ಕಲಬುರಗಿ: ಕ್ರೂಸರ್ ವಾಹನ ಲಾರಿ ಮಧ್ಯೆ ನಡೆದ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ಬಳಿ ನಡೆದಿದೆ. ಲಾಡ್ಲಾಪುರ ಹಾಗೂ ಹಲಕರ್ಟಿ ಮಧ್ಯೆ ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ಶುಕ್ರವಾರ ತಡರಾತ್ರಿ ಈ ಅಪಘಾತ ಸಂಭವಿಸಿದ್ದು, ಸಾವನ್ನಪ್ಪಿದ ಐವರು ಪರಸ್ಪರ ಸಂಬಂಧಿಕರು ಎಂದು ಪೊಲೀಸರು ತಿಳಿಸಿದ್ದಾರೆ.
ಲಾರಿ ಮತ್ತು ಕ್ರೂಸರ್ ವಾಹನ ನಡುವೆ ನಡೆದ ಮುಖಾಮುಖಿ ಡಿಕ್ಕಿಯ ಪರಿಣಾಮ ಕ್ರೂಸರ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ನಿವಾಸಿಗಳಾದ ತೋಲುಸಾಬ್ ಕಾಶ್ವರ್ (27), ಹುಸೇನ್ ಶಾ (48), ಮೈಬೂಬ್ ಅಲಿ (45), ರಸೂಲ್ ಬೀ (42), ಮತ್ತು ಫಾತಿಮಾ ಅಲಿ (38) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ಬಗ್ಗೆ ಪೊಲೀಸರ ಮಾಹಿತಿ:
ಪೊಲೀಸರು ನೀಡಿದ ಪ್ರಕಾರ, ಶುಕ್ರವಾರ ರಾತ್ರಿ ಮೃತರ ಸಂಬಂಧಿಯೊಬ್ಬರಿಗೆ ನ್ಯುಮೋನಿಯಾ ಸಂಬಂಧಿತ ತೊಂದರೆ ಕಾಣಿಸಿಕೊಂಡಿದ್ದು, ಅವರನ್ನು ಯಾದಗಿರಿ ನಗರದ ಆಸ್ಪತ್ರೆಗೆ ದಾಖಲಿಸಲು ಕ್ರೂಸರ್ ವಾಹನದಲ್ಲಿ ಎಂಟು ಜನರು ಪ್ರಯಾಣಿಸಿದ್ದರು. ಅವರನ್ನು ದಾಖಲಿಸಿದ ನಂತರ, ಚಾಲಕ ಸೇರಿದಂತೆ ಐದು ಜನರು ತಮ್ಮ ಸ್ವಗ್ರಾಮ ಇಂಗಳಗಿಗೆ ವಾಪಸ್ ಬರುತ್ತಿದ್ದ ವೇಳೆ ರಾತ್ರಿ 11.40ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ತಮಿಳುನಾಡಿನ ಲಾರಿಯೊಂದು ಕ್ರೂಸರ್ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಸ್ಥಳದಿಂದ ಪರಾರಿಯಾದ ಲಾರಿ ಚಾಲಕ:
ಅಪಘಾತದ ನಂತರ ಲಾರಿ ಚಾಲಕ ಹೆದರಿ ವಾಹನವನ್ನು ಸ್ಥಳದಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಾಡಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಸಂತಾಪ:
ಅಪಘಾತದಲ್ಲಿ ಇಂಗಳಗಿ ಗ್ರಾಮದ ಐವರು ಸ್ಥಳದಲ್ಲೇ ಮೃತರಾಗಿರುವ ವಿದ್ರಾವಕ ಸುದ್ದಿ ಮನಸ್ಸಿಗೆ ತಲ್ಲಣವನ್ನುಂಟುಮಾಡಿದೆ. ಭಾರವಾದ ಮನಸ್ಸಿನಿಂದಲೇ ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಮೃತರ ಕುಟುಂಬ ವರ್ಗವು ಧೈರ್ಯ ತಂದುಕೊಳ್ಳಬೇಕು ಎಂದಷ್ಟೇ ಈಗ ಹೇಳಬಹುದಾದ ಸಮಾಧಾನದ ಮಾತುಗಳು. ಈ ಕುರಿತು ಜಿಲ್ಲಾ ಪೊಲೀಸ್ ಇಲಾಖೆಯೊಂದಿಗೆ ಮಾತನಾಡಿದ್ದೇನೆ. ನಾನು ಮತ್ತು ಜಿಲ್ಲಾಡಳಿತ ಮೃತರ ಕುಟುಂಬದವರ ಅಗತ್ಯ ನೆರವಿಗೆ ಪೂರ್ಣ ಸಹಕಾರ ನೀಡಲಿದ್ದೇವೆ. ಕುಟುಂಬ ವರ್ಗಕ್ಕೆ ಪ್ರೀತಿಪಾತ್ರರ ಅಗಲಿಕೆ ಭರಿಸುವ ಶಕ್ತಿ ಸಿಗುವಂತಾಗಲಿ ಎಂದು ಆಶಿಸುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.
