ಯಾದಗಿರಿಯಲ್ಲಿ ಸಿಂದ್ದೂಳ್ ಸಮುದಾಯದ ಪರ ಧ್ವನಿ ಮೊಳಗಿಸಿದ ಮುಖಂಡರು — ಸರ್ಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ
ಯಾದಗಿರಿ: ಪರಿಶಿಷ್ಟ ಜಾತಿಯ ಅಲೆಮಾರಿ ಸಿಂದ್ದೂಳ್ ಸಮುದಾಯವು ಹಲವು ವರ್ಷಗಳಿಂದ ಸಮರ್ಪಕ ಸರ್ಕಾರಿ ಸೌಲಭ್ಯಗಳಿಂದ ವಂಚಿತವಾಗಿದ್ದು, ಮನೆ ಹಾಗೂ ಮನೆ ಸಾಲ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಕರ್ನಾಟಕ ಸಿಂದ್ದೂಳ್ ಸಮಾಜ ರಾಜ್ಯ ಸಂಘದ ರಾಜ್ಯಾಧ್ಯಕ್ಷ ಶ್ರೀ ಶ್ರೀನಿವಾಸ ಎಸ್.ಆರ್. ಅವರು ಸರ್ಕಾರವನ್ನು ಒತ್ತಾಯಿಸಿದರು.


ಯಾದಗಿರಿಗೆ ಆಗಮಿಸಿದ ರಾಜ್ಯಾಧ್ಯಕ್ಷ ಶ್ರೀ ಶ್ರೀನಿವಾಸ ಎಸ್.ಆರ್. ಅವರು ಸಿಂದ್ದೂಳ್ ಸಮುದಾಯದ ಸಮಸ್ಯೆಗಳ ಕುರಿತು ಮುಖಂಡರೊಂದಿಗೆ ಚರ್ಚಿಸಿ, ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
“ಇಲ್ಲಿಯವರೆಗೆ ಯಾವುದೇ ಸಮರ್ಪಕ ಸೌಲಭ್ಯ ಸಿಗದೇ ಸಂಕಷ್ಟದಲ್ಲಿರುವ ಈ ಮುಗ್ಧ ಅಲೆಮಾರಿ ಸಮುದಾಯಕ್ಕೆ ಸರ್ಕಾರ ಯಾವಾಗ ಕಣ್ಣಿಗೆ ಕಾಣುತ್ತದೆ?” ಎಂದು ಪ್ರಶ್ನಿಸಿದ ಅವರು, ಸಮುದಾಯದ ಅರ್ಹ ಕುಟುಂಬಗಳಿಗೆ ಕೂಡಲೇ ಮನೆ, ಮನೆ ಸಾಲ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಅಲೆಮಾರಿ ಜೀವನ ನಡೆಸುತ್ತಿರುವ ಸಿಂದ್ದೂಳ್ ಸಮುದಾಯಕ್ಕೆ ಶಾಶ್ವತ ನೆಲೆ, ವಸತಿ, ಮನೆ ಸಾಲ ಹಾಗೂ ಜೀವನೋಪಾಯಕ್ಕೆ ಅಗತ್ಯವಾದ ಸರ್ಕಾರಿ ನೆರವು ದೊರಕಬೇಕು. ಸರ್ಕಾರವು ಈ ಸಮುದಾಯದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ತಲುಪಿಸಲು ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿಂದ್ದೂಳ್ ಸಮುದಾಯದ ಜಿಲ್ಲಾ ಮುಖಂಡ ಶ್ರೀ ಕಾಟೆಪ್ಪ ಸಿಂದ್ದೂಳ್ ಅವರು ಉಪಸ್ಥಿತರಿದ್ದು, ಸಮುದಾಯದ ಸಮಸ್ಯೆಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಂದ್ದೂಳ್ ಸಮುದಾಯದ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಅಲೆಮಾರಿ ಒಕ್ಕೂಟದ ಅಧ್ಯಕ್ಷರು ಹಾಗೂ ಕೊರಮ ಸಂಘದ ಜಿಲ್ಲಾ ಅಧ್ಯಕ್ಷರಾದ ಜಿ. ಯಲ್ಲಪ್ಪ ಭಜಂತ್ರಿ ಅವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಸಿಂದ್ದೂಳ್ ಸಮುದಾಯಕ್ಕೆ ನ್ಯಾಯಯುತವಾಗಿ ದೊರೆಯಬೇಕಾದ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವವರೆಗೆ ಸಮುದಾಯದ ಪರವಾಗಿ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವುದಾಗಿ ಅವರು ಭರವಸೆ ನೀಡಿದರು.
ಸರ್ಕಾರವು ಸಿಂದ್ದೂಳ್ ಸಮುದಾಯದ ಬಹುದಿನಗಳ ಬೇಡಿಕೆಗಳನ್ನು ನಿರ್ಲಕ್ಷಿಸದೆ, ತಕ್ಷಣವೇ ಅಗತ್ಯ ಕ್ರಮ ಕೈಗೊಂಡು ಅರ್ಹ ಕುಟುಂಬಗಳಿಗೆ ಮನೆ, ಮನೆ ಸಾಲ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಂದ್ದೂಳ್ ಸಮುದಾಯದ ಮುಖಂಡರು ಹಾಗೂ ಅಲೆಮಾರಿ ಸಮುದಾಯದ ಪ್ರತಿನಿಧಿಗಳು ಉಪಸ್ಥಿತರಿದ್ದರು.
