
ಸ್ವಾತಂತ್ರ್ಯ ಬಂದು ದಶಕಗಳು ಕಳೆದರೂ, ಹಸಿವು ನೀಗಿಸುವ ಅನ್ನದಾತ ಇಂದು ತನ್ನ ಪ್ರತಿಯೊಂದು ಹಕ್ಕುಗಳಿಗಾಗಿಯೂ ಬೀದಿಗಿಳಿದು ಹೋರಾಡಬೇಕಾದ ಸಂಧಿಗ್ಧ ಪರಿಸ್ಥಿತಿಯಲ್ಲಿದ್ದಾನೆ. ಇದಕ್ಕೆಲ್ಲ ಮೂಲ ಕಾರಣವೇನೆಂದರೆ, ಕಾನೂನುಗಳನ್ನು ರೂಪಿಸುವಲ್ಲಿ ರೈತನ ನೈಜ ಸಮಸ್ಯೆಗಳನ್ನು ಅರಿತ ಪ್ರತಿನಿಧಿಗಳಿಲ್ಲದಿರುವುದು.
ಸರಕಾರಗಳು ಸಾಲ ಮನ್ನಾ, ಉಚಿತ ವಿದ್ಯುತ್ ಮುಂತಾದ ತಾತ್ಕಾಲಿಕ ಯೋಜನೆಗಳನ್ನು ಘೋಷಿಸುತ್ತವೆ. ಆದರೆ, ಇವು ರೈತನ ಬದುಕಿನ ಮೂಲಭೂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವುದಿಲ್ಲ.
ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗದೆ ರೈತ ಕಂಗಾಲಾಗಿದ್ದಾನೆ.
ಕೃಷಿ ಮಾರುಕಟ್ಟೆಗಳಲ್ಲಿ ಮಧ್ಯವರ್ತಿಗಳನ್ನು ನಿಯಂತ್ರಿಸಲಾಗದೇ ಲಾಭ ಬೆಳೆದವರ ಪಾಲಾಗದೇ ಮಧ್ಯವರ್ತಿಗಳೇ ಅದರ ಲಾಭ ಪಡೆಯುವಂತಾಗಿದೆ!
ಕಳಸಾ – ಬಂಡೂರಿಯಂತಹ ಪ್ರಮುಖ ಯೋಜನೆಗಳು ದಶಕಗಳಿಂದ ಹೋರಾಟದ ಹಂತದಲ್ಲೇ ಇವೆ. ಕಾವೇರಿ ವಿವಾದ ಬಗೆಹರಿಯುತ್ತಿಲ್ಲ!
ಪ್ರಜಾಪ್ರಭುತ್ವದ ಅಡಿಯಲ್ಲಿ ಪ್ರತಿಯೊಂದು ವರ್ಗಕ್ಕೂ ತನ್ನದೇ ಆದ ಪ್ರಾತಿನಿಧ್ಯವಿರಬೇಕು. ಆದರೆ, ರೈತ ಸಮೂಹವು ದೊಡ್ಡದಾಗಿದ್ದರೂ ಶಾಸನ ಸಭೆಗಳಲ್ಲಿ ಅವರ ಧ್ವನಿಯಾಗಿ ಮಾತನಾಡುವ ರೈತ ಮುಖಂಡರ ಸಂಖ್ಯೆ ತೀರಾ ಕಡಿಮೆ.
ಈ ಕಾರಣದಿಂದಾಗಿಯೇ ಯಾರ ಪರವಾಗಿ ಕಾನೂನುಗಳು ಜಾರಿಯಾಗಬೇಕಾಗಿದ್ದವೋ, ಅವರನ್ನೇ ಶಾಸನ ಸಭೆಯಿಂದ ಹೊರಗಿಡಲಾಗಿದೆ.
ಈಗ ಹೇಳಿ ರೈತರ ಪರ ಅನ್ನುವವರ ಆ ಕಾನೂನುಗಳು ಎಷ್ಟು ಪರಿಣಾಮಕಾರಿಯಾಗಿ, ಮತ್ತು ಪ್ರಾಯೋಗಿಕವಾಗಿರುತ್ತವೆ?
ನಮ್ಮನ್ನಾಳಿದ ಹಾಗೂ ನಮ್ಮನ್ನಾಳುತ್ತಿರುವ ಸರಕಾರಗಳು
ಜನರಿಂದ ತಿರಸ್ಕರಿಸಲ್ಪಟ್ಟವರನ್ನು ಅಥವಾ ರಾಜಕೀಯವಾಗಿ ಓಲೈಸಬೇಕಾದವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುತ್ತಿವೆ. ಆದರೆ ರೈತರನ್ನೇ ನಿರ್ಲಕ್ಷಿಸಿದೆ.
ಕೃಷಿ ತಜ್ಞರು ಅಥವಾ ನೈಜ ರೈತ ಮುಖಂಡರು ಅಲ್ಲಿರಬೇಕಿತ್ತು. ದಿವಂಗತ ಪ್ರೊ. ನಂಜುಂಡಸ್ವಾಮಿ ಅಥವಾ ಪುಟ್ಟಣ್ಣಯ್ಯನವರಂತಹ ಹೋರಾಟಗಾರರ ಜ್ಞಾನವನ್ನು ಸದನಗಳು ಬಳಸಿಕೊಳ್ಳುವಲ್ಲಿ ಸಂಪೂರ್ಣವಾಗಿ ಸೋತಿವೆ.
ಅಧ್ಯಯನದ ಹೆಸರಲ್ಲಿ
ಸಚಿವರು ಮತ್ತು ಶಾಸಕರು ಕೃಷಿ ಅಧ್ಯಯನದ ಹೆಸರಿನಲ್ಲಿ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಆದರೆ ಆ ಸಂಶೋಧನೆ ನಮ್ಮ ನೆಲದ ಕೃಷಿಗೆ ಎಷ್ಟು ಬಳಕೆಯಾಗಿದೆ? ನಮ್ಮಲ್ಲೇ ಇರುವ ಅನುಭವೀ ರೈತರಿಂದ ಅಧ್ಯಯನ ನಡೆಸುವ ಮನಸ್ಥಿತಿ ಸರಕಾರಗಳಿಗೇಕಿಲ್ಲ?
ಇಂದು ರೈತರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುವ, ಓಲೈಸುವ ತಂತ್ರಗಾರಿಕೆಯನ್ನು ಎಲ್ಲಾ ಸರಕಾರಗಳು ಮಾಡುತ್ತಾ ಬಂದಿವೆ!
ರೈತರೇ ತಮ್ಮ ಸಮಸ್ಯೆಗಳಿಗೆ ಕಾನೂನನ್ನು ರೂಪಿಸುವ ವ್ಯವಸ್ಥೆಯ ಭಾಗವಾಗಬೇಕು
ಆ ನಿಟ್ಟಿನಲ್ಲಿ ಸಂವಿಧಾನದ ಅನುಚ್ಛೇದ 171(3) ಕ್ಕೆ ತಿದ್ದುಪಡಿ ತರುವ ಮೂಲಕ ವಿಧಾನ ಪರಿಷತ್ತಿನಲ್ಲಿ ರೈತರಿಗೆ ವಿಶೇಷ ಪ್ರಾತಿನಿಧ್ಯ ಕಲ್ಪಿಸುವುದು ಅತ್ಯಗತ್ಯ.
ಆಗ ರೈತ ಸಂಘಟನೆಗಳು ಕೇವಲ ಬೀದಿ ಹೋರಾಟಕ್ಕೆ ಸೀಮಿತವಾಗದೆ, ಶಾಸನ ಸಭೆಯೊಳಗೆ ರೈತಪರ ಕಾನೂನುಗಳನ್ನು ರೂಪಿಸಲು ಒತ್ತಾಯಿಸುವ ಧ್ವನಿ ಗಟ್ಟಿಗೊಳ್ಳಲು ಸಾಧ್ಯ!
ರೈತರು ಕೇವಲ ಘೋಷಣೆಗಳಿಗೆ ಸೀಮಿತವಾಗಬಾರದು. ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಅಥವಾ ಕನಿಷ್ಠ ಪಕ್ಷ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ರೈತರ ಪಾಲಿಲ್ಲದಿದ್ದರೆ ಕೃಷಿ ಜಮೀನುಗಳು ಅಭಿವೃದ್ಧಿಯ ಹೆಸರಿನಲ್ಲಿ ಮಾಯವಾಗುವುದರಲ್ಲಿ ಸಂದೇಹವಿಲ್ಲ. ರೈತರ ಪರವಾಗಿ ಮಾತನಾಡುವವರಿಗಿಂತ, ಸ್ವತಃ ರೈತರೇ ಪ್ರತಿನಿಧಿಗಳಾಗುವುದು ಇಂದಿನ ತುರ್ತು ಅಗತ್ಯ.
ಅನುಚ್ಛೇದ 171(3) ತಿದ್ದುಪಡಿ ಮಾಡಿ, ರೈತರನ್ನು ವಿದಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಿ!

ಭಾಸ್ಕರ ಎಂ ಮುದೇನೂರು
ನ್ಯಾಯವಾದಿಗಳು ಹಾಗೂ ರಾಜ್ಯಾಧ್ಯಕ್ಷರು
ಅನುಚ್ಛೇದ 171(3) ತಿದ್ದುಪಡಿ ಹೋರಾಟ ಸಮಿತಿ-ಕರ್ನಾಟಕ
