Saturday, May 30, 2026
Homeಧಾರ್ಮಿಕರಾಯರ ಮಠದ ಪಕ್ಕದ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ತಡೆನ್ಯಾಯಾಲಯದಲ್ಲಿ ಪ್ರಕರಣ ದಾಖಲು ಹಿನ್ನೆಲೆ ಪುರಸಭೆಯಿಂದ ಸೂಚನಾ...

ರಾಯರ ಮಠದ ಪಕ್ಕದ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ತಡೆನ್ಯಾಯಾಲಯದಲ್ಲಿ ಪ್ರಕರಣ ದಾಖಲು ಹಿನ್ನೆಲೆ ಪುರಸಭೆಯಿಂದ ಸೂಚನಾ ಪತ್ರ

ಲಿಂಗಸುಗೂರು, ಮೇ 30: ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪಕ್ಕದಲ್ಲಿರುವ ಪುರಸಭೆ ಆಸ್ತಿ ಸಂಖ್ಯೆ 2-11-154ಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸಿವಿಲ್ ದಾವೆ ದಾಖಲಾಗಿರುವ ಹಿನ್ನೆಲೆಯಲ್ಲಿ, ಅಂತಿಮ ತೀರ್ಪು ಪ್ರಕಟವಾಗುವವರೆಗೆ ಯಾವುದೇ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳದಂತೆ ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿಗಳು ಸೂಚನಾ ಪತ್ರ ಜಾರಿಗೊಳಿಸಿದ್ದಾರೆ.
ಆಸ್ತಿ ಮಾಲೀಕರಾದ ವನಜಾಬಾಯಿ ಪತಿ ರಾಘವೇಂದ್ರಾಚಾರ ಅವರ ಹೆಸರಿನಲ್ಲಿರುವ ಈ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಪುರಸಭೆಯಿಂದ ಪರವಾನಗಿ ನೀಡಲಾಗಿತ್ತು. ಆದರೆ, ಈ ಆಸ್ತಿಗೆ ಸಂಬಂಧಿಸಿದಂತೆ ಮುತಾಲಿಕ ರಾಘವೇಂದ್ರ ರಾವ್ ಅವರು ಲಿಂಗಸುಗೂರಿನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿ ಸಿವಿಲ್ ದಾವೆ ದಾಖಲಿಸಿದ್ದು, ಪ್ರಕರಣದಲ್ಲಿ ಪುರಸಭೆ ಮುಖ್ಯಾಧಿಕಾರಿಯವರನ್ನೂ ಪ್ರತಿವಾದಿಯಾಗಿ ಸೇರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪುರಸಭೆ ವತಿಯಿಂದ ದಿನಾಂಕ 29-05-2026ರಂದು ಸೂಚನಾ ಪತ್ರ ಹೊರಡಿಸಲಾಗಿದ್ದು, ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಸದರಿ ಆಸ್ತಿಯಲ್ಲಿ ಯಾವುದೇ ರೀತಿಯ ಭೌತಿಕ ಕಟ್ಟಡ ನಿರ್ಮಾಣ ಅಥವಾ ಅದಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಸೂಚನೆಯನ್ನು ಉಲ್ಲಂಘಿಸಿ ಕಾಮಗಾರಿ ನಡೆಸಿದಲ್ಲಿ ಈಗಾಗಲೇ ನೀಡಿರುವ ಕಟ್ಟಡ ನಿರ್ಮಾಣ ಪರವಾನಗಿಯನ್ನು ನಿಯಮಾನುಸಾರ ರದ್ದುಪಡಿಸುವುದರ ಜೊತೆಗೆ ಕಾಮಗಾರಿಗಾಗಿ ಸ್ಥಳದಲ್ಲಿ ಸಂಗ್ರಹಿಸಿರುವ ನಿರ್ಮಾಣ ಸಾಮಗ್ರಿಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ನ್ಯಾಯಾಲಯದ ತೀರ್ಪು ಹೊರಬೀಳುವವರೆಗೆ ವಿವಾದಿತ ಆಸ್ತಿಯ ಸ್ಥಿತಿಗತಿಯನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಹೆಚ್ಚಿನ ಸುದ್ದಿ