Monday, August 10, 2026
HomeUncategorizedವಿಶ್ವಕ್ಕೆ ಯೋಗದಿನದ ಕೊಡುಗೆ ಭಾರತದ್ದು :: ಒತ್ತಡ ನಿವಾರಣೆಗೆ ಯೋಗವೇ ಮದ್ದು: ವಿಜಯೇಂದ್ರ

ವಿಶ್ವಕ್ಕೆ ಯೋಗದಿನದ ಕೊಡುಗೆ ಭಾರತದ್ದು :: ಒತ್ತಡ ನಿವಾರಣೆಗೆ ಯೋಗವೇ ಮದ್ದು: ವಿಜಯೇಂದ್ರ

ಬೆಂಗಳೂರು: ಇಂದಿನ ಆಧುನಿಕ ದಿನದಲ್ಲಿ ನಾವೆಲ್ಲ ಒತ್ತಡದಲ್ಲಿದ್ದೇವೆ. ಅದಕ್ಕೆ ಯೋಗವೇ ಮದ್ದು ಎಂದು ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದ ಮುಂಭಾಗದಲ್ಲಿ ಇಂದು ಹಮ್ಮಿಕೊಂಡಿದ್ದ 12 ನೇ ಯೋಗ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಬಾರಿ ಸೌಹಾರ್ದತೆ ಮತ್ತು ಶಾಂತಿಗಾಗಿ ಯೋಗ ಎಂಬ ಧ್ಯೇಯದಡಿ ವಿಶ್ವ ಯೋಗದಿನವನ್ನು ಆಚರಿಸಲಾಗುತ್ತಿದೆ. ಜಗತ್ತಿನಲ್ಲಿ ಯುದ್ಧದಿಂದಾಗಿ ಸಾಕಷ್ಟು ತೊಂದರೆಯನ್ನು ನಾವೆಲ್ಲ ಅನುಭವಿಸುತ್ತಿದ್ದೇವೆ. ಇದಕ್ಕೆ ಪ್ರಮುಖ ಕಾರಣ ವಿಶ್ವಾಸದ ಕೊರತೆ. ಈ ವಿಶ್ವಾಸವನ್ನು ಯೋಗದಿಂದ ವೃದ್ಧಿಸಿಕೊಳ್ಳಲು ಸಾಧ್ಯವಿದೆ ಎಂದರು.
ಜಗತ್ತಿನಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಯೋಗದಿಂದ ಸಾಧ್ಯ ಎಂದು ಮೋದಿ ಜೀ ಅವರು ಹೇಳಿದ್ದಾರೆ. ಇಡೀ ಜಗತ್ತಿಗೆ ಯೋಗವನ್ನು ಕೊಡುಗೆ ನೀಡಿದ್ದು ಭಾರತ. 2014 ರ ಜೂನ್ 21 ರಂದು ವಿಶ್ವಸಂಶ್ಥೆ ಕೂಡ ಯೋಗವನ್ನು ಒಪ್ಪಿಕೊಂಡು ವಿಶ್ವ ಯೋಗ ದಿನ ಎಂದು ಘೋಷಣೆ ಮಾಡಿತ್ತು. ವಿಶ್ವ ಯೋಗ ದಿನ ಜಾರಿಗೆ ಬರಲು ಪ್ರಧಾನಿ ನರೇಂದ್ರ ಮೋದಿ ಅವರ ಶ್ರಮ ಸಾಕಷ್ಟು ಇದೆ ಎಂದು ಹೇಳಿದರು.
ಇಂದು ಎಲ್ಲರಿಗೂ ಒತ್ತಡ ಇದೆ. ಅದು ವಿದ್ಯಾರ್ಥಿ ಇರಬಹುದು, ರಾಜಕಾರಣಿಗಳು ಇರಬಹುದು. ಎಲ್ಲರಿಗೂ ಕಾರ್ಯದ ಒತ್ತಡ ಇದೆ. ಈ ಒತ್ತಡದ ನಡುವೆ ಸಮಾಧಾನವಾಗಿ ಕೆಲಸ ಮಾಡಲು ಯೋಗ ಸಹಕಾರಿ. ಮನಸಿನ ಸಮತೋಲನ ಕಾಪಾಡಲು ಯೋಗ ಬೇಕು. ದೈಹಿಕ ಆರೋಗ್ಯದ ಜೊತೆಗೆ ಮನಸಿನ ಆರೋಗ್ಯವೂ ಇದ್ದರೆ ಭವಿಷ್ಯ ಉಜ್ವಲವಾಗಲಿದೆ. ನಮ್ಮ ಭವಿಷ್ಯ ಉಜ್ವಲವಾಗಿದ್ದರೆ ದೇಶದ ಭವಿಷ್ಯ ಉಜ್ವಲವಾಗಲಿದೆ. ದೇಶದ ಭವಿಷ್ಯ ಉಜ್ವಲವಾದರೆ ವಿಶ್ವದ ಭವಿಷ್ಯ ಚೆನ್ನಾಗಿ ಇರಲಿದೆ ಎಂದು ವಿವರಿಸಿದರು.

ಪ್ರತಿದಿನ ಯೋಗ ಮಾಡೋಣ: ಡಾ. ಅಶ್ವತ್ಥನಾರಾಯಣ
ಒತ್ತಡ ನಿವಾರಣೆಗೆ ನಾವೆಲ್ಲ ಪ್ರತಿ ದಿನ ಯೋಗ ಮಾಡೋಣ. ನಮ್ಮ ಬದುಕು ಉತ್ತಮವಾಗಲು, ಉತ್ತಮ ಬದುಕು ಕಾಣಲು ಪ್ರತಿ ದಿನ ಯೋಗಾಭ್ಯಾಸ ಮಾಡಲೇಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ ಅವರು ಹೇಳಿದರು.
ಭಾರತೀಯ ಜನತಾ ಪಕ್ಷವಾಗಿ ಸಮಾಜದಲ್ಲಿ ಸುಧಾರಣೆ ತರಲು ನಾವು ಕೆಲಸ ಮಾಡುತ್ತಿದ್ದೇವೆ. ಪ್ರತಿಯೊಬ್ಬರ ಬದುಕು ಚೆನ್ನಾಗಿರಲು ಯೋಗ ಸಹಕಾರಿ. ಯೋಗ ಮಾಡಲು ಕೇವಲ ಮನಸು ಮತ್ತು ಉದ್ದೇಶ ಮಾತ್ರ ಸಾಕು. ಪ್ರತಿಯೊಬ್ಬರ ವ್ಯಕ್ವಿತ್ವ ರೂಪಿಸುವಲ್ಲಿ ಯೋಗ ಮಹತ್ವದ ಪಾತ್ರ ವಹಿಸಲಿದೆ ಎಂದರು.
ಕನ್ನಡ ಚಲನಚಿತ್ರ ನಟಿ ಕು. ಕಾರುಣ್ಯ ಗೌಡ ಅವರು ಮಾತನಾಡಿ, ವಿಶ್ವಕ್ಕೆ ಯೋಗ ನಮ್ಮ ದೇಶದ ಕೊಡುಗೆ ಎಂಬುದು ಹೆಮ್ಮೆಯ ಸಂಗತಿ. ದಿನದಲ್ಲಿ ಕೇವಲ 20 ನಿಮಿಷ ಯೋಗಾಭ್ಯಾಸ ಮಾಡುವ ಅಭ್ಯಾಸ ಇಟ್ಟುಕೊಂಡರೆ ಆರೋಗ್ಯ ಸುಧಾರಿಸಲಿದೆ. ಕೆಲವು ಆಸನಗಳನ್ನು ಮನೆಯಲ್ಲೇ ಮಾಡಬಹುದು. ಸಣ್ಣ ಆರೋಗ್ಯ ಸಮಸ್ಯೆಗೆ ಇಂದು ಆಸ್ಪತ್ರೆಗೆ ಹೋಗಬೇಕಾಗಿದೆ. ಇಂದು ಯೋಗ ಮಾಡಿದರೆ ಮುಂದೆ ಆರೋಗ್ಯವಾಗಿರುತ್ತೇವೆ. ಯೋಗ ದಿನದ ರೂಢಿಯಾಗಿಲಿ ಎಂದರು.
ಥಟ್ ಅಂತ ಹೇಳಿ ಖ್ಯಾತಿಯ ಡಾ. ನಾ. ಸೋಮೇಶ್ವರ ಅವರು ಮಾತನಾಡಿ, ಯೋಗದಿಂದ ಹಲವಾರು ಪ್ರಯೋಜನಗಳಿವೆ. ವೈಜ್ಞಾನಿಕವಾಗಿ ಇವು ಸಾಬೀತಾಗಿವೆ ಎಂದರು.
ಯೋಗ ಗುರುಗಳಾದ ಮಂಜುನಾಥ್ ಹಾಗೂ ಗೀತಾ ಮಂಜುನಾಥ್ ಅವರು ಯೋಗಭ್ಯಾಸವನ್ನು ಹೇಳಿಕೊಟ್ಟರು. ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಮತ್ತು ಪಕ್ಷದ ಪದಾಧಿಕಾರಿಗಳು, ವಿವಿಧ ಮೋರ್ಚಾ ಮುಖ್ಯಸ್ಥರು, ಪ್ರಕೋಷ್ಠಗಳ ಸಂಚಾಲಕರು, ಸಹ ಸಂಚಾಲಕರು ಸಾರ್ವಜನಿಕರು ಭಾಗವಹಿಸಿದ್ದರು.

ಹೆಚ್ಚಿನ ಸುದ್ದಿ