ಯಾದಗಿರಿ: ಕೇಂದ್ರ ಸರ್ಕಾರದ ಯೋಜನೆಯಡಿ ಶೇ.90 ರಷ್ಟು ಸಬ್ಸಿಡಿ ದರದಲ್ಲಿ ನಿರುದ್ಯೋಗಿ ಯುವಕರಿಗೆ ಕಾರುಗಳು ಹಾಗೂ ರೈತರಿಗೆ ಟ್ರ್ಯಾಕ್ಟರ್ಗಳನ್ನು ಒದಗಿಸಲಾಗುತ್ತದೆ ಎಂದು ನಂಬಿಸಿ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿ ಸಾರ್ವಜನಿಕರಿಗೆ ವಂಚಿಸಿರುವ ಆರೋಪ ಯಾದಗಿರಿ ಜಿಲ್ಲೆಯ ಹುಣಸಗಿ ಹಾಗೂ ಶಹಾಪುರ ತಾಲ್ಲೂಕುಗಳಲ್ಲಿ ಕೇಳಿಬಂದಿದೆ.
ನೊಂದವರ ಆರೋಪದ ಪ್ರಕಾರ, ಹುಣಸಗಿ ಭಾಗದ ಮಲ್ಲರೆಡ್ಡಿ ಹಾಗೂ ಶಹಾಪುರ ಭಾಗದ ಪ್ರೇಮಸಾಗರ ಎಂಬವರು ಕೇಂದ್ರ ಸರ್ಕಾರದ ವಿಶೇಷ ಯೋಜನೆ ಇದೆ ಎಂದು ಹೇಳಿ, ವಾಹನ ಪಡೆಯಲು ಮೊದಲು ಡಿಮ್ಯಾಂಡ್ ಡ್ರಾಫ್ಟ್ (ಡಿ.ಡಿ.) ಹೆಸರಿನಲ್ಲಿ ತಲಾ ₹2 ಲಕ್ಷ ಪಾವತಿಸಬೇಕು ಎಂದು ಸಾರ್ವಜನಿಕರನ್ನು ನಂಬಿಸಿದ್ದಾರೆ. ಅವರ ಮಾತುಗಳನ್ನು ನಂಬಿದ ಅನೇಕರು ಹಣ ಪಾವತಿಸಿದ್ದಾರೆ ಎನ್ನಲಾಗಿದೆ.
ಹಣ ಸ್ವೀಕರಿಸಿದ ಬಳಿಕ ಮೂರು ತಿಂಗಳೊಳಗೆ ವಾಹನ ವಿತರಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ನಂತರ ಸರ್ಕಾರದಿಂದ ವಾಹನ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿ, ವಿಮೆ (ಇನ್ಸೂರೆನ್ಸ್) ಶುಲ್ಕದ ಹೆಸರಿನಲ್ಲಿ ಮತ್ತಷ್ಟು ₹40 ಸಾವಿರದವರೆಗೆ ಹಣ ಪಾವತಿಸುವಂತೆ ಕೇಳಲಾಗಿದೆ ಎಂದು ನೊಂದವರು ಆರೋಪಿಸಿದ್ದಾರೆ.
ಇದಾದ ಬಳಿಕ, ತಾವು ಬುಕ್ ಮಾಡಿದ್ದ ವಾಹನ ಸ್ಟಾಕ್ನಲ್ಲಿ ಇಲ್ಲ, ಬದಲಿಗೆ Innova Crysta ಸೇರಿದಂತೆ ಬೇರೆ ವಾಹನ ಸಿದ್ಧವಿದೆ ಎಂದು ಹೇಳಿ, ಅದನ್ನು ಪಡೆಯಬೇಕಾದರೆ ಹೆಚ್ಚುವರಿಯಾಗಿ ಸುಮಾರು ₹3 ಲಕ್ಷ ಪಾವತಿಸಬೇಕು ಎಂದು ಒತ್ತಾಯ ಮಾಡಲಾಗಿದೆ ಎನ್ನಲಾಗಿದೆ. ಈ ಒತ್ತಡಕ್ಕೆ ಮಣಿದು ಕೆಲವರು ಹೆಚ್ಚುವರಿ ಹಣ ನೀಡಿದ್ದು, ಇನ್ನೂ ಕೆಲವರು ಹಣ ನೀಡಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.
ನಿಗದಿತ ಅವಧಿ ಕಳೆದರೂ ವಾಹನಗಳು ದೊರೆಯದ ಹಿನ್ನೆಲೆಯಲ್ಲಿ ಹಣ ಹಿಂತಿರುಗಿಸುವಂತೆ ಕೇಳಿದಾಗ, ಆರೋಪಿಗಳು ತಮ್ಮ ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗದೇ ತಲೆಮರೆಸಿಕೊಂಡಿದ್ದಾರೆ ಎಂದು ನೊಂದವರು ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕರನ್ನು ವಂಚಿಸಿರುವ ಸಾಧ್ಯತೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ವಂಚನೆಗೆ ಒಳಗಾದವರಿಂದ ಪಡೆದ ಹಣವನ್ನು ವಾಪಸ್ ಕೊಡಿಸುವಂತೆ ಕ್ರಮ ಕೈಗೊಳ್ಳಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಯಾದಗಿರಿ ಜಿಲ್ಲೆಯ ಹಿರಿಯ ಪೊಲೀಸ್ ಹಾಗೂ ಜಿಲ್ಲಾಡಳಿತ ಅಧಿಕಾರಿಗಳಿಗೆ ನೊಂದ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಆರೋಪಗಳ ಸತ್ಯಾಸತ್ಯತೆ ಕುರಿತು ಸಂಬಂಧಿತ ಅಧಿಕಾರಿಗಳ ತನಿಖೆಯ ನಂತರವೇ ಅಂತಿಮವಾಗಿ ದೃಢಪಡಬೇಕಿದೆ.
