Friday, September 11, 2026
Homeರಾಜಕೀಯಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಮಾಹಿತಿ:‘ಉದ್ಯೋಗ ನಿಧಿ’ ಯೋಜನೆಗೆ ಸಚಿವ ಸಂಪುಟ ಅನುಮೋದನೆ: 11 ಹಿಂದುಳಿದ...

ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಮಾಹಿತಿ:‘ಉದ್ಯೋಗ ನಿಧಿ’ ಯೋಜನೆಗೆ ಸಚಿವ ಸಂಪುಟ ಅನುಮೋದನೆ: 11 ಹಿಂದುಳಿದ ಜಿಲ್ಲೆಗಳಲ್ಲಿ 1 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ಗುರಿ.

ಹೊಸದಾಗಿ ನೇಮಕವಾಗುವ ಪ್ರತಿ ಉದ್ಯೋಗಿಗೆ ತಿಂಗಳಿಗೆ ₹2,500 ಪ್ರೋತ್ಸಾಹಧನ – 24 ತಿಂಗಳವರೆಗೆ ನೆರವು
ವಾರ್ಷಿಕ ₹305 ಕೋಟಿ ಅನುದಾನ – ಪ್ರಾದೇಶಿಕ ಅಸಮಾನತೆ ನಿವಾರಿಸಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಒತ್ತು

ಬೆಂಗಳೂರು: ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಕೈಗಾರಿಕಾ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಮಹತ್ವಾಕಾಂಕ್ಷೆಯ ‘ಉದ್ಯೋಗ ನಿಧಿ’ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಗೃಹ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ರಾಜ್ಯದ ಪ್ರಾದೇಶಿಕ ಅಸಮಾನತೆಯನ್ನು ಕಡಿಮೆ ಮಾಡಿ, ಅಭಿವೃದ್ಧಿಯಲ್ಲಿ ಹಿಂದುಳಿದಿರುವ 11 ಜಿಲ್ಲೆಗಳಲ್ಲಿ 1 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯೊಂದಿಗೆ ಈ ಯೋಜನೆಯನ್ನು ರೂಪಿಸಲಾಗಿದೆ.

ಯೋಜನೆಯಡಿ ಅರ್ಹ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (MSMEs) ಹಾಗೂ ಕೈಗಾರಿಕಾ ಸಂಸ್ಥೆಗಳು ಹೆಚ್ಚುವರಿಯಾಗಿ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಲ್ಲಿ, ಪ್ರತಿ ಹೆಚ್ಚುವರಿ ಉದ್ಯೋಗಿಗೆ ತಿಂಗಳಿಗೆ ₹2,500ರಂತೆ ಗರಿಷ್ಠ 24 ತಿಂಗಳವರೆಗೆ ಸರ್ಕಾರ ಪ್ರೋತ್ಸಾಹಧನ ನೀಡಲಿದೆ.

ಈ ಯೋಜನೆಗಾಗಿ ವಾರ್ಷಿಕ ₹305 ಕೋಟಿ ಅನುದಾನವನ್ನು ಒದಗಿಸಲಾಗುತ್ತಿದ್ದು, ನಿಜವಾಗಿಯೂ ಹೊಸ ಉದ್ಯೋಗಗಳನ್ನು ಸೃಷ್ಟಿಸಿ ಅವುಗಳನ್ನು ನಿರಂತರವಾಗಿ ಉಳಿಸಿಕೊಳ್ಳುವ ಉದ್ಯಮಗಳಿಗೆ ಮಾತ್ರ ಸರ್ಕಾರದ ನೆರವು ತಲುಪುವಂತೆ ವ್ಯವಸ್ಥೆ ರೂಪಿಸಲಾಗಿದೆ. ಹೊಸ ನೇಮಕಾತಿ ಹಾಗೂ ಉದ್ಯೋಗಿಗಳಿಗೆ ಪಾವತಿಸಲಾಗುವ ವೇತನವನ್ನು ಪರಿಶೀಲಿಸಿದ ನಂತರವೇ ಪ್ರೋತ್ಸಾಹಧನ ನೀಡಲಾಗುತ್ತದೆ. ಇದರಿಂದ ಯೋಜನೆಯ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಾತ್ರಿಪಡಿಸಲಾಗುತ್ತದೆ.

ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಮತ್ತು ಬಾಗಲಕೋಟೆ ಸೇರಿದಂತೆ ಅಭಿವೃದ್ಧಿಯಲ್ಲಿ ಹಿಂದುಳಿದ 11 ಜಿಲ್ಲೆಗಳಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆ ಹಾಗೂ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಉದ್ಯಮಗಳ ವಿಸ್ತರಣೆಗೆ ಈ ಯೋಜನೆ ಉತ್ತೇಜನ ನೀಡಲಿದೆ.

ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲೇ ಕೈಗಾರಿಕೆ ಮತ್ತು ಉದ್ಯೋಗಗಳು ಕೇಂದ್ರೀಕೃತವಾಗುವುದನ್ನು ತಪ್ಪಿಸಿ, ರಾಜ್ಯದ ವಿವಿಧ ಪ್ರದೇಶಗಳಿಗೆ ಹೂಡಿಕೆಯನ್ನು ಕೊಂಡೊಯ್ಯುವುದು ಸರ್ಕಾರದ ಉದ್ದೇಶವಾಗಿದೆ. ಸ್ಥಳೀಯವಾಗಿ ಉದ್ಯೋಗಾವಕಾಶಗಳು ಹೆಚ್ಚುವುದರಿಂದ ಯುವಜನರು ಉದ್ಯೋಗ ಅರಸಿ ದೂರದ ನಗರಗಳಿಗೆ ವಲಸೆ ಹೋಗುವ ಅನಿವಾರ್ಯತೆಯನ್ನೂ ಕಡಿಮೆ ಮಾಡಲು ಸಾಧ್ಯವಾಗಲಿದೆ.

ರಾಜ್ಯ ಸರ್ಕಾರದ ‘ಯುವ ನಿಧಿ’ ಯೋಜನೆಯೊಂದಿಗೆ ಸಮನ್ವಯ ಸಾಧಿಸಿ ‘ಉದ್ಯೋಗ ನಿಧಿ’ಯನ್ನು ಅನುಷ್ಠಾನಗೊಳಿಸಲಾಗುತ್ತದೆ. ಯುವ ನಿಧಿಯ ಮೂಲಕ ಯುವಜನರಿಗೆ ಉದ್ಯೋಗ ಪಡೆಯಲು ಅಗತ್ಯವಾದ ಬೆಂಬಲ ಮತ್ತು ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದರೆ, ಉದ್ಯೋಗ ನಿಧಿಯ ಮೂಲಕ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳಿಗೆ ನೇರ ಪ್ರೋತ್ಸಾಹ ನೀಡಲಾಗುತ್ತದೆ.

“ಅಭಿವೃದ್ಧಿ ಬೆಂಗಳೂರಿಗೆ ಅಥವಾ ಕೆಲವೇ ನಗರಗಳಿಗೆ ಸೀಮಿತವಾಗಬಾರದು. ಹೂಡಿಕೆ ಮತ್ತು ಉದ್ಯೋಗಾವಕಾಶಗಳು ರಾಜ್ಯದ ಪ್ರತಿಯೊಂದು ಭಾಗಕ್ಕೂ ತಲುಪಬೇಕು. ನಮ್ಮ ಯುವಜನರು ಉದ್ಯೋಗಕ್ಕಾಗಿ ತಮ್ಮ ಊರು ಮತ್ತು ಜಿಲ್ಲೆಗಳನ್ನು ಬಿಟ್ಟು ದೂರ ಹೋಗಬೇಕಾದ ಪರಿಸ್ಥಿತಿ ಇರಬಾರದು. ಅವರದೇ ಪ್ರದೇಶಗಳಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ಅಲ್ಲಿಯೇ ತಮ್ಮ ಭವಿಷ್ಯ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ,” ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

“ಉದ್ಯೋಗ ಸೃಷ್ಟಿಸುವ ಉದ್ಯಮಗಳಿಗೆ ಸರ್ಕಾರ ಬೆಂಬಲ ನೀಡಲಿದೆ; ಆ ಉದ್ಯೋಗಗಳು ನಿಜವಾಗಿಯೂ ಸೃಷ್ಟಿಯಾಗಿವೆ ಮತ್ತು ವೇತನ ಪಾವತಿಯಾಗುತ್ತಿದೆ ಎಂಬುದನ್ನೂ ಖಚಿತಪಡಿಸಿಕೊಳ್ಳಲಿದೆ. ಹೀಗಾಗಿ ‘ಉದ್ಯೋಗ ನಿಧಿ’ ಕೇವಲ ಕೈಗಾರಿಕಾ ಪ್ರೋತ್ಸಾಹ ಯೋಜನೆಯಲ್ಲ, ಫಲಿತಾಂಶ ಆಧಾರಿತ ಉದ್ಯೋಗ ಸೃಷ್ಟಿ ಕಾರ್ಯಕ್ರಮವಾಗಿದೆ,” ಎಂದು ಅವರು ಹೇಳಿದ್ದಾರೆ.

ರಾಜ್ಯದ ಹಿಂದುಳಿದ ಪ್ರದೇಶಗಳಿಗೆ ಹೂಡಿಕೆ, ಕೈಗಾರಿಕೆ ಮತ್ತು ಉದ್ಯೋಗವನ್ನು ಕೊಂಡೊಯ್ಯುವ ಮೂಲಕ ಸಮತೋಲಿತ ಹಾಗೂ ಸಮಗ್ರ ಕರ್ನಾಟಕ ನಿರ್ಮಿಸುವ ನಿಟ್ಟಿನಲ್ಲಿ ‘ಉದ್ಯೋಗ ನಿಧಿ’ ಮಹತ್ವದ ಹೆಜ್ಜೆಯಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚಿನ ಸುದ್ದಿ