ಲೇಖನ: ಬಸವರಾಜ ಮುದ್ರಿಕಿ
“ರಾಷ್ಟ್ರವೇ ಮೊದಲು, ಸ್ವಾರ್ಥ ನಂತರ” ಎಂಬ ತತ್ವವನ್ನು ಬರಿಯ ಘೋಷಣೆಯಾಗಿ ಉಳಿಸಿಕೊಳ್ಳದೆ, ಅಕ್ಷರಶಃ ತಮ್ಮ ಬದುಕಿನ ಉಸಿರಾಗಿಸಿಕೊಂಡವರು ಆದರಣೀಯ ಗೋಪಾಲ್ ಜೀ. ಎಂ.ಎಸ್.ಸಿ ಪದವಿಯಲ್ಲಿ ಚಿನ್ನದ ಪದಕ ಗಳಿಸಿ, ಉನ್ನತ ಉದ್ಯೋಗ ಮತ್ತು ಸುಖೀ ಜೀವನದ ಎಲ್ಲಾ ಬಾಗಿಲುಗಳು ತೆರೆದಿದ್ದರೂ, ಅದೆಲ್ಲವನ್ನೂ ಲೀಲಾಜಾಲವಾಗಿ ತ್ಯಜಿಸಿ ರಾಷ್ಟ್ರ ಸೇವೆಯ ಹಾದಿಯನ್ನು ತುಳಿದು, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನಿಷ್ಠಾವಂತ ಪ್ರಚಾರಕರಾಗಿ ಅವರು ಸಾಗುತ್ತಿರುವ ದಾರಿ ದಿಗಂತದಷ್ಟು ವಿಶಾಲವಾದುದು.
ಇಂದು ವಿಶ್ವ ಹಿಂದೂ ಪರಿಷತ್ನ (VHP) ಕೇಂದ್ರೀಯ ಸಹ ಕಾರ್ಯದರ್ಶಿಗಳಾಗಿ ಅವರು ನಿರ್ವಹಿಸುತ್ತಿರುವ ಜವಾಬ್ದಾರಿ ಕೇವಲ ಒಂದು ಹುದ್ದೆಯಲ್ಲ, ಅದು ಅವರ ಧರ್ಮನಿಷ್ಠೆಯ ಸಂಕೇತ. ವಿಶೇಷವಾಗಿ, ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರ ನಿರ್ಮಾಣದ ಐದು ವರ್ಷಗಳ ಕಠಿಣ ಹಾದಿಯಲ್ಲಿ ಅವರು ಹಗಲಿರುಳು ನಡೆಸಿದ ಪರಿಶ್ರಮ, ಕೋಟ್ಯಾಂತರ ಹಿಂದೂಗಳ ಶತಮಾನದ ಕನಸನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಇದು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿಯುವ ಸತ್ಯ.
ಆದರೆ, ದುರದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ಇಂತಹ ಸೇವಾ ತಪಸ್ವಿಯವರ ವಿರುದ್ಧ ಕೆಲವು ವಲಯಗಳಿಂದ ಕೇಳಿಬರುತ್ತಿರುವ ಆರೋಪಗಳು ಮತ್ತು ಹರಡುತ್ತಿರುವ ಅಪಪ್ರಚಾರಗಳು ಅತ್ಯಂತ ನೋವಿನ ಸಂಗತಿ. ಸಾರ್ವಜನಿಕ ಜೀವನದಲ್ಲಿರುವವರ ಮೇಲೆ ಟೀಕೆಗಳು ಬರುವುದು ಸಹಜವಾದರೂ, ಅವು ವೈಯಕ್ತಿಕ ದ್ವೇಷದಿಂದ ಕೂಡಿದ್ದರೆ ಅಥವಾ ದುರುದ್ದೇಶಪೂರಿತವಾಗಿದ್ದರೆ ಅದು ಸಮಾಜದ ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾವುದೇ ಆರೋಪದ ಸತ್ಯಾಸತ್ಯತೆಯನ್ನು ನ್ಯಾಯಸಮ್ಮತ ತನಿಖೆ ಮತ್ತು ಕಾನೂನು ಪ್ರಕ್ರಿಯೆಯ ಮೂಲಕವೇ ನಿರ್ಧರಿಸಬೇಕು.
ಸಾಮಾಜಿಕ ಜಾಲತಾಣಗಳ ವದಂತಿಗಳು ಅಥವಾ ಪೂರ್ವಾಗ್ರಹ ಪೀಡಿತ ಮನಸ್ಸುಗಳ ಮಾತುಗಳನ್ನು ಆಧರಿಸಿ, ದಶಕಗಳ ಸುದೀರ್ಘ ಸೇವೆಯನ್ನು ಪ್ರಶ್ನಿಸುವುದು ಅಥವಾ ತೀರ್ಪು ನೀಡುವುದು ಎಷ್ಟರಮಟ್ಟಿಗೆ ಸರಿ?
ತ್ಯಾಗಮೂರ್ತಿಗಳನ್ನು ಅಪಪ್ರಚಾರದ ಕತ್ತಲೆಯಲ್ಲಿ ಮರೆಮಾಚಲು ಸಾಧ್ಯವಿಲ್ಲ. ಸತ್ಯ ಎಂಬುದು ಸೂರ್ಯನಿದ್ದಂತೆ, ಅದನ್ನು ಸುಳ್ಳಿನ ಮೋಡಗಳು ತಾತ್ಕಾಲಿಕವಾಗಿ ಮುಚ್ಚಬಲ್ಲವೇ ಹೊರತು ಸಂಪೂರ್ಣವಾಗಿ ಮರೆಸಲು ಸಾಧ್ಯವಿಲ್ಲ.
ರಾಷ್ಟ್ರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರ ಗೌರವಕ್ಕೆ ದಕ್ಕೆ ತರಲು ನಡೆಸುವ ಯಾವುದೇ ಕುತಂತ್ರಗಳು ಅಂತಿಮವಾಗಿ ಸೋಲುತ್ತವೆ.
ಶ್ರೀರಾಮನ ಕಾರ್ಯಕ್ಕಾಗಿ ತಮ್ಮ ಜೀವನವನ್ನು ಅರ್ಪಿಸಿಕೊಂಡ ಸೇವಕರಿಗೆ ಶ್ರೀರಾಮನೇ ಸಾಕ್ಷಿ. ಸತ್ಯ ಮತ್ತು ಧರ್ಮದ ಹಾದಿಯಲ್ಲಿ ನಡೆಯುವವರಿಗೆ ಕಾಲವೇ ಉತ್ತರ ನೀಡುತ್ತದೆ.
ಅಪಪ್ರಚಾರಗಳು ಬಂದು ಹೋಗುತ್ತವೆ, ಆದರೆ ರಾಷ್ಟ್ರಸೇವೆಯ ಮಹಾಯಜ್ಞದಲ್ಲಿ ಬೆವರು ಸುರಿಸಿದವರ ಕೀರ್ತಿ ಶಾಶ್ವತವಾಗಿ ಉಳಿಯುತ್ತದೆ.
