Friday, October 9, 2026
Homeಟಾಪ್ ನ್ಯೂಸ್ಸ್ಥಗಿತಗೊಂಡಿರುವ ಬಡವರ ಪಿಂಚಣಿ ಹಣ ತಕ್ಷಣ ಬಿಡುಗಡೆ ಮಾಡದಿದ್ದರೆ ಹೋರಾಟ ತೀವ್ರ: ಡಾ. ರವಿ ಸಿ.ಟಿ

ಸ್ಥಗಿತಗೊಂಡಿರುವ ಬಡವರ ಪಿಂಚಣಿ ಹಣ ತಕ್ಷಣ ಬಿಡುಗಡೆ ಮಾಡದಿದ್ದರೆ ಹೋರಾಟ ತೀವ್ರ: ಡಾ. ರವಿ ಸಿ.ಟಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ 67 ಸಾವಿರಕ್ಕೂ ಹೆಚ್ಚು ಅಂಗವಿಕಲರು, ವೃದ್ಧರು ಹಾಗೂ ವಿಧವೆಯರಿಗೆ ಕಳೆದ 6–8 ತಿಂಗಳಿನಿಂದ ಪಿಂಚಣಿ ಹಣ ಸ್ಥಗಿತಗೊಂಡಿರುವುದನ್ನು ವಿರೋಧಿಸಿ ಚಿಕ್ಕಮಗಳೂರು ಗ್ರಾಮಾಂತರ ಮತ್ತು ನಗರ ಬಿಜೆಪಿ ಮಂಡಲ ವತಿಯಿಂದ ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ವಿಧಾನ ಪರಿಷತ್ ಶಾಸಕ ಡಾ. ರವಿ ಸಿ.ಟಿ ಮಾತನಾಡಿ, ಸ್ಥಗಿತಗೊಂಡಿರುವ ಬಡವರಿಗೆ ಸೇರಬೇಕಾದ ಪಿಂಚಣಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿದಾಗ ಹಲವು ವಿಧವೆಯರು, ವೃದ್ಧರು ಹಾಗೂ ಅಂಗವಿಕಲರು ಪಿಂಚಣಿ ಹಣ ಹಲವು ತಿಂಗಳಿಂದ ಬಂದಿಲ್ಲ ಎಂದು ಕಣ್ಣೀರಿನಿಂದ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಪಿಂಚಣಿಯನ್ನೇ ಜೀವನಾಧಾರ ಮಾಡಿಕೊಂಡಿರುವವರಿಗೆ ಹಣ ಸ್ಥಗಿತಗೊಂಡಿರುವುದರಿಂದ ತೀವ್ರ ಸಂಕಷ್ಟ ಎದುರಾಗಿದೆ. ಅವರ ಕಷ್ಟವನ್ನು ಕೇಳಿ ಸುಮ್ಮನಿರಲು ಸಾಧ್ಯವಾಗದ ಕಾರಣ ಬಿಜೆಪಿ ಹೋರಾಟಕ್ಕೆ ಇಳಿದಿದೆ ಎಂದು ರವಿ ಅವರು ಹೇಳಿದರು.

ಈ ಕುರಿತು ವಿಧಾನಸಭೆಯಲ್ಲಿ ಪ್ರಶ್ನಿಸಲಾಗಿದೆ. ಸಖರಾಯಪಟ್ಟಣ, ಕಲಸಾಪುರ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸಲಾಗಿದೆ. ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಪ್ರಶ್ನಿಸಲಾಗಿದ್ದು, ಬಾಕಿ ಉಳಿದಿರುವ ಹಣವನ್ನು ಒಟ್ಟಿಗೆ ಪಾವತಿಸುವುದಾಗಿ ಭರವಸೆ ನೀಡಲಾಗಿದೆ. ಆದರೆ ಇದುವರೆಗೆ ಹಣ ಬಿಡುಗಡೆಯಾಗಿಲ್ಲ ಎಂದು ಅವರು ಹೇಳಿದರು.

ಚಾಣಕ್ಯನ ಮಾತನ್ನು ಉಲ್ಲೇಖಿಸಿದ ರವಿ ಅವರು, “ರಾಜನ ಸುಖ ಎಂದರೆ ತಾನು ಮಜಾ ಮಾಡುವುದಲ್ಲ; ಪ್ರಜೆಗಳ ಸುಖವೇ ರಾಜನ ಸುಖ” ಎಂಬ ತತ್ವವನ್ನು ಆಡಳಿತ ನಡೆಸುವವರು ಅರ್ಥಮಾಡಿಕೊಳ್ಳಬೇಕು ಎಂದರು. ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸರ್ಕಾರ ಸಂಭ್ರಮಾಚರಣೆಗಳಲ್ಲಿ ತೊಡಗುವುದು ಸೂಕ್ತವಲ್ಲ. ಮಳೆ-ಬೆಳೆ ಚೆನ್ನಾಗಿ, ಬಡವರು ಸಂತೋಷದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾದಾಗ ಸರ್ಕಾರ ಉತ್ಸವಗಳನ್ನು ಆಚರಿಸಲಿ. ಆದರೆ ಜನರು ಪಿಂಚಣಿ, ಮನೆ ಹಾಗೂ ಮೂಲಭೂತ ಸೌಲಭ್ಯಗಳಿಗಾಗಿ ಕಣ್ಣೀರು ಹಾಕುತ್ತಿರುವ ಸಂದರ್ಭದಲ್ಲಿ ಅವರ ಸಮಸ್ಯೆಗಳಿಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಆಶ್ರಯ ಮನೆಗಳು ಹಾಗೂ ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಮನೆಗಳು ಅರ್ಧಂಬರ್ಧ ಸ್ಥಿತಿಯಲ್ಲಿ ನಿಂತಿವೆ. ಬಡವರು ಇನ್ನೂ ಬೀದಿಯಲ್ಲಿ ಬದುಕುವ ಪರಿಸ್ಥಿತಿ ಇದೆ ಎಂದು ಆರೋಪಿಸಿದ ಅವರು, ಮಂಜೂರಾದ ಮನೆಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ ಎಂದರು.

ಪ್ರಜಾಸೇವೆ ಎಂದರೆ ಕಮಿಷನ್ ಪಡೆಯುವುದಲ್ಲ

“ಪ್ರಜಾಸೇವೆ ಎಂದರೆ ಏನು? ಕಮಿಷನ್ ಪಡೆಯುವುದೇ ಪ್ರಜಾಸೇವೆಯೇ? ಭ್ರಷ್ಟಾಚಾರ ಮಾಡಿ ಹುದ್ದೆಗಳಿಗೆ ದರ ನಿಗದಿಪಡಿಸುವುದೇ ಪ್ರಜಾಸೇವೆಯೇ?” ಎಂದು ಪ್ರಶ್ನಿಸಿದ ಅವರು, ಬೆಲೆ ಏರಿಕೆ, ಭ್ರಷ್ಟಾಚಾರ ಹಾಗೂ ಸರ್ಕಾರಿ ಸೇವೆಗಳಲ್ಲಿನ ಅಕ್ರಮಗಳ ಬಗ್ಗೆ ತೀವ್ರವಾಗಿ ಟೀಕಿಸಿದರು.

ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜಾಗುವ ಔಷಧಿಗಳಲ್ಲೂ ಕಮಿಷನ್ ಪಡೆಯಲಾಗುತ್ತಿದೆ ಎಂಬ ಆರೋಪಗಳಿದ್ದು, ಇಂತಹ ಆರೋಪಗಳ ಕುರಿತು ಸರ್ಕಾರ ಉತ್ತರಿಸಬೇಕು ಎಂದು ಅವರು ಆಗ್ರಹಿಸಿದರು. ಊರೂರುಗಳಲ್ಲಿ ಮದ್ಯದಂಗಡಿಗಳನ್ನು ತೆರೆಯುವುದು ಮತ್ತು ನಕಲಿ ಮದ್ಯದ ಆರೋಪಗಳು ಕೇಳಿಬರುತ್ತಿರುವುದು ಜನಪರ ಆಡಳಿತದ ಲಕ್ಷಣವಲ್ಲ ಎಂದು ಅವರು ಟೀಕಿಸಿದರು.

ಗ್ಯಾರಂಟಿ ಯೋಜನೆಗಳ ಕುರಿತು ಪ್ರಶ್ನೆ

ಗೃಹಲಕ್ಷ್ಮಿ ಸೇರಿದಂತೆ ಗ್ಯಾರಂಟಿ ಯೋಜನೆಗಳ ಹಣದ ಪಾವತಿಯಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿದ ರವಿ ಅವರು, ಬಡವರಿಗೆ ನೀಡಬೇಕಾದ ಸಾಮಾಜಿಕ ಭದ್ರತಾ ಪಿಂಚಣಿ ಸ್ಥಗಿತವಾಗಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಬಡವರಿಗೆ ಪಿಂಚಣಿ ಬರುವವರೆಗೆ ನಾವು ಸಂಬಳ ಪಡೆಯುವುದಿಲ್ಲ ಎಂದು ಜನಪ್ರತಿನಿಧಿಗಳು ಹೇಳಿದ್ದರೆ ಜನರು ಮೆಚ್ಚುತ್ತಿದ್ದರು. ಆದರೆ ಬಡವರು ಹಣಕ್ಕಾಗಿ ಕಾಯುತ್ತಿರುವಾಗ ಜನಪ್ರತಿನಿಧಿಗಳು ತಮ್ಮ ವೇತನ ಪಡೆಯುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಚಿಕ್ಕಮಗಳೂರು ನಗರದಲ್ಲಿನ ಬಡವರ ವಸತಿ ಯೋಜನೆಗಳ ಸ್ಥಿತಿಯನ್ನೂ ಪ್ರಸ್ತಾಪಿಸಿದ ಅವರು, ಉಪ್ಪಳ್ಳಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಯೋಜನೆಯಡಿ ಮಂಜೂರಾದ ಮನೆಗಳು ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿವೆ ಎಂದರು. ಅಲೆಮಾರಿ ಹಾಗೂ ಚಿಂದಿ ಆಯ್ದು ಜೀವನ ನಡೆಸುವ ಜನರು ಕೂಡ ಮನೆಗಾಗಿ ಕಾಯುತ್ತಿದ್ದಾರೆ. ತಮಿಳ್ ಕಾಲೋನಿ, ಶಂಕರಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲೂ ಮಂಜೂರಾದ ಮನೆಗಳು ಪೂರ್ಣಗೊಳ್ಳದೆ ಉಳಿದಿವೆ ಎಂದು ಆರೋಪಿಸಿದ ಅವರು, ಬಡವರ ಮನೆಗಳನ್ನು ಪೂರ್ಣಗೊಳಿಸುವುದು ಸರ್ಕಾರದ ಕರ್ತವ್ಯ ಎಂದರು.

ಬಡವರ ಕಣ್ಣೀರು ಒರೆಸುವ ಶಿವ ಬೇಕು

ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ಮಾತನಾಡಿದ ರವಿ ಅವರು, “ಬಡವರ ಕಣ್ಣೀರು ಒರೆಸುವ ಶಿವ ಬೇಕು; ಬಡವರ ಕಣ್ಣಲ್ಲಿ ನೀರು ತರಿಸುವ ಶಿವ ಬೇಡ” ಎಂದು ಹೇಳಿದರು. ಎಂಟು–ಹತ್ತು ತಿಂಗಳಿನಿಂದ ಪಿಂಚಣಿ ಹಣ ಬಂದಿಲ್ಲ ಎಂದು ಬಡವರು ಹೇಳುತ್ತಿದ್ದರೂ ಅವರ ನೋವನ್ನು ಕೇಳಲು ಸಾಧ್ಯವಾಗದಿದ್ದರೆ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಏನು ಎಂದು ಪ್ರಶ್ನಿಸಿದರು.

ಬಡವರ ಅಸಮಾಧಾನವನ್ನು ಸರ್ಕಾರ ನಿರ್ಲಕ್ಷಿಸಬಾರದು ಎಂದು ಎಚ್ಚರಿಸಿದ ರವಿ ಅವರು, “ಬಡವರ ಕಿಚ್ಚು ಕಾಡ್ಗಿಚ್ಚಾಗಿ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡುವ ಮುನ್ನ ಎಚ್ಚೆತ್ತುಕೊಳ್ಳಿ” ಎಂದು ಹೇಳಿದರು.

ರಾಜ್ಯದ 23 ಲಕ್ಷ ಬಡವರ ಪಿಂಚಣಿ ಯೋಜನೆಯ ಫಲಾನುಭವಿಗಳಿಗೆ ಹಣ ತಲುಪುವಂತೆ ಮಾಡಬೇಕು ಎಂದು ಆಗ್ರಹಿಸಿದ ಅವರು, ಗೃಹಲಕ್ಷ್ಮಿ ಸೇರಿದಂತೆ ಬಾಕಿ ಇರುವ ಯೋಜನೆಗಳ ಹಣವನ್ನೂ ಬಿಡುಗಡೆ ಮಾಡಬೇಕು ಎಂದರು.

ಬರಗಾಲದ ಸಂದರ್ಭದಲ್ಲಿ ಜನರು ಸಂಕಷ್ಟದಲ್ಲಿರುವಾಗ ದೊಡ್ಡ ಪ್ರಮಾಣದ ಉತ್ಸವಗಳಿಗೆ ಹಣ ಖರ್ಚು ಮಾಡುವ ಬದಲು ಬಡವರಿಗೆ ಸೇರಬೇಕಾದ ಹಣವನ್ನು ಮೊದಲು ನೀಡಬೇಕು ಎಂದು ಅವರು ಹೇಳಿದರು. ಸಮೃದ್ಧಿ ಇದ್ದಾಗ ಉತ್ಸವ ಆಚರಿಸುವುದಕ್ಕೆ ತಮ್ಮ ವಿರೋಧವಿಲ್ಲ; ಆದರೆ ಬಡವರ ಹಕ್ಕಿನ ಹಣವನ್ನು ತಡೆದು ಉತ್ಸವ ಆಚರಿಸುವುದು ಸರಿಯಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಎಂ.ಆರ್ ದೇವರಾಜ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಕನಕರಾಜ್ ಅರಸ್, ಬಿ.ಜಿ ಸೋಮಶೇಖರ್, ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿಗಳಾದ ಎಚ್ ಸಿ ಕಲ್ಮುರುಡಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ಬೆಳವಾಡಿ, ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಕುರುವಂಗಿ ವೆಂಕಟೇಶ್, ನಗರ ಮಂಡಲ ಅಧ್ಯಕ್ಷರಾದ ಕೆ.ಎಸ್ ಪುಷ್ಪರಾಜ್, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಜಿ.ಎನ್ ವಿಜಯ್ ಕುಮಾರ್, ಜಿಲ್ಲಾ ಬಿಜೆಪಿ ವಕ್ತಾರರಾದ ಹೆಚ್.ಎಸ್. ಪುಟ್ಟಸ್ವಾಮಿ, ಹಿರಿಯ ಮುಖಂಡರಾದ ಶ್ರೀ ಕೋಟೆ ರಂಗನಾಥ್, ದೀಪಕ್ ದೊಡ್ಡಯ್ಯ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಸಂತೋಷ್ ಕೋಟ್ಯಾನ್ ಸೇರಿದಂತೆ ಪ್ರಮುಖ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ