ಚಿತ್ತಾಪುರ: ಕ್ಷೇತ್ರದ ಕೊಲ್ಲೂರು ಗ್ರಾಮದ ಸಾಹಿತಿಗಳು ಹಾಗೂ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಮೋಹನ ಎಸ್. ಅವರ ಅಕಾಲಿಕ ನಿಧನಕ್ಕೆ ರಾಜ್ಯ ಬಿಜೆಪಿ ಮುಖಂಡರಾದ ಆರ್. ರುದ್ರಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಇಂದು ಮೃತರ ನಿವಾಸಕ್ಕೆ ಭೇಟಿ ನೀಡಿದ ಆರ್. ರುದ್ರಯ್ಯ ಅವರು, ಪಾರ್ಥಿವ ಶರೀರದ ದರ್ಶನ ಪಡೆದು ಪುಷ್ಪ ನಮನ ಸಲ್ಲಿಸಿದರು. ನಂತರ ಶೋಕತಪ್ತ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ರುದ್ರಯ್ಯ ಅವರು, “ಮೋಹನ ಎಸ್. ಅವರು ಕೇವಲ ಸರ್ಕಾರಿ ನೌಕರರಾಗಿ ಮಾತ್ರವಲ್ಲದೆ, ಸಾಹಿತ್ಯ ಕ್ಷೇತ್ರದ ಮೂಲಕವೂ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಸರಳ ವ್ಯಕ್ತಿತ್ವ ಮತ್ತು ಸಮಾಜದ ಅಭಿವೃದ್ಧಿಗಾಗಿ ಅವರು ಸಲ್ಲಿಸಿದ ನಿಷ್ಠಾವಂತ ಸೇವೆಗಳು ಎಂದಿಗೂ ಸ್ಮರಣೀಯ. ಅವರ ಅಗಲಿಕೆಯಿಂದ ಕೊಲ್ಲೂರು ಗ್ರಾಮಕ್ಕೆ ಮಾತ್ರವಲ್ಲದೆ ಇಡೀ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ,” ಎಂದು ವಿಷಾದಿಸಿದರು.
“ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಕರುಣಿಸಲಿ” ಎಂದು ಅವರು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಶರಣಪ್ಪ ತಳವಾರ್, ಕೊಲ್ಲೂರು ಗ್ರಾಮದ ಪ್ರಮುಖ ಮುಖಂಡರು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು
