ಚನ್ನಮ್ಮನ ಕಿತ್ತೂರು: ಗ್ರಾಮೀಣ ಭಾಗದ ವಿಶಿಷ್ಟ ಜಾನಪದ ಕಲೆಯಾದ ಸೋಬಾನ ಪದಗಳನ್ನು ತಮ್ಮ ಸುಶ್ರಾವ್ಯ ಕಂಠದ ಮೂಲಕ ಜೀವಂತವಿಟ್ಟಿದ್ದ ಸಮೀಪದ ಮಾದನಭಾವಿ ಗ್ರಾಮದ ದ್ಯಾಮವ್ವನ ಗುಡಿ ಓಣಿ ನಿವಾಸಿ ಹಿರಿಯ ಗಾಯಕಿ ಮಲ್ಲಮ್ಮ ಹುಣಶಿಕಟ್ಟಿ (98) ಅವರು ಶುಕ್ರವಾರ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಮೃತರು ಓರ್ವ ಪುತ್ರ, ಸೊಸೆ ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಜಾನಪದ ಗಾಯನ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಮಲ್ಲಮ್ಮ ಅವರು ಮಾದನಭಾವಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅತ್ಯಂತ ಜನಪ್ರಿಯರಾಗಿದ್ದರು. ಮದುವೆ, ಮುಂಜಿವೆ, ತೊಟ್ಟಿಲು ಶಾಸ್ತ್ರ, ಸೀಮಂತ ಸೇರಿದಂತೆ ಪ್ರತಿಯೊಂದು ಶುಭ ಸಮಾರಂಭಗಳಿಗೂ ಇವರ ಸೋಬಾನ ಪದಗಳೇ ಕಳೆ ತರುತ್ತಿದ್ದವು. ಇವರ ಮಧುರ ಕಂಠದ ಗಾಯನಕ್ಕೆ ಮನಸೋಲದವರೇ ಇರಲಿಲ್ಲ.
ಗ್ರಾಮೀಣ ಭಾಗದ ಜನರು ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗಲೂ ಇವರಿಂದ ಹಾಡಿಸಿ, ಆ ಹಾಡಿನ ಸವಿಯಲ್ಲೇ ಮೈಮರೆತು ಶ್ರಮಪಡುತ್ತಿದ್ದರು. ಹಳ್ಳಿ ಹಬ್ಬ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಮಲ್ಲಮ್ಮ ಅವರ ಧ್ವನಿ ಒಂದು ಹೆಮ್ಮೆಯ ಗುರುತಾಗಿತ್ತು.
ಮಲ್ಲಮ್ಮ ಅವರ ಹಠಾತ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮಾದನಭಾವಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶೋಕದ ಛಾಯೆ ಆವರಿಸಿದೆ. ಅಂತಿಮ ದರ್ಶನಕ್ಕೆ ಆಗಮಿಸಿದ್ದ ನೂರಾರು ಅಭಿಮಾನಿಗಳು ಹಾಗೂ ಗ್ರಾಮಸ್ಥರು, “ಇನ್ಮುಂದೆ ನಮ್ಮೂರಿನ ಶುಭ ಸಮಾರಂಭಗಳಲ್ಲಿ ಆ ಮಧುರ ಸೋಬಾನ ಪದಗಳನ್ನು ಹಾಡಿ ಹರಸುವವರು ಯಾರು?” ಎಂದು ಕಣ್ಣೀರು ಹಾಕುತ್ತಾ ಕಂಬನಿ ಮಿಡಿದರು. ಮಲ್ಲಮ್ಮ ಅವರ ನಿಧನದಿಂದ ಗ್ರಾಮೀಣ ಜಾನಪದ ಕಲೆಯ ಒಂದು ಸುಂದರ ಕೊಂಡಿ ಕಳಚಿದಂತಾಗಿದೆ.
