Tuesday, October 6, 2026
Homeಕ್ರೀಡೆಸಿಎಂ ಕಪ್ ಕಿರೀಟಕ್ಕೆ ಮುತ್ತಿಟ್ಟ ದಯಾನಂದ್ ಸಾಗರ್ ಕಾಲೇಜು; ಚಾಂಪಿಯನ್ ಪಟ್ಟಕ್ಕೇರಿದ ಯುವ ಪಡೆ

ಸಿಎಂ ಕಪ್ ಕಿರೀಟಕ್ಕೆ ಮುತ್ತಿಟ್ಟ ದಯಾನಂದ್ ಸಾಗರ್ ಕಾಲೇಜು; ಚಾಂಪಿಯನ್ ಪಟ್ಟಕ್ಕೇರಿದ ಯುವ ಪಡೆ

ಬೆಂಗಳೂರು, ಅ.೦4: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿ ಸಿಎಂ ಕಪ್ ನ ಕಿರೀಟವನ್ನು ದಯಾನಂದ್ ಸಾಗರ್ ಕಾಲೇಜು ವಿದ್ಯಾರ್ಥಿಗಳು ಮುಡಿಗೇರಿಸಿಕೊಂಡಿದ್ದಾರೆ. ಸಪ್ತಗಿರಿ ಎನ್ ಪಿ ಎಸ್ ಯುನಿವರ್ಸಿಟಿ ಮತ್ತು‌ ಡಾನ್ ಬಾಸ್ಕೋ ಕಾಲೇಜು ತಂಡದ ವಿದ್ಯಾರ್ಥಿಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದಿದ್ದಾರೆ.

ಕೆಪಿವೈಸಿಸಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ಅವರ ನೇತೃತ್ವದಲ್ಲಿ ನಡೆದ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಪ್ರಥಮ 1 ಲಕ್ಷ, ದ್ವಿತೀಯ 75 ಸಾವಿರ ಹಾಗೂ ತೃತೀಯ 50 ಸಾವಿರ ರೂ. ನಗದು ಸಹಿತ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು. ಅಲ್ಲದೆ, ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಆಟಗಾರಿಗೆ ಅತ್ಯುತ್ತಮ ಬ್ಯಾಟ್ಸ್ ಮನ್, ಅತ್ಯುತ್ತಮ ಬೌಲರ್ ಹಾಗೂ ಅತ್ಯುತ್ತಮ ಆಲ್ ರೌಂಡರ್ ಪದಕಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಅಲ್ಲದೇ, ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ವಾರ್ಡ್ ಹಂತದಲ್ಲಿ ನಡೆದ ಪಂದ್ಯಾವಳಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ನಂದಿನಿ ಲೇಔಟ್ ವಾರ್ಡ್ ಹಾಗೂ ನಾಗಪುರ ವಾರ್ಡ್ ತಂಡಗಳಿಗೆ ಆಕರ್ಷಕ ಟ್ರೋಫಿ ನೀಡಿ ಅಭಿನಂದಿಸಲಾಯಿತು.

ಬಹುಮಾನ ವಿತರಿಸಿ ಮಾತನಾಡಿದ ಮಂಜುನಾಥ್ ಗೌಡ ಅವರು, “ಕ್ರೀಡೆ ಕೇವಲ ಗೆಲುವು–ಸೋಲಿನ ಸ್ಪರ್ಧೆಯಲ್ಲ; ಅದು ಶಿಸ್ತು, ಪರಿಶ್ರಮ, ತಂಡದ ಮನೋಭಾವ ಮತ್ತು ನಾಯಕತ್ವದಂತಹ ಜೀವನಮೌಲ್ಯಗಳನ್ನು ಕಲಿಸುವ ವೇದಿಕೆ. ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಆಯೋಜಿಸಿದ ‘ಸಿಎಂ ಕಪ್’ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ವಿದ್ಯಾರ್ಥಿಯೂ ಅಭಿನಂದನೆಗೆ ಅರ್ಹರು,” ಎಂದು ತಿಳಿಸಿದ ಅವರು, ವಿಜೇತ ತಂಡಗಳನ್ನು ಅಭಿನಂದಿಸಿದರು.

“ಸೋತ ತಂಡಗಳು ನಿರಾಶರಾಗದೆ, ಈ ಅನುಭವವನ್ನು ಮುಂದಿನ ಸಾಧನೆಗೆ ಮೆಟ್ಟಿಲಾಗಿಸಿಕೊಳ್ಳಬೇಕು. ಯುವಕರು ಶಿಕ್ಷಣದ ಜೊತೆಗೆ ಕ್ರೀಡೆ, ಸಾಮಾಜಿಕ ಜವಾಬ್ದಾರಿ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಆರೋಗ್ಯವಂತ, ಶಿಸ್ತುಬದ್ಧ ಮತ್ತು ಜವಾಬ್ದಾರಿಯುತ ಯುವಶಕ್ತಿಯೇ ಬಲಿಷ್ಠ ಸಮಾಜದ ಆಧಾರ. ಪಂದ್ಯಾವಳಿಗೆ ಸಹಕಾರ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.” ಎಂದು ತಿಳಿಸಿದರು.

ಈ ವೇಳೆ ಬಿಬಿಎಂಪಿ ಮಾಜಿ ಸದಸ್ಯರಾದ ಎಸ್.ಕೇಶವಮೂರ್ತಿ, ಕೆಪಿಸಿಸಿ ಸಂಯೋಜಕರಾದ ರವಿ, ಯುವ ಕಾಂಗ್ರೆಸ್ ಕಾನೂನು ಘಟಕದ ರಾಜ್ಯಾಧ್ಯಕ್ಷರಾದ ಶ್ರೀಧರ್ ಜಾಧವ್, ಮಾಧ್ಯಮ ಘಟಕದ ರಾಜ್ಯಾಧ್ಯಕ್ಷರಾದ ದೀಪಕ್ ಗೌಡ ಪಿ., ಸಾಂಸ್ಕೃತಿಕ ಮತ್ತು ಕ್ರೀಡಾ ಘಟಕದ ಅಧ್ಯಕ್ಷರಾದ ಭರತ್ ಯಾದವ್ ಜೆ., ರಾಜ್ಯ ಕಾರ್ಯದರ್ಶಿಗಳಾದ ಅನಿಲ್ ಕುಮಾರ್, ಹನೀಫ್ ಖುರೇಷಿ, ಮಹಾಲಕ್ಷ್ಮಿ ಲೇಔಟ್ ಅಸೆಂಬ್ಲಿ ಅಧ್ಯಕ್ಷರಾದ ಸ್ಯಾಮ್ಯುಯೆಲ್ ಸೇರಿದಂತೆ ಯುವ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ