Monday, September 28, 2026
Homeಕೃಷಿರೈತರಿಗೆ ಕೇವಲ ₹2,500 ಪರಿಹಾರ: ಎಪಿಎಂಸಿಯಲ್ಲಿ ಕೂಲಿ ಮಾಡಿ ಸಿಎಂಗೆ ಹಣ ಕಳುಹಿಸಿ ಮುನ್ನಾಧಣಿ ನಾಡಗೌಡ...

ರೈತರಿಗೆ ಕೇವಲ ₹2,500 ಪರಿಹಾರ: ಎಪಿಎಂಸಿಯಲ್ಲಿ ಕೂಲಿ ಮಾಡಿ ಸಿಎಂಗೆ ಹಣ ಕಳುಹಿಸಿ ಮುನ್ನಾಧಣಿ ನಾಡಗೌಡ ಆಕ್ರೋಶ

ಮುದ್ದೇಬಿಹಾಳ:
ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಬೆಳೆ ಹಾನಿ ಪರಿಹಾರ ಧನ ರೈತರಿಗೆ ಮಾಡಿದ ಘೋರ ಅವಮಾನ ಎಂದು ಬಿಜೆಪಿ ಮುಖಂಡ ಮುನ್ನಾಧಣಿ ನಾಡಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುದ್ದೇಬಿಹಾಳದಲ್ಲಿ ರೈತ ಸಂಘಟನೆಗಳು ಹಾಗೂ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮುಖಂಡರು ಹಾಗೂ ಕಾರ್ಯಕರ್ತರು ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ ಹಮಾಲಿ ಕೆಲಸ ನಿರ್ವಹಿಸಿ, ಬಂದಂತಹ ₹3,000 ಕೂಲಿ ಹಣವನ್ನು ‘ಉಡುಗೊರೆ’ ರೂಪದಲ್ಲಿ ಮುಖ್ಯಮಂತ್ರಿಗಳಿಗೆ ವಾಪಸ್ ಕಳುಹಿಸುವ ಮೂಲಕ ಸರ್ಕಾರದ ನಿಲುವನ್ನು ಅಣಕಿಸಿದರು.

ದಿನಗೂಲಿಗಿಂತ ಕಡೆ ಪರಿಹಾರ ಮೊತ್ತ:
ಪ್ರತಿಭಟನೆಯಲ್ಲಿ ಮಾತನಾಡಿದ ಮುನ್ನಾಧಣಿ ನಾಡಗೌಡ, “ರಾಜ್ಯ ಸರ್ಕಾರ ₹2,500 ಪರಿಹಾರ ಘೋಷಿಸಿರುವುದು ಸರ್ಕಾರ ಎಷ್ಟು ದಿವಾಳಿಯಾಗಿದೆ ಎಂಬುದನ್ನು ತೋರಿಸುತ್ತದೆ. ಇಂದು ಒಬ್ಬ ಕೃಷಿ ಕಾರ್ಮಿಕನ ದಿನಗೂಲಿಯೇ ₹1,000 ಮುಟ್ಟಿದೆ. ಇಂತಹ ಸಂದರ್ಭದಲ್ಲಿ ಎಕರೆಗೆ ₹2,500 ನೀಡುವುದು ರೈತರ ಗಾಯದ ಮೇಲೆ ಬರೆ ಎಳೆದಂತೆ. ಒಂದು ಬಾರಿ ಹೊಲ ಉಳುಮೆ ಮಾಡುವುದಕ್ಕೇ ₹1,500 ಖರ್ಚಾಗುತ್ತದೆ; ಕನಿಷ್ಠ ಮೂರು ಬಾರಿ ಉಳುಮೆ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಮುಂಗಾರು ಬೆಳೆ ಸಂಪೂರ್ಣ ಕೈಕೊಟ್ಟಿದ್ದು, ಹಿಂಗಾರು ಕೂಡ ಅದೇ ಹಂತದಲ್ಲಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ಸರ್ಕಾರಕ್ಕೆ ರೈತರ ನೈಜ ಕಷ್ಟ ಅರ್ಥವಾಗುತ್ತಿಲ್ಲ” ಎಂದು ಕಿಡಿಕಾರಿದರು.
ಸರ್ಕಾರ ಕೂಡಲೇ ಪರಿಹಾರದ ಮೊತ್ತವನ್ನು ಮರುಪರಿಶೀಲಿಸಿ, ವೈಜ್ಞಾನಿಕವಾಗಿ ಹೆಚ್ಚಿನ ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮೂರನೇ ಹಂತದ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಮಲ್ಲಿಕಾರ್ಜುನ ತಂಗಡಗಿ, ಲಕ್ಷ್ಮಣ ಬಿಜ್ಜೂರ, ಜಗದೀಶ ಪಂಪಣ್ಣವರ, ಸಂಗಮ್ಮ ದೇವರಳ್ಳಿ, ಗೌರಮ್ಮ ಹುನಗುಂದ, ಶಂಕರಗೌಡ ಶಿವಣಗಿ, ಸಿದ್ದರಾಜ ಹೊಳಿ, ಸುಭಾಸ ಕಟ್ಟಿಮನಿ, ಶೇಖರ ಆಲೂರ ಸೇರಿದಂತೆ ಇತರರು ಇದ್ದರು

ಹೆಚ್ಚಿನ ಸುದ್ದಿ