ಶಿಕ್ಷಕರ ಗೌರವಾರ್ಥ ಹೆಸರಿನ ಮುಂದೆ ‘Tr’ ಬಳಕೆ ಜಾರಿಗೆ ಕ್ರಮ
ಜಿಲ್ಲೆ ಮೊದಲ ಸ್ಥಾನಕ್ಕೇರಿದರೆ ಶಿಕ್ಷಕರಿಗೆ ವಿಶೇಷ ಉಡುಗೊರೆ ಘೋಷಣೆ
ಸರ್ಕಾರಿ ನೌಕರರ ಭವನಕ್ಕೆ 1 ಕೋಟಿ ರೂ., ಜತೆಗೆ ಶಾಸಕರು, ಎಂಎಲ್‌ಸಿಗಳಿಂದ ಅನುದಾನದ ನೆರವು
ಮಂಡ್ಯ (ಸೆ.11)
ವಿದ್ಯಾರ್ಥಿಗಳನ್ನು ಕೇವಲ ತರಗತಿಗಳಿಂದ ಮುಂದಿನ ತರಗತಿಗೆ ಉತ್ತೀರ್ಣಗೊಳಿಸುವುದಷ್ಟೇ ಶಿಕ್ಷಕರ ಕೆಲಸವಲ್ಲ. ಅವರಲ್ಲಿ ಸಾಮಾಜಿಕ ಪ್ರಜ್ಞೆ ಬೆಳೆಸಿ ಸುಸಂಸ್ಕೃತ ಸಮಾಜ ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಗುರುಭವನದಲ್ಲಿ ಇಂದು ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರೆಂದರೆ ಸಮಾಜದ ದಾರಿದೀವಿಗೆ
ಇಂಜಿನಿಯರ್, ರೈತರು ಹಾಗೂ ಶ್ರಮಿಕರಷ್ಟೇ ಮಹತ್ವದ ಪಾತ್ರವನ್ನು ಸುಸಂಸ್ಕೃತ ನಾಡು ಕಟ್ಟುವಲ್ಲಿ ಶಿಕ್ಷಕರು ವಹಿಸುತ್ತಿದ್ದಾರೆ. ನಾವೆಲ್ಲರೂ ಶಿಕ್ಷಕರ ಋಣದಲ್ಲೇ ಬದುಕುತ್ತಿದ್ದೇವೆ. ಶಿಕ್ಷಕರ ಈ ಪವಿತ್ರ ಸೇವೆಯನ್ನು ಗೌರವಿಸಲು ಅವರ ಹೆಸರಿನ ಮುಂದೆ ‘Tr’ ಎಂದು ಬಳಸಲು ಸರ್ಕಾರ ಸೂಚನೆ ಮುಂದಾಗಿದೆ. ಶಿಕ್ಷಕ ವೃತ್ತಿ ಕೇವಲ ಉದ್ಯೋಗವಲ್ಲ, ಅದೊಂದು ನಿರಂತರ ತಪಸ್ಸು ಎಂದು ಸಚಿವರು ಬಣ್ಣಿಸಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಅಗ್ರಸ್ಥಾನಕ್ಕೆ ಶ್ರಮಿಸಿ
ಶಿಕ್ಷಕರು, ಪೋಷಕರು ಮತ್ತು ಜಿಪಂ ಸಿಇಒ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದ ಪರಿಶ್ರಮದಿಂದಾಗಿ ಜಿಲ್ಲೆಯು ಕಳೆದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 5ನೇ ಸ್ಥಾನಕ್ಕೇರಿದೆ. ಮುಂದಿನ ಸಾಲಿನಲ್ಲಿ ಮಂಡ್ಯ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕೆ ಬರಬೇಕು. ಶಿಕ್ಷಕರು ಈ ನಿಟ್ಟಿನಲ್ಲಿ ದೃಢ ಸಂಕಲ್ಪ ತೊಟ್ಟರೆ ಇದು ಅಸಾಧ್ಯವೇನಲ್ಲ. ಜಿಲ್ಲೆ ಪ್ರಥಮ ಸ್ಥಾನ ಗಳಿಸಿದರೆ ಶಿಕ್ಷಕರಿಗೆ ಅಚ್ಚರಿ ಮೂಡಿಸುವಂತಹ ವಿಶೇಷ ಉಡುಗೊರೆ ನೀಡಿ ಗೌರವಿಸಲಾಗುವುದು. ಹಾಗೆಯೇ ಪಿಯುಸಿ ಫಲಿತಾಂಶದಲ್ಲೂ ಜಿಲ್ಲೆ ಟಾಪ್ 5ರೊಳಗೆ ಬರಬೇಕು ಎಂದು ಆಶಿಸಿದರು.
ಬೇಡಿಕೆ ಈಡೇರಿಕೆಗೆ ಬದ್ಧ
ಶಿಕ್ಷಕರಿಗೆ ಆದಷ್ಟು ಶೀಘ್ರವೇ ಬಡ್ತಿ ನೀಡುವ ಸಂಬಂಧ ಸರಕಾರ ಕಾರ್ಯನ್ಮುಖವಾಗಿದೆ. ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿ ಸೇರಿದಂತೆ ಶಿಕ್ಷಕರ ಎಲ್ಲ ನ್ಯಾಯಯುತ ಬೇಡಿಕೆಗಳನ್ನು ಮೊದಲ ಆದ್ಯತೆಯ ಮೇರೆಗೆ ಪರಿಶೀಲಿಸಲಾಗುವುದು. ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಸರ್ಕಾರದಿಂದ 1 ಕೋಟಿ ರೂ., ಅನುದಾನದ ಜೊತೆಗೆ, ಜಿಲ್ಲೆಯ ಶಾಸಕರು ತಲಾ 10 ಲಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರು ತಲಾ 5 ಲಕ್ಷ ಅನುದಾನ ಒದಗಿಸಲಿದ್ದಾರೆ ಎಂದು ವೇದಿಕೆಯಲ್ಲಿ ಘೋಷಿಸಿದರು.
ಶಿಕ್ಷಕರಿಗೆ ನಮನ
ಅಕ್ಷರ ಕಲಿಸುವ ಗುರು, ಬದುಕಿಗೆ ದಾರಿ ದೀವಿಗೆ. ಶಿಕ್ಷಕ ಎಂಬ ಪದ ಕೇವಲ ಒಂದು ವೃತ್ತಿಯಲ್ಲ, ಅದೊಂದು ನಿರಂತರ ತಪಸ್ಸು. ಮಗುವಿನ ಅಂತರಂಗದಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ರೂಪುಕೊಟ್ಟು, ಸಮಾಜಕ್ಕೆ ಕೊಡುಗೆಯಾಗಿ ನೀಡುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಅಂತಹ ಪವಿತ್ರ ಕಾಯಕದಲ್ಲಿ ತೊಡಗಿಸಿಕೊಂಡಿರುವ ನಮ್ಮ ಜಿಲ್ಲೆಯ ಎಲ್ಲಾ ಶಿಕ್ಷಕರ ಶ್ರಮ ಮತ್ತು ಸಮರ್ಪಣಾ ಮನೋಭಾವ ನಿಜಕ್ಕೂ ಶ್ಲಾಘನೀಯ ಎಂದರು.
ನಮ್ಮ ಸರ್ಕಾರ ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ. ಸರ್ಕಾರಿ ಶಾಲೆಗಳ ಮೂಲಸೌಕರ್ಯ ಮೇಲ್ದರ್ಜೆಗೇರಿಸುವುದು, ಆಧುನಿಕ ತಂತ್ರಜ್ಞಾನದ ಕಲಿಕೆಗೆ ಪ್ರೋತ್ಸಾಹ ನೀಡುವುದು ಮತ್ತು ಶಿಕ್ಷಕರಿಗೆ ಅಗತ್ಯವಿರುವ ಎಲ್ಲಾ ರಕ್ಷಣೆ ಹಾಗೂ ಸೌಲಭ್ಯಗಳನ್ನು ಒದಗಿಸಲು ನಾವು ಸದಾ ಸಿದ್ಧರಿದ್ದೇವೆ. ಶಿಕ್ಷಕರು ಯಾವುದೇ ದ್ವಂದ್ವವಿಲ್ಲದೆ, ಕೇವಲ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನಹರಿಸಲು ಸೂಕ್ತ ವಾತಾವರಣ ನಿರ್ಮಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಾಧಕ ಶಿಕ್ಷಕರಿಗೆ ‘ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮಂಡ್ಯ ಶಾಸಕ ರವಿಕುಮಾರ್ ಗಣಿಗ, ವಿಧಾನ ಪರಿಷತ್ ಸದಸ್ಯ ಕೆ. ವಿವೇಕಾನಂದ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಶಿಕ್ಷಕರ ಸಂಘದ ಮುಖಂಡರು ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
