Friday, September 25, 2026
HomeUncategorizedನೇಕಾರರ ಸಮಸ್ಯೆಗಳಿಗೆ ಪರಿಹಾರಕ್ಕೆ ಸರ್ಕಾರ ಬದ್ಧ; ಬೇಡಿಕೆಗಳ ಕುರಿತು ಸಿಎಂ ಜೊತೆ ಚರ್ಚೆ: ಸಚಿವ ರುದ್ರಪ್ಪ...

ನೇಕಾರರ ಸಮಸ್ಯೆಗಳಿಗೆ ಪರಿಹಾರಕ್ಕೆ ಸರ್ಕಾರ ಬದ್ಧ; ಬೇಡಿಕೆಗಳ ಕುರಿತು ಸಿಎಂ ಜೊತೆ ಚರ್ಚೆ: ಸಚಿವ ರುದ್ರಪ್ಪ ಲಮಾಣಿ

*ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ರಾಜ್ಯದ ವಿವಿಧ ಭಾಗಗಳ ನೇಕಾರರೊಂದಿಗೆ ನೇರ ಸಂವಾದ** *ಸಾಲದ ಮಿತಿ ಹೆಚ್ಚಳ, ನೇಕಾರ ಸಮ್ಮಾನ, ವಿದ್ಯಾರ್ಥಿವೇತನ, ಮಾಶಾಸನ ಸೇರಿದಂತೆ ಹಲವು ಬೇಡಿಕೆಗಳ ಕುರಿತು ಚರ್ಚೆ** *ಸರ್ಕಾರಿ ಸಮವಸ್ತ್ರ ಹಾಗೂ ಬಟ್ಟೆ ಖರೀದಿಯಲ್ಲಿ KHDC, KSTIDCL ಮತ್ತು ಕಾವೇರಿ ಹ್ಯಾಂಡ್‌ಲೂಮ್ಸ್‌ಗೆ ಆದ್ಯತೆ ನೀಡಲು ಪ್ರಸ್ತಾವನೆ**ಬೆಂಗಳೂರು, ಸೆಪ್ಟೆಂಬರ್ 24:* ನೇಕಾರರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಬಲಪಡಿಸುವುದರ ಜೊತೆಗೆ ಅವರ ಉತ್ಪನ್ನಗಳಿಗೆ ಸ್ಥಿರ ಮಾರುಕಟ್ಟೆ ಕಲ್ಪಿಸಲು ಸರ್ಕಾರ ಬದ್ಧವಾಗಿದ್ದು, ಸಂವಾದದಲ್ಲಿ ವ್ಯಕ್ತವಾದ ಬೇಡಿಕೆಗಳನ್ನು ಕ್ರೋಢೀಕರಿಸಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಕ್ಕರೆ ಮತ್ತು ಜವಳಿ ಸಚಿವ *ರುದ್ರಪ್ಪ ಲಮಾಣಿ* ಭರವಸೆ ನೀಡಿದರು.

ವಿಕಾಸಸೌಧದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಆಯೋಜಿಸಿದ್ದ **ನೇಕಾರರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ** ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೇಕಾರರು, ಕೈಮಗ್ಗ ಸಹಕಾರ ಸಂಘಗಳ ಪ್ರತಿನಿಧಿಗಳು ಹಾಗೂ ಉದ್ಯಮಿಗಳ ಅಹವಾಲು ಮತ್ತು ಸಲಹೆಗಳನ್ನು ಸಚಿವರು ಆಲಿಸಿದರು.*“ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ನೇಕಾರರೊಂದಿಗೆ ನೇರ ಸಂವಾದ ನಡೆಸಲಾಗಿದೆ. ನೇಕಾರರ ಜೀವನೋಪಾಯ, ಸಾಮಾಜಿಕ ಭದ್ರತೆ, ಹಣಕಾಸು ನೆರವು ಮತ್ತು ಮಾರುಕಟ್ಟೆಗೆ ಸಂಬಂಧಿಸಿದ ಬೇಡಿಕೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹಂತ ಹಂತವಾಗಿ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು,”* ಎಂದು ಸಚಿವರು ಹೇಳಿದರು.ಸಂವಾದದಲ್ಲಿ *ನೇಕಾರಿಕೆ ಉದ್ದೇಶಗಳಿಗೆ 0% ಹಾಗೂ 3% ಬಡ್ಡಿದರದಲ್ಲಿ ನೀಡುವ ಸಾಲದ ಮಿತಿಯನ್ನು ಕ್ರಮವಾಗಿ ₹2 ಲಕ್ಷದಿಂದ ₹5 ಲಕ್ಷಕ್ಕೆ ಹಾಗೂ ₹5 ಲಕ್ಷದಿಂದ ₹10 ಲಕ್ಷಕ್ಕೆ ಹೆಚ್ಚಿಸುವುದು*, 0% ಬಡ್ಡಿದರದ ಕ್ಲೇಮ್‌ಗಳಿಗೆ *GST ವಿನಾಯಿತಿ* ನೀಡುವ ವಿಷಯ ಸೇರಿದಂತೆ ಹಣಕಾಸು ನೆರವಿಗೆ ಸಂಬಂಧಿಸಿದ ಹಲವು ಬೇಡಿಕೆಗಳ ಕುರಿತು ಚರ್ಚಿಸಲಾಯಿತು.ಇದರ ಜೊತೆಗೆ *ನೇಕಾರರ ಮಕ್ಕಳಿಗೆ ವಿದ್ಯಾರ್ಥಿವೇತನ, ನೇಕಾರ ಸಮ್ಮಾನ ಯೋಜನೆಯ ನೆರವು ಹೆಚ್ಚಳ, ಕಟ್ಟಡ ಕಾರ್ಮಿಕರಿಗೆ ನೀಡುವ ಮಾದರಿಯಲ್ಲೇ ವೃತ್ತಿಪರ ನೇಕಾರರಿಗೂ ಕಾರ್ಮಿಕ ಕಲ್ಯಾಣ ಸೌಲಭ್ಯಗಳನ್ನು ವಿಸ್ತರಿಸುವುದು, 60 ವರ್ಷ ಮೇಲ್ಪಟ್ಟ ನೇಕಾರರಿಗೆ ಮಾಶಾಸನ ಹಾಗೂ ನೇಕಾರರಿಗೆ ನಿವೇಶನ ಒದಗಿಸುವ* ಬೇಡಿಕೆಗಳನ್ನು ಪ್ರತಿನಿಧಿಗಳು ಮುಂದಿಟ್ಟರು.ಆತ್ಮಹತ್ಯೆಗೆ ಶರಣಾದ ನೇಕಾರರ ಕುಟುಂಬಗಳಿಗೆ ಸಂಬಂಧಿಸಿದಂತೆ *ಬಾಕಿ ಇರುವ ಪ್ರಸ್ತಾವನೆಗಳನ್ನು ತ್ವರಿತವಾಗಿ ಪರಿಶೀಲಿಸಿ ಪರಿಹಾರ ಕಲ್ಪಿಸುವಂತೆ* ನೇಕಾರರ ಪ್ರತಿನಿಧಿಗಳು ಮನವಿ ಮಾಡಿದರು.ರಾಜ್ಯ ಸರ್ಕಾರ ನೀಡುತ್ತಿರುವ *10 HP ವರೆಗಿನ ವಿದ್ಯುತ್ ಸಬ್ಸಿಡಿ ನೇಕಾರಿಕೆ ಚಟುವಟಿಕೆಗಳಿಗೆ ನೆರವಾಗುತ್ತಿದೆ* ಎಂದು ತಿಳಿಸಿದ ಪ್ರತಿನಿಧಿಗಳು,

ಹಲವು ವರ್ಷಗಳಿಂದ ಬಾಕಿ ಇರುವ ಸುಮಾರು *₹9.50 ಕೋಟಿ ವಿದ್ಯುತ್ ಸಬ್ಸಿಡಿ ಸಂಬಂಧಿತ ಸಮಸ್ಯೆಯನ್ನು ಪರಿಹರಿಸುವಂತೆ* ಕೋರಿದರು. ಪ್ರಮುಖ ನಗರಗಳಲ್ಲಿ ವರ್ಷಪೂರ್ತಿ ಕೈಮಗ್ಗ ಮೇಳಗಳನ್ನು ನಡೆಸಿ ನೇಕಾರರಿಗೆ ನಿರಂತರ ಮಾರುಕಟ್ಟೆ ಕಲ್ಪಿಸುವ ಬೇಡಿಕೆಯನ್ನೂ ಮುಂದಿಟ್ಟರು.*“ಬಾಕಿ ವಿದ್ಯುತ್ ಬಿಲ್ ಮತ್ತು ಸಬ್ಸಿಡಿ ವಿಷಯವನ್ನು ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ನೇಕಾರರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವುದರ ಜೊತೆಗೆ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸುವುದೂ ಸರ್ಕಾರದ ಆದ್ಯತೆಯಾಗಿದೆ,”* ಎಂದು ರುದ್ರಪ್ಪ ಲಮಾಣಿ ಹೇಳಿದರು.*ಸರ್ಕಾರಿ ಖರೀದಿಯಲ್ಲಿ ನೇಕಾರರ ಉತ್ಪನ್ನಗಳಿಗೆ ಆದ್ಯತೆ*ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ನಿಗಮಗಳಿಗೆ ಅಗತ್ಯವಿರುವ *ಸಮವಸ್ತ್ರ ಹಾಗೂ ಇತರೆ ಬಟ್ಟೆಗಳ ಖರೀದಿಯಲ್ಲಿ KHDC, KSTIDCL ಮತ್ತು ಕಾವೇರಿ ಹ್ಯಾಂಡ್‌ಲೂಮ್ಸ್‌ಗೆ ಆದ್ಯತೆ ನೀಡುವಂತೆ* ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವರು ತಿಳಿಸಿದರು.*ಹೊಸ ಜವಳಿ ನೀತಿಯಲ್ಲಿ ನೇಕಾರರ ಅಭಿವೃದ್ಧಿ, ಉತ್ಪಾದನೆ, ಮಾರುಕಟ್ಟೆ ಅವಕಾಶ ಮತ್ತು ಉದ್ಯಮ ವಿಸ್ತರಣೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ರೇಷ್ಮೆ ವಲಯವನ್ನೂ ನೀತಿಯ ವ್ಯಾಪ್ತಿಗೆ ತರಲಾಗಿದೆ* ಎಂದು ಅವರು ಹೇಳಿದರು.*“ನೇಕಾರರ ಅಭಿವೃದ್ಧಿ ಕೇವಲ ಹಣಕಾಸು ನೆರವಿಗೆ ಸೀಮಿತವಾಗಬಾರದು. ಸಾಮಾಜಿಕ ಭದ್ರತೆ, ಮಕ್ಕಳ ಶಿಕ್ಷಣ, ಮಾರುಕಟ್ಟೆ, ಸಾಲ ಸೌಲಭ್ಯ ಮತ್ತು ಸರ್ಕಾರದ ಖರೀದಿ ವ್ಯವಸ್ಥೆಯವರೆಗೆ ಸಮಗ್ರ ಬೆಂಬಲ ದೊರೆಯಬೇಕು. ಹೊಸ ಜವಳಿ ನೀತಿಯಲ್ಲೂ ಈ ದೃಷ್ಟಿಕೋನಕ್ಕೆ ಆದ್ಯತೆ ನೀಡಲಾಗುತ್ತಿದೆ,”* ಎಂದು ಸಚಿವ ರುದ್ರಪ್ಪ ಲಮಾಣಿ ಹೇಳಿದರು.ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಐಎಎಸ್; ಕೈಮಗ್ಗ ಮತ್ತು ಜವಳಿ ಇಲಾಖೆ ಆಯುಕ್ತ ಎ.ಬಿ. ಬಸವರಾಜು; ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗೇಂದ್ರ ಕುಮಾರ್; ಕಾವೇರಿ ಹ್ಯಾಂಡ್‌ಲೂಮ್ಸ್ ಅಧ್ಯಕ್ಷ ಬಿ.ಜೆ. ಗಣೇಶ್; ಕರ್ನಾಟಕ ರಾಜ್ಯ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಕೆ. ಗೌಡ; ಹೆಚ್ಚುವರಿ ನಿರ್ದೇಶಕರಾದ ಸಿ.ಎಸ್. ಯೋಗೇಶ್ ಮತ್ತು ಶ್ರೀಧರ್ ನಾಯಕ್, ಕಾವೇರಿ ಹ್ಯಾಂಡ್‌ಲೂಮ್ಸ್ ವ್ಯವಸ್ಥಾಪಕ ನಿರ್ದೇಶಕಿ ಸೌಮ್ಯ ಎಂ.; ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು, ನೇಕಾರರು, ಸಹಕಾರ ಸಂಘಗಳ ಪ್ರತಿನಿಧಿಗಳು ಹಾಗೂ ಉದ್ಯಮಿಗಳು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ