Thursday, May 28, 2026
Homeಜಿಲ್ಲಾ ಸುದ್ದಿಗಳುಉತ್ತರ ಕನ್ನಡರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಿಸಿದ್ದ ಕಟ್ಟೆ ವಿವಾದ – ಬಿಗುವಿನ ವಾತಾವರಣ, ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್

ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಿಸಿದ್ದ ಕಟ್ಟೆ ವಿವಾದ – ಬಿಗುವಿನ ವಾತಾವರಣ, ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ವೆಂಕಟಾಪುರ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಲಾಗಿದ್ದ ಮೂರಿನಕಟ್ಟೆ (ದೇವರ ಹೊರೆ ಇಡುವ ಸ್ಥಳ) ಯನ್ನು ಭಾನುವಾರ ರಾತ್ರಿ ತೆರವುಗೊಳಿಸಿದ ಘಟನೆ ನಡೆದಿದ್ದು, ಇದರಿಂದಾಗಿ ಪಟ್ಟಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಘಟನೆಯ ಹಿನ್ನೆಲೆ:
ಕಳೆದ ನೂರಾರು ವರ್ಷಗಳಿಂದ ಧಾರ್ಮಿಕ ಭಾವನೆಯಿಂದ ನಂಬಿಕೊಂಡು ಬಂದಿದ್ದ ಕಟ್ಟೆಯೊಂದನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೋಸ್ಕರ ಈ ಹಿಂದೆ ಬಿಟ್ಟುಕೊಡಲಾಗಿತ್ತು. ಈ ಜಾಗದಲ್ಲಿ ಕಟ್ಟೆಯನ್ನು ಪುನರ್ ನಿರ್ಮಾಣ ಮಾಡುವಂತೆ ಸ್ಥಳೀಯರು ಹಾಗೂ ಹಿಂದೂ ಸಂಘಟನೆಗಳು ಈ ಹಿಂದೆ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದವು. ಆದರೆ, ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ಭಾನುವಾರ (ಮೇ 24) ಬೆಳಗ್ಗೆ ಹಿಂದೂ ಜಾಗರಣಾ ವೇದಿಕೆ ಹಾಗೂ ಇತರ ಹಿಂದೂ ಸಂಘಟನೆಯ ಕಾರ್ಯಕರ್ತರು ಸೇರಿ ಶ್ರದ್ಧಾಭಕ್ತಿಯಿಂದ ಮೂರಿನಕಟ್ಟೆಯನ್ನು ಪುನರ್ ನಿರ್ಮಾಣ ಮಾಡಿದ್ದರು.

ಆಕ್ಷೇಪ ಮತ್ತು ತೆರವು ಕಾರ್ಯಾಚರಣೆ:
ಹೆದ್ದಾರಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಕಟ್ಟೆ ನಿರ್ಮಾಣವಾಗುತ್ತಿರುವ ಬಗ್ಗೆ ಅನ್ಯಕೋಮಿನ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು.
ಆದರೆ, ಭಾನುವಾರ ರಾತ್ರಿ ಏಕಾಏಕಿ ಸ್ಥಳದಲ್ಲಿ ಜಮಾಯಿಸಿದ ನೂರಾರು ಜನರ ಗುಂಪೊಂದು, ನಿರ್ಮಾಣವಾಗಿದ್ದ ಕಟ್ಟೆಯನ್ನು ಭಾಗಶಃ ಹಾನಿಗೊಳಿಸಿ ತೆರವುಗೊಳಿಸಿದೆ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿಯನ್ನು ಕೆಲ ಕಾಲ ಬಂದ್ ಮಾಡಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಲಾಗಿದೆ ಎನ್ನಲಾಗಿದೆ.

ಪೊಲೀಸ್ ಬಿಗಿ ಬಂದೋಬಸ್ತ್:
ಮಾಹಿತಿ ತಿಳಿದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ) ದೀಪನ್ ಮತ್ತು ಡಿ.ವೈ.ಎಸ್.ಪಿ. ಗಿರೀಶ ಅವರು ಸ್ಥಳಕ್ಕೆ ದೌಡಾಯಿಸಿ, ಪರಿಸ್ಥಿತಿಯನ್ನು ಹತೋಟಿಗೆ ತರಲು ಶ್ರಮಿಸಿದರು. ಪೊಲೀಸರ ಸಮ್ಮುಖದಲ್ಲೇ ಕೆಲವರು ಕಟ್ಟೆಯನ್ನು ತೆರವುಗೊಳಿಸಲು ಮುಂದಾದಾಗ ಪೊಲೀಸರು ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆಯಲು ಯತ್ನಿಸಿದ್ದಾರೆ. ಈ ಸಮಯದಲ್ಲಿ ಪೊಲೀಸರ ಮೇಲೆ‌ ಕೂಡ ಹಲ್ಲೆ ಮಾಡಲಾಗಿದೆ.

ಈ ಘಟನೆಯಿಂದಾಗಿ ಸೌಹಾರ್ದತೆಯಿಂದಿದ್ದ ಭಟ್ಕಳದಲ್ಲಿ ಶಾಂತಿ ಕದಡಿದಂತಾಗಿದ್ದು, ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಹಾಗೂ ಭಟ್ಕಳ ನಗರ ಹಾಗೂ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇ 25ರ ಬೆಳಿಗ್ಗೆ 6.00 ಗಂಟೆಯಿಂದ ಮೇ 27ರ ಬೆಳಿಗ್ಗೆ 6.00 ಗಂಟೆಯವರೆಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023ರ ಕಲಂ 163ರ (ಹಿಂದಿನ ಸೆಕ್ಷನ್ 144) ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಭಟ್ಕಳ ಉಪವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಸಂದೇಶಗಳನ್ನು ಹಂಚಿಕೊಳ್ಳದೆ, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಕೋರಲಾಗಿದೆ.

ಹೆಚ್ಚಿನ ಸುದ್ದಿ