Thursday, August 6, 2026
Homeಉದ್ಯೋಗಕೃಷಿ ಪದವೀಧರರ ಆಕ್ರೋಶ: ವಿವಾದಾತ್ಮಕ ಕೆಇಎ ಪರೀಕ್ಷೆ ರದ್ದುಪಡಿಸುವಂತೆ ಎನ್. ರವಿ ಕುಮಾರ್ ಆಗ್ರಹ

ಕೃಷಿ ಪದವೀಧರರ ಆಕ್ರೋಶ: ವಿವಾದಾತ್ಮಕ ಕೆಇಎ ಪರೀಕ್ಷೆ ರದ್ದುಪಡಿಸುವಂತೆ ಎನ್. ರವಿ ಕುಮಾರ್ ಆಗ್ರಹ

ಬೆಂಗಳೂರು:
ರಾಜ್ಯದ ಐಸಿಎಆರ್ (ICAR) ಮಾನ್ಯತೆ ಪಡೆದ ಕೃಷಿ ವಿಶ್ವವಿದ್ಯಾಲಯಗಳ ಪದವೀಧರರ ಕೃಷಿ ಅಧಿಕಾರಿ ನೇಮಕಾತಿ ವಿವಾದ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಕೂಡಲೇ ವಿವಾದಾತ್ಮಕ ಮಾರ್ಗಸೂಚಿಯನ್ನು ಹಿಂಪಡೆದು ಕೆಇಎ (KEA) ಪರೀಕ್ಷೆಯನ್ನು ರದ್ದುಪಡಿಸಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಎನ್. ರವಿ ಕುಮಾರ್ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಸರ್ಕಾರದ ಧೋರಣೆಯನ್ನು ಖಂಡಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಮುಕ್ತ ಪತ್ರ ಬರೆದಿದ್ದಾರೆ.

ಪತ್ರದ ಪ್ರಮುಖ ಅಂಶ್ಯಗಳು:

  • 25 ದಿನಗಳಿಂದ ನಿರಂತರ ಹೋರಾಟ: ರಾಜ್ಯದ ಕೃಷಿ ಪದವೀಧರರು ತಮ್ಮ ನ್ಯಾಯಸಮ್ಮತ ಬೇಡಿಕೆಗಳಿಗಾಗಿ ಕಳೆದ 25ಕ್ಕೂ ಹೆಚ್ಚು ದಿನಗಳಿಂದ ಉಪವಾಸ ಸತ್ಯಾಗ್ರಹ, ಮನವಿ ಸಲ್ಲಿಕೆ ಹಾಗೂ ವಿವಿಧ ರೀತಿಯ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೂ ದಾಖಲಾಗಿದ್ದಾರೆ.

ಆದರೆ, ಸರ್ಕಾರ ಕೇವಲ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಫೋಟೋಶೂಟ್ ಮಾಡಿಸಿಕೊಳ್ಳುವುದರಲ್ಲಿ ಕಾಲಹರಣ ಮಾಡುತ್ತಿದೆಯೇ ಹೊರತು ಶಾಶ್ವತ ಪರಿಹಾರ ನೀಡುತ್ತಿಲ್ಲ ಎಂದು ಆಪಾದಿಸಲಾಗಿದೆ.

  • ಅರ್ಹತೆ ಇಲ್ಲದವರ ಸೇರ್ಪಡೆಗೆ ಆಕ್ಷೇಪ: ಮೂಲ ಕೃಷಿ ಅಧಿಕಾರಿ ನೇಮಕಾತಿ ಅಧಿಸೂಚನೆಯಲ್ಲಿ (30.05.2026) ರಾಯ್ ಟೆಕ್ನಾಲಜಿ ಯೂನಿವರ್ಸಿಟಿಯ ಬಿ.ಇ. ಬಯೋಟೆಕ್ನಾಲಜಿ ಪದವೀಧರರ ಕುರಿತು ಯಾವುದೇ ಉಲ್ಲೇಖವಿರಲಿಲ್ಲ. ಆದರೆ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಲೇ 20.06.2026ರಂದು ಆ ವಿಶ್ವವಿದ್ಯಾಲಯದ ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸಿ ಅದೇಶ ಹೊರಡಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಟೀಕಿಸಲಾಗಿದೆ.
  • ದೆಹಲಿ ರಾಜಕಾರಣದ ವಿರುದ್ಧ ವಾಗ್ದಾಳಿ: ಕಳೆದ ವಾರ ದೆಹಲಿಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳ ಪರವಾಗಿ ಮಾತನಾಡುವ ಮುಖ್ಯಮಂತ್ರಿಗಳು, ತಮ್ಮದೇ ರಾಜ್ಯದ ಬೀದಿಗಳಲ್ಲಿ ಕಳೆದ 25 ದಿನಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಕೃಷಿ ಪದವೀಧರರ ಗೋಳನ್ನು ಕೇಳಿಸಿಕೊಳ್ಳಲು ಮುಂದಾಗದಿರುವುದು ಖಂಡನೀಯ. ದೆಹಲಿಯಲ್ಲಿ ರಾಜಕೀಯ ಮಾಡುವ ಮೊದಲು ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯ ಕಾಪಾಡಿ ಎಂದು ಎಚ್ಚರಿಸಲಾಗಿದೆ.
  • ಸರ್ಕಾರದ ಮೌನಕ್ಕೆ ಪ್ರಶ್ನೆ: ಕಳೆದ ಮೂರು ವರ್ಷಗಳಿಂದ ಅಧಿಕಾರದಲ್ಲಿರುವ ಸರ್ಕಾರವು ಹಿಂದಿನ ನಿಯಮಗಳಲ್ಲಿ ದೋಷವಿದ್ದರೆ ಅವುಗಳನ್ನು ತಿದ್ದುಪಡಿ ಮಾಡದೆ, ಈಗ ಕೇವಲ ಇತರರ ಮೇಲೆ ಹೊಣೆ ಹೊರಿಸಿದರೆ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳು:

  • ವಿವಾದಾತ್ಮಕ ನೇಮಕಾತಿ ಮಾರ್ಗಸೂಚಿಯನ್ನು ತಕ್ಷಣ ಹಿಂಪಡೆಯಬೇಕು.
  • ಪ್ರಸ್ತುತ ನಿಗದಿಯಾಗಿರುವ ಕೆಇಎ (KEA) ಪರೀಕ್ಷೆಯನ್ನು ರದ್ದುಪಡಿಸಬೇಕು.
  • ಎಲ್ಲಾ ಐಸಿಎಆರ್ ಮಾನ್ಯತೆ ಪಡೆದ ಕೃಷಿ ಪದವೀಧರರಿಗೆ ಸಮಾನ ಅವಕಾಶ ಕಲ್ಪಿಸುವ ಹೊಸ ಮಾರ್ಗಸೂಚಿ ಪ್ರಕಟಿಸಬೇಕು.
  • ಆ ಬಳಿಕವಷ್ಟೇ ಹೊಸದಾಗಿ ಪರೀಕ್ಷೆ ನಡೆಸಬೇಕು.
    ವಿದ್ಯಾರ್ಥಿಗಳಿಗೆ ಪ್ರಚಾರಕ್ಕಿಂತ ನ್ಯಾಯ ಮುಖ್ಯವಾಗಿದ್ದು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಾವಿರಾರು ಅಭ್ಯರ್ಥಿಗಳ ಭವಿಷ್ಯವನ್ನು ರಕ್ಷಿಸಬೇಕು ಎಂದು ಎನ್. ರವಿ ಕುಮಾರ್ ಒತ್ತಾಯಿಸಿದ್ದಾರೆ.

ಹೆಚ್ಚಿನ ಸುದ್ದಿ