ಯಾದಗಿರಿ:
ಸ್ಥಳೀಯ ಶಾಸಕರು ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತವನ್ನು ಸಹಿಸದೆ, ನಗರದಲ್ಲಿ ಕೇವಲ ರಾಜಕೀಯ ಅಸ್ತಿತ್ವಕ್ಕಾಗಿ ಬಿಜೆಪಿ ಮುಖಂಡರು ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಾ ಹತಾಶೆಯ ಪ್ರತಿಭಟನೆಗೆ ಇಳಿದಿದ್ದಾರೆ.
ಅಭಿವೃದ್ಧಿ ಶೂನ್ಯವಾಗಿದ್ದು ಯಾರ ಅವಧಿಯಲ್ಲಿ?
ಬಿಜೆಪಿ ಮುಖಂಡರು ಕಳೆದ ಮೂರು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ನಡೆದಿಲ್ಲ ಎಂದು ಆರೋಪಿಸುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಯಾದಗಿರಿ ಕ್ಷೇತ್ರಕ್ಕೆ ನೀಡಿದ ಕೊಡುಗೆಯಾದರೂ ಏನು? ತಮ್ಮದೇ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದೆ ಎನ್ನಲಾದ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಯೋಗ್ಯತೆ ಇಲ್ಲದವರು, ಇಂದು ತರಾತುರಿಯಲ್ಲಿ ಟೆಂಡರ್ ಪ್ರಕ್ರಿಯೆ ಮತ್ತು ತಾಂತ್ರಿಕ ಕಾರಣಗಳ ನೆಪವೊಡ್ಡಿ ಈಗಿನ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿರುವುದು ಹಾಸ್ಯಾಸ್ಪದ.
ಮೂಲಸೌಕರ್ಯಗಳ ನಿರ್ಲಕ್ಷ್ಯಕ್ಕೆ ಬಿಜೆಪಿಯೇ ಹೊಣೆ:
ರಸ್ತೆ ಮತ್ತು ಕುಡಿಯುವ ನೀರು: ಜಿಲ್ಲೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಗೆ ಬಂದು, ಗ್ರಾಮೀಣ ರಸ್ತೆಗಳು ಹಾಳಾಗಲು ಅಂದಿನ ಅವರದೇ ಸರ್ಕಾರದ ಉದಾಸೀನತೆಯೇ ಕಾರಣ. ಈಗಿನ ನಮ್ಮ ಶಾಸಕರು ಮತ್ತು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಹಂತ-ಹಂತವಾಗಿ ಎಲ್ಲಾ ಬಾಕಿ ಕಾಮಗಾರಿಗಳನ್ನು ಸರಿಪಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ.
ವಿದ್ಯುತ್ ಸಮಸ್ಯೆ: ಜೇಸ್ಕಾಂ ಇಲಾಖೆಯ ಲೋಪದೋಷಗಳು ಮತ್ತು ಬಾಕಿ ಉಳಿದಿದ್ದ ವಿದ್ಯುತ್ ತಂತಿಗಳ ಸಮಸ್ಯೆಗಳು ಹಿಂದಿನ ಸರ್ಕಾರದ ದುರಾಡಳಿತದ ಕೊಡುಗೆಯಾಗಿದೆ. ರೈತರಿಗೆ ಗುಣಮಟ್ಟದ ವಿದ್ಯುತ್ ನೀಡಲು ನಮ್ಮ ಸರ್ಕಾರ ಈಗಾಗಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಕೇವಲ ಪ್ರಚಾರಕ್ಕಾಗಿ ಈ ಪ್ರತಿಭಟನೆಯ ನಾಟಕ!
ಕೇವಲ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಮತ್ತು ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂತಹ ದಿಕ್ಕುತಪ್ಪಿಸುವ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕೇವಲ ಶಂಕುಸ್ಥಾಪನೆ ಮಾಡುವುದರಲ್ಲಿ ನಮ್ಮ ಶಾಸಕರು ಬ್ಯುಸಿಯಾಗಿದ್ದಾರೆ ಎನ್ನುವ ಆರೋಪ ಸುಳ್ಳು; ನಾವು ಮಾಡಿದ ಶಂಕುಸ್ಥಾಪನೆಗಳಿಗೆ ಅನುದಾನ ಒದಗಿಸಿ ಕೆಲಸ ಮುಗಿಸುವ ಬದ್ಧತೆ ಕಾಂಗ್ರೆಸ್ ಸರ್ಕಾರಕ್ಕಿದೆ.
ಯಾದಗಿರಿ ಕ್ಷೇತ್ರದ ಜನತೆ ಸುಶಿಕ್ಷಿತರಾಗಿದ್ದು, ಬಿಜೆಪಿಯ ಈ ನಾಟಕದ ಹೋರಾಟ ಹಾಗೂ ಸುಳ್ಳು ಆರೋಪಗಳನ್ನು ನಂಬುವುದಿಲ್ಲ. ಇನ್ನಾದರೂ ಬಿಜೆಪಿ ಮುಖಂಡರು ಸಾರ್ವಜನಿಕ ದಾರಿ ತಪ್ಪಿಸುವುದನ್ನು ನಿಲ್ಲಿಸಿ.
ಬೇಕಿದ್ದರೆ ಭ್ರಷ್ಟಾಚಾರದಲ್ಲಿ ಶಾಸಕರು ತೊಡಗಿದ್ದು ಸಾಬೀತುಪಡಿಸಬಹುದು. ನಾವು ಹಲವಾರು ಕಾರ್ಯಕರ್ತರನ್ನು ವಿಚಾರಿಸಿದಾಗ ಗುತ್ತಿಗೆದಾರರ ಬಳಿ ಶಾಸಕರು ಯಾವುದೇ ಹಣವನ್ನು ಪಡೆದಿರುವುದಿಲ್ಲ ಎಂಬುದು ತಿಳಿದು ಬಂದಿದೆ. ಒಂದು ವೇಳೆ ಬಿಜೆಪಿ ಪಕ್ಷದ ಮುಖಂಡರು ಭ್ರಷ್ಟಾಚಾರವನ್ನು ಸಾಬೀತುಪಡಿಸಲು ತಯಾರು ಇದ್ದರೆ ಮುಂದೆ ಬರಬಹುದು ಹಾಗೂ ಆದಾಗ್ಯೂ ಗುತ್ತಿಗೆದಾರರ ಬಳಿ ಯಾವುದಾದರೂ ಸಾಕ್ಷಿ ಇದ್ದರೆ ಅವರು ಸಹ ಸಾಬೀತುಪಡಿಸಬಹುದು. ಇಲ್ಲದಿದ್ದರೆ ನಾವೇ ಗುತ್ತಿಗೆದಾರರಿಗೆ ಮಂಪರು ಪರೀಕ್ಷೆ ಮಾಡಿಸಬೇಕಾಗುತ್ತದೆ ಎಂದು ಆಗ್ರಹಿಸುತ್ತೇನೆ.
