿಕ್ಷಕರ ತರಬೇತಿ, ಸ್ಪರ್ಧಾತ್ಮಕ ಪರೀಕ್ಷಾ ತಯಾರಿ, ವಿವಿಧ ಇಲಾಖೆಯಲ್ಲಿನ ಖಾಲಿ ಹುದ್ದೆ ಭರ್ತಿಯ ನಿರೀಕ್ಷೆಯಲ್ಲಿರುತ್ತಾರೆ.
ಹೀಗೆ ಒಂದಿಲ್ಲೊಂದು ಕ್ಷೇತ್ರದ ಕಡೆಗೆ ಗಮನ ಹರಿಸುತ್ತಾರೆ.
ಆದರೆ ಖಾಲಿ ಹುದ್ದೆ ಭರ್ತಿಯಲ್ಲಿ ವಿಳಂಬ, ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳು, ನೇಮಕಾತಿ ಅಕ್ರಮಗಳು, ಕೆ.ಪಿ.ಎಸ್.ಸಿ ಹಗರಣಗಳು, ಪದವೀಧರರನ್ನು ಹಿಂಡಿ ಹಿಪ್ಪೆಯನ್ನಾಗಿಸುತ್ತವೆ!
ಪದವೀಧರ ಕ್ಷೇತ್ರದ ನೈಜ ಸಮಸ್ಯೆಗಳು ಇಂದಿಗೂ ಚುನಾವಣೆಯಲ್ಲಿ ಚರ್ಚೆಯ ವಿಷಯವೇ ಆಗುವುದಿಲ್ಲ!
ಈ ಬಾರಿ ಪದವೀಧರ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿದ ಪದವೀಧರ ಪುನಃ ಮುಂದಿನ ವರ್ಷದ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಬೇಕು ಈ ಅವೈಜ್ಞಾನಿಕ ಪದ್ಧತಿಯಿಂದಾಗಿ ಅದೆಷ್ಟೋ ಪದವೀಧರರು ಮತದಾರರ ಪಟ್ಟಿಯಲ್ಲಿ ಅನೇಕ ಕಾರಣಗಳಿಂದ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳು ಸಾಧ್ಯವಾಗದೇ ಮತದಾನದ ಹಕ್ಕಿನಿಂದ ಹೊರಗುಳಿಯುತ್ತಿದ್ದಾರೆ!
ಹಾಗೂ ತಮ್ಮ ತಮ್ಮ ಜೀವನ ನಿರ್ವಹಣೆಗಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಪದವೀಧರರು ಯಾವ ಬೇಡಿಕೆಗಳಿಗಾಗಿ ಪದವೀಧರರ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು?
ಪದವಿ ಪಡೆದ ವರ್ಷದಿಂದ ಚುನಾವಣೆ ಎದುರಾಗುವವರೆಗೆ ಪದವೀಧರರು ಸಮಸ್ಯೆಗಳನ್ನು ಎದುರಿಸುವಾಗ ಇಲ್ಲದ ಪ್ರತಿನಿಧಿಗಳು ಚುನಾವಣೆ ಎದುರಾದಾಗ ಯಾವ ಧೈರ್ಯದಿಂದ ಚುನಾವಣಾ ಅಖಾಡಕ್ಕೆ ಧುಮುಕುತ್ತಾರೆ?
ಸ್ನಾತಕೋತ್ತರ ವಿದ್ಯಾರ್ಥಿಗಳು ಪದವೀಧರರ ಕ್ಷೇತ್ರದ ಮತದಾರರೇ ಅಲ್ಲದ ಕಾರಣ ವಿ.ವಿ ಸಮಸ್ಯೆಗಳು ಚುನಾವಣಾ ಚರ್ಚೆಯ ವಿಷಯವೇ ಆಗುವುದಿಲ್ಲ!
ಇನ್ನು ಕೆ.ಪಿ.ಎಸ್.ಸಿ ಹಗರಣ ಪದವೀಧರ ಕ್ಷೇತ್ರದ ಚುನಾವಣೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ?
ಇದುವರೆಗೂ ಕೆ.ಪಿ.ಎಸ್.ಸಿ ಹಗರಣ, ನೇಮಕಾತಿ ಅಕ್ರಮಗಳು ಪರಿಹಾರ ಕಾಣದಿರಲು ಕಾರಣವೇನು?
ಪದವೀಧರರ ಕ್ಷೇತ್ರದ ನೈಜ ಸಮಸ್ಯೆಗಳು ಇಂದಿಗೂ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಿರ್ಣಾಯಕವಾಗುವುದಿಲ್ಲ!
ಜನ ಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಒಂದು ಕಡೆಯಾದರೆ ಪದವೀಧರರ ಸಂಘಟನೆಯ ಕೊರತೆ ಕಾರಣವಾಗಿದೆ!
ಆದರೆ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು, ಸರಕಾರಿ ನೌಕರರು ನಿರ್ಣಾಯಕರಾಗಿದ್ದಾರೆ!
ಅನುಚ್ಛೇದ 171(3)(C) ಯಲ್ಲಿನ ನಿರ್ಬಂಧಗಳ ಕಾರಣ ಶಿಕ್ಷಕರ ಕ್ಷೇತ್ರದ ಚುನಾವಣಾ ವ್ಯಾಪ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು, ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರು, ಶಿಕ್ಷಕರ ತರಬೇತಿ ಪಡೆದವರು, ನೇಮಕಾತಿ ನಿರೀಕ್ಷೆಯಲ್ಲಿರುವವರು, ವಯೋಮಿತಿ ಮೀರಿದ ಶಿಕ್ಷಕರು ಮತದಾನದ ಹಕ್ಕಿನಿಂದಲೇ ವಂಚಿತರಾಗಿದ್ದಾರೆ!
ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ 40 ಸಾವಿರ, ಪ್ರಾಥಮಿಕ ಶಾಲಾ ಪದವೀಧರ ಸಹ ಶಿಕ್ಷಕರ ಹುದ್ದೆಗೆ 2 ಲಕ್ಷ, ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ 3 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ.
ಅನುಚ್ಛೇದ 171(3)(C) ಪ್ರಕಾರ ಹೈಯರ್ ಸೆಕೆಂಡರಿ ಶಾಲೆ ಅಥವಾ ತತ್ಸಮಾನ ಪಾಠಶಾಲೆಯಲ್ಲಿ ಮೂರು ವರ್ಷಗಳ ಬೋಧನಾ ಅನುಭವವಿರುವ ಶಿಕ್ಷಕರು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾನ ಮಾಡಲು ಅರ್ಹತೆಯನ್ನು ಹೊಂದಿರುತ್ತಾರೆ.
ಈ ನಿರ್ಬಂಧದ ಕಾರಣ ಪ್ರಾಥಮಿಕ ಶಾಲಾ ಶಿಕ್ಷಕರು, ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರು ಹಾಗೂ ನೇಮಕಾತಿ ನಿರೀಕ್ಷೆಯಲ್ಲಿರುವ ಶಿಕ್ಷಕರು ಮತದಾನದ ಹಕ್ಕಿನಿಂದ ಹೊರಗುಳಿಯುತ್ತಾರೆ!
ಮತದಾನದ ಹಕ್ಕಿನಿಂದ ವಂಚಿತರಾದ ಅಥವಾ ಮತದಾನದ ಹಕ್ಕಿನಿಂದ ಹೊರಗುಳಿಯುವ ಶಿಕ್ಷಕರ ಸಂಖ್ಯೆಯೇ ಸುಮಾರು 6-7 ಲಕ್ಷ!
ಆದರೆ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಹೊಂದಿರುವ ಶಿಕ್ಷಕರ ಸಂಖ್ಯೆ ಸುಮಾರು ಒಂದು ಲಕ್ಷ!
ಅಂದರೆ ರಾಜ್ಯದ ಏಳು ಶಿಕ್ಷಕರ ವ್ಯಾಪ್ತಿಯಲ್ಲಿ ಇಪ್ಪತ್ತು ಸಾವಿರ ಮತದಾರರು!
ಹದಿನೈದು ಸಾವಿರ ಮತಗಳನ್ನು ಪಡೆಯುವ ಅಭ್ಯರ್ಥಿಗಳು ಅನಾಯಾಸವಾಗಿ ಜಯಗಳಿಸುತ್ತಾರೆ!
ಹೀಗಿರುವಾಗ ಶಿಕ್ಷಕರ ಕ್ಷೇತ್ರದ ನೈಜ ಸಮಸ್ಯೆಗಳು ಹೇಗೆ ತಾನೇ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಚುನಾವಣಾ ಚರ್ಚೆಯ ವಿಷಯವಾಗುತ್ತವೆ?
ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಪ್ರಾಥಮಿಕ ಶಾಲಾ ಶಿಕ್ಷಕರು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಿರ್ಣಾಯಕರಾಗಿಬಿಡುತ್ತಾರೆ!
ಅನುಚ್ಛೇದ 171(3)(B)(C) ಕ್ಕೆ ಸೂಕ್ತ ತಿದ್ದುಪಡಿ ಮಾಡದ ಹೊರತು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ನೈಜ ಸಮಸ್ಯೆಗಳು ಬಗೆಹರಿಯುವುದಿಲ್ಲ ಬದಲಿಗೆ ರಾಜಕೀಯ ಪಕ್ಷಗಳ ಮತಬ್ಯಾಂಕ್ ರಾಜಕಾರಣದಿಂದಾಗಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ನೈಜ ಸಮಸ್ಯೆಗಳು ಪರಿಹಾರ ಕಾಣದೆ ನೆನೆಗುದಿಗೆ ಬಿದ್ದಿವೆ!
ಭಾಸ್ಕರ ಎಂ ಮುದೇನೂರು
ನ್ಯಾಯವಾದಿಗಳು
ರಾಜ್ಯಾಧ್ಯಕ್ಷರು
ಅನುಚ್ಛೇದ 171(3) ತಿದ್ದುಪಡಿ ಹೋರಾಟ ಸಮಿತಿ-ಕರ್ನಾಟಕ
