Friday, July 31, 2026
HomeUncategorizedಸಾಮಾಜಿಕ ಜಾಲತಾಣಗಳಲ್ಲಿ ಎಐ ಆಧಾರಿತ ಅಪಪ್ರಚಾರ ಆರೋಪ: ಇಂಡಿಯನ್ ಯೂತ್ ಕಾಂಗ್ರೆಸ್ ಸೇರಿ 15 ಮಂದಿಯ...

ಸಾಮಾಜಿಕ ಜಾಲತಾಣಗಳಲ್ಲಿ ಎಐ ಆಧಾರಿತ ಅಪಪ್ರಚಾರ ಆರೋಪ: ಇಂಡಿಯನ್ ಯೂತ್ ಕಾಂಗ್ರೆಸ್ ಸೇರಿ 15 ಮಂದಿಯ ವಿರುದ್ಧ ಡಾ. ರವಿ ಸಿ.ಟಿ. ದಾವೆ

ಮಾನಹಾನಿಕರ ಪೋಸ್ಟ್‌ಗಳ ತೆರವು, ಅಪಪ್ರಚಾರಕ್ಕೆ ತಡೆ; ಅವಹೇಳನಕಾರಿ ಪೋಸ್ಟ್‌ಗಳ ವಿರುದ್ಧ ಮಧ್ಯಂತರ ತಡೆಯಾಜ್ಞೆ, ಪೋಸ್ಟ್‌ಗಳನ್ನು ತೆರವುಗೊಳಿಸಲು ಮೆಟಾಗೆ ನ್ಯಾಯಾಲಯದ ನಿರ್ದೇಶನ

ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಅವರು ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಸಿ ಮಾನಹಾನಿಕರ ಚಿತ್ರಗಳು, ವಿಡಿಯೋಗಳು ಹಾಗೂ ಪೋಸ್ಟ್‌ಗಳನ್ನು ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಪ್ರಧಾನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಶಾಶ್ವತ ಹಾಗೂ ಕಡ್ಡಾಯ ತಡೆಯಾಜ್ಞೆ ಕೋರಿ ದಾವೆ ದಾಖಲಿಸಿದ್ದು, ಇಂತಹ ಪೋಸ್ಟ್‌ಗಳಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಅವರ ಪರ ವಕೀಲರಾದ ನಿತಿನ್ ಗೌಡ ಅವರು ಹೇಳಿದರು. ಬೆಂಗಳೂರಿನ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಈ ಪ್ರಕರಣದ ಪ್ರಾಥಮಿಕ ವಿಚಾರಣೆ ನಡೆಸಿದ ನ್ಯಾಯಾಲಯವು, ಡಾ. ರವಿ ಸಿ.ಟಿ. ಅವರ ವಿರುದ್ಧ ಇದೇ ರೀತಿಯ ಮಾನಹಾನಿಕರ ಹಾಗೂ ದುರುದ್ದೇಶಪೂರಿತ ಪೋಸ್ಟ್‌ಗಳು ಮತ್ತು ಅಪಪ್ರಚಾರ ಅಭಿಯಾನವನ್ನು ಮುಂದುವರಿಸದಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂದು ಅವರು ತಿಳಿಸಿದರು. ಅಲ್ಲದೆ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಕಟವಾಗಿರುವ ಅವಹೇಳನಕಾರಿ ಪೋಸ್ಟ್‌ಗಳನ್ನು ಕೂಡಲೇ ತೆರವುಗೊಳಿಸುವಂತೆ ಮೆಟಾ ಸಂಸ್ಥೆಗೆ ನ್ಯಾಯಾಲಯ ನಿರ್ದೇಶನ ನೀಡಿದೆ ಎಂದು ಹೇಳಿದರು.

ದಾವೆಯಲ್ಲಿ ಇಂಡಿಯನ್ ಯೂತ್ ಕಾಂಗ್ರೆಸ್ ಕರ್ನಾಟಕ, ಹಾಗೂ ಅದರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾದ ವಿವಿಧ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಗಳ ನಿರ್ವಾಹಕರು, ಕೆಲವು ವ್ಯಕ್ತಿಗಳು ಹಾಗೂ ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್‌ ಅನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ದಾವೆಯಲ್ಲಿ, ತಾವು ಸಾರ್ವಜನಿಕ ಜೀವನದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಸಮಾಜದಲ್ಲಿ ಗಳಿಸಿರುವ ಗೌರವ, ವಿಶ್ವಾಸಾರ್ಹತೆ ಹಾಗೂ ರಾಜಕೀಯ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದ ತಮ್ಮ ಕುರಿತು ಎಐ ಮೂಲಕ ಸೃಷ್ಟಿಸಲಾದ ಅಥವಾ ಡಿಜಿಟಲ್ ತಂತ್ರಜ್ಞಾನ ಬಳಸಿ ಮಾರ್ಪಡಿಸಲಾದ ಚಿತ್ರಗಳು, ವಿಡಿಯೋಗಳು, ಮೀಮ್ಸ್ ಹಾಗೂ ಇತರ ಡಿಜಿಟಲ್ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ರವಿ ವಿವರಿಸಿದ್ದಾರೆ. ಈ ವಿಷಯಗಳು ತಮ್ಮನ್ನು ಮದ್ಯಪಾನ ಮಾಡುವ ವ್ಯಕ್ತಿಯಂತೆ ಬಿಂಬಿಸುವ ಮೂಲಕ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನವಾಗಿದೆ ಎಂದು ದಾವೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ನಿತಿನ್ ತಿಳಿಸಿದರು.

ಅಲ್ಲದೆ, ತಮ್ಮನ್ನು ಉದ್ದೇಶಪೂರ್ವಕವಾಗಿ “OT Ravi” ಎಂದು ಕರೆಯುವ ಮೂಲಕ ಮದ್ಯದ ಬ್ರ್ಯಾಂಡ್‌ಗೆ ಹೋಲಿಕೆ ಮಾಡಿ ಅವಹೇಳನಕಾರಿ ಪ್ರಚಾರ ನಡೆಸಲಾಗಿದೆ ಎಂದು ರವಿ ಆರೋಪಿಸಿದ್ದಾರೆ. ಇಂತಹ ಪೋಸ್ಟ್‌ಗಳು ರವಿಯವರ ವೈಯಕ್ತಿಕ ಗೌರವ, ರಾಜಕೀಯ ವ್ಯಕ್ತಿತ್ವ ಹಾಗೂ ಸಾರ್ವಜನಿಕ ಪ್ರತಿಷ್ಠೆಗೆ ಧಕ್ಕೆ ಉಂಟುಮಾಡುವ ಉದ್ದೇಶದಿಂದಲೇ ಪ್ರಕಟಿಸಲಾಗಿದೆ ಎಂದು ನ್ಯಾಯವಾದಿಗಳು ಹೇಳಿದ್ದಾರೆ.

ಜುಲೈ 24, 2026ರಿಂದ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಪೋಸ್ಟ್‌ಗಳು ಪ್ರಕಟಗೊಂಡು ವ್ಯಾಪಕವಾಗಿ ಹಂಚಿಕೆಯಾಗಿದ್ದು, ಅವು ಇನ್ನೂ ಆನ್‌ಲೈನ್‌ನಲ್ಲಿ ಲಭ್ಯವಿರುವುದರಿಂದ ಪ್ರತಿದಿನವೂ ತಮ್ಮ ಮಾನಹಾನಿ ಮುಂದುವರಿಯುತ್ತಿದೆ ಎಂದು ದಾವೆಯಲ್ಲಿ ಉಲ್ಲೇಖಿಸಲಾಗಿದೆ. ಕೇವಲ ಹಣಕಾಸಿನ ಪರಿಹಾರದಿಂದ ಈ ಹಾನಿಯನ್ನು ಸರಿಪಡಿಸಲು ಸಾಧ್ಯವಿಲ್ಲವಾದ್ದರಿಂದ ನ್ಯಾಯಾಲಯದ ಮಧ್ಯಪ್ರವೇಶ ಅಗತ್ಯವಾಗಿದೆ ಎಂದು ರವಿ ಮನವಿ ಮಾಡಿರುವುದಾಗಿ ವಕೀಲರು ವಿವರಿಸಿದರು.

ದಾವೆಯಲ್ಲಿ ನ್ಯಾಯಾಲಯವನ್ನು ಉದ್ದೇಶಿಸಿ ಹಲವು ಪರಿಹಾರಗಳನ್ನು ಕೋರಲಾಗಿದೆ. ತಮ್ಮ ವಿರುದ್ಧ ಸುಳ್ಳು, ಮಾನಹಾನಿಕರ, ಎಐ ಮೂಲಕ ಸೃಷ್ಟಿಸಲಾದ ಅಥವಾ ಡಿಜಿಟಲ್ ತಂತ್ರಜ್ಞಾನದಿಂದ ಮಾರ್ಪಡಿಸಲಾದ ಚಿತ್ರಗಳು, ವಿಡಿಯೋಗಳು, ಮೀಮ್ಸ್ ಹಾಗೂ ಇತರ ವಿಷಯಗಳನ್ನು ಪ್ರಕಟಿಸುವುದು, ಹಂಚುವುದು ಅಥವಾ ಮರುಪ್ರಕಟಿಸುವುದನ್ನು ಪ್ರತಿವಾದಿಗಳಿಗೆ ಶಾಶ್ವತವಾಗಿ ನಿಷೇಧಿಸಬೇಕು ಎಂದು ಮನವಿ ಮಾಡಲಾಗಿದೆ. ಜೊತೆಗೆ “OT Ravi” ಎಂಬ ಪದ ಅಥವಾ ಅದಕ್ಕೆ ಸಮಾನವಾದ ಅವಹೇಳನಕಾರಿ ಪದಗಳನ್ನು ತಮ್ಮ ವಿರುದ್ಧ ಬಳಸುವುದಕ್ಕೂ ತಡೆಯಾಜ್ಞೆ ನೀಡುವಂತೆ ಕೋರಲಾಗಿದೆ. ಇದಲ್ಲದೆ, ದಾವೆಯಲ್ಲಿ ಉಲ್ಲೇಖಿಸಲಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಪೋಸ್ಟ್‌ಗಳು, ವಿಡಿಯೋಗಳು, ರೀಲ್ಸ್ ಹಾಗೂ ಇತರ ಡಿಜಿಟಲ್ ವಿಷಯಗಳನ್ನು ಅಳಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ. ಮೆಟಾ ಸಂಸ್ಥೆಗೆ ಸಂಬಂಧಿತ ಪೋಸ್ಟ್‌ಗಳನ್ನು ಭಾರತದಲ್ಲಿ ತೆಗೆದುಹಾಕಲು ಅಥವಾ ಪ್ರವೇಶ ನಿರ್ಬಂಧಿಸಲು, ಪ್ರಕರಣ ಇತ್ಯರ್ಥವಾಗುವವರೆಗೆ ಸಂಬಂಧಿತ ಯುಆರ್‌ಎಲ್‌ಗಳು, ಮೆಟಾಡೇಟಾ, ಲಾಗ್‌ಗಳು ಹಾಗೂ ಇತರ ಎಲೆಕ್ಟ್ರಾನಿಕ್ ದಾಖಲೆಗಳನ್ನು ಸಂರಕ್ಷಿಸುವಂತೆ ನಿರ್ದೇಶನ ನೀಡುವಂತೆ ಸಹ ಮನವಿ ಮಾಡಲಾಗಿದೆ ಎಂದು ನಿತಿನ್ ವಿವರಿಸಿದರು.

ಪ್ರಕರಣದ ವಿಚಾರಣೆ ಬಾಕಿ ಇರುವ ಅವಧಿಯಲ್ಲಿ ತಮ್ಮ ವಿರುದ್ಧ ಇದೇ ರೀತಿಯ ಎಐ ಆಧಾರಿತ ಅಥವಾ ಡಿಜಿಟಲ್ ತಂತ್ರಜ್ಞಾನದಿಂದ ಮಾರ್ಪಡಿಸಲಾದ ಮಾನಹಾನಿಕರ ವಿಷಯಗಳನ್ನು ಮುಂದುವರಿಸಿ ಪ್ರಕಟಿಸದಂತೆ ಮಧ್ಯಂತರ ನಿರ್ಬಂಧ ವಿಧಿಸುವಂತೆ ಹಾಗೂ ದಾವೆಯ ವೆಚ್ಚವನ್ನು ಪ್ರತಿವಾದಿಗಳಿಂದ ವಸೂಲು ಮಾಡುವಂತೆಯೂ ನ್ಯಾಯಾಲಯವನ್ನು ರವಿ ಕೋರಿದ್ದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಮಾನಹಾನಿಕರ ಪೋಸ್ಟ್‌ಗಳನ್ನು ತಕ್ಷಣವೇ ತೆಗೆಯುವಂತೆ ಮೆಟಾಗೆ ನಿರ್ದೇಶನ ನೀಡಿದ್ದು, ಇಂತಹ ಅವಮಾನಕರ ಪದ ಬಳಕೆಗೆ ತಡೆಯಾಜ್ಞೆ ನೀಡಿದೆ ಎಂದು ವಕೀಲರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ರವಿ ಸಿ. ಟಿ. ಪರ ನ್ಯಾಯವಾದಿಗಳಾದ ನಿತಿನ್ ಗೌಡ, ಕೃಷ್ಣಕಾಂತ್ ತರಿಕೆರೆ ಹಾಗೂ ಕಾನೂನು ತಂಡದ ಸದಸ್ಯರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ