ಬೆಂಗಳೂರು ಜು.12: ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ ಹಾಗೂ ವಿದ್ಯಾರ್ಥಿಗಳ ಆತ್ಮಹತ್ಯೆಯ ಹೊಣೆಗಾರಿಕೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ(ಕೆಪಿವೈಸಿಸಿ) ವತಿಯಿಂದ ಛಾತ್ರೋನ್ ಕಿ ಗೂಂಜ್ (ವಿದ್ಯಾರ್ಥಿಗಳ ಧ್ವನಿ) ಅಭಿಯಾನದ ಅಂಗವಾಗಿ ಬೃಹತ್ ಸೈಕಲ್ ಜಾಥಾ ನಡೆಸಲಾಯಿತು.




ಕೆಪಿವೈಸಿಸಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಅವರ ನೇತೃತ್ವದಲ್ಲಿ ಭಾನುವಾರ ಕೆಪಿಸಿಸಿ ಕಚೇರಿಯಿಂದ ಪ್ರಾರಂಭವಾದ ಜಾಥಾವು ಕೆ.ಆರ್.ಸರ್ಕಲ್ ಮುಖಾಂತರ ಗಾಂಧಿ ಪ್ರತಿಮೆವರೆಗೆ ಸಾಗಿತು. ಜಾಥಾದಲ್ಲಿ ಪಾಲ್ಗೊಂಡ ನೂರಾರು ವಿದ್ಯಾರ್ಥಿಗಳು, ಯುವಕರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸುವ ಫಲಕ (ಪ್ಲಕಾರ್ಡ್) ಹಿಡಿದು, ಜೀವನಕ್ಕಿಂತ ಜೀವ ದೊಡ್ಡದು, ಕನಸು ಸಾಯಬಾರದು – ವಿದ್ಯಾರ್ಥಿ ಸೋಲಬಾರದು ಎಂಬ ನಾನಾ ಘೋಷಣೆಗಳನ್ನು ಕೂಗುತ್ತಾ ಸೈಕಲ್ ತುಳಿಯುವ ಮೂಲಕ ಆತ್ಮಹತ್ಯೆ ಪರಿಹಾರವಲ್ಲ ಎಂಬ ಸಂದೇಶ ಸಾರಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ಮಾತನಾಡಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 1.40 ಕೋಟಿ ವಿದ್ಯಾರ್ಥಿಗಳ ಭವಿಷ್ಯ ಅಂಧಕಾರದಲ್ಲಿದೆ. ಅವರ ಆತ್ಮಸ್ಥೈರ್ಯ ಕುಂದಬಾರದು, ಅವರಲ್ಲಿ ಆತ್ಮವಿಶ್ವಾಸ ಪುನಃ ಮೂಡಬೇಕು ಎಂಬ ಸದುದ್ದೇಶದಿಂದ ರಾಹುಲ್ ಗಾಂಧಿಯವರು ಕೋಟಾದಲ್ಲಿ ಛಾತ್ರೋನ್ ಕಿ ಗೂಂಜ್ ಅಭಿಯಾನಕ್ಕೆ ಚಾಲನೆ ನೀಡಿದರು. ಅಂದರ ಅನುಸಾರ ಭಯದಲ್ಲಿರುವ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವ ಉದ್ದೇಶದಿಂದ ಇಂದು ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಿಮ್ಮ ಸಧೃಡ ಭವಿಷ್ಯ ರೂಪಿಸಲು ಬೇಕಾದ ಕಾರ್ಯಕ್ರಮಗಳನ್ನು ನೀವೇ ಸರ್ಕಾರವನ್ನು ಒತ್ತಾಯಿಸಿ ರೂಪಿಸುವಂತೆ ಮಾಡಬೇಕು ಎಂಬುದು ಸಂವಿಧಾನದ ಆಶಯ. ಆದಕಾರಣ, ಉತ್ತಮ ಯೋಜನೆ, ಕಾರ್ಯಕ್ರಮಗಳಿಗಾಗಿ ನೀವು ಹೋರಾಟದ ಮೂಲಕ ಸರ್ಕಾರವನ್ನು ಒತ್ತಾಯಿಸಬೇಕು. ನಿಮ್ಮ ಭವಿಷ್ಯದ ಜೊತೆ ಚೆಲ್ಲಾಟವಾಡುವ ಸರ್ಕಾರವನ್ನು ಕಿತ್ತೊಗೆಯಬೇಕು. ಸರಿಯಾದ ಶಿಕ್ಷಣ ವ್ಯವಸ್ಥೆಯಿಂದ ಮಾತ್ರ ಬದಲಾವಣೆ ಸಾಧ್ಯವಾಗಿದ್ದು, ಈ ಹೋರಾಟ ತಾರ್ಕಿಕ ಅಂತ್ಯ ತಲುಪುವವರೆಗೂ ಹೋರಾಡಿ ಎಂದು ಯುವಕರಿಗೆ, ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೆಪಿವೈಸಿಸಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಮಾತನಾಡಿ, ಭ್ರಷ್ಟ ವ್ಯವಸ್ಥೆಯ ಲೋಪಕ್ಕೆ ಯಾವುದೇ ವಿದ್ಯಾರ್ಥಿ ತಮ್ಮ ಜೀವವನ್ನು ಬಲಿಕೊಡಬಾರದು. ಬದಲಾವಣೆ ನಿರಂತರ ಹೋರಾಟದಿಂದ ಸಾಧ್ಯವೇ ಹೊರತು ಆತ್ಮಹತ್ಯೆಯಿಂದಲ್ಲ. ಪೋಷಕರೂ ಸಹ ಮಕ್ಕಳ ಮನಸ್ಥಿತಿಯನ್ನು ಅರ್ಥೈಸಿಕೊಂಡು ಅವರ ಬೆನ್ನಿಗೆ ನಿಲ್ಲಬೇಕಾದ ಅವಶ್ಯವಿದೆ. ಪರೀಕ್ಷಾ ಅಕ್ರಮದಿಂದ ಸಮರ್ಥರಲ್ಲದ, ಹಣ ಹೊಂದಿದ ವ್ಯಕ್ತಿಗಳು ಉನ್ನತ ಹುದ್ದೆಗಳನ್ನು ಪಡೆಯುತ್ತಿರುವುದು ದೇಶದ ದುರ್ದೈವ. ಇದನ್ನು ಒಗ್ಗಟ್ಟಿನ ಹೋರಾಟದಿಂದ ಮಾತ್ರ ತಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ಪರೀಕ್ಷಾ ವ್ಯವಸ್ಥೆ ಸುಧಾರಣೆ ಕಾಣುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂಬ ಶಪಥ ಮಾಡೋಣ ಎಂದು ಕರೆ ನೀಡಿದರು.
ಬಿಜೆಪಿಯವರು ಮಕ್ಕಳಿಗೆ ವಿದ್ಯೆ ನೀಡಲು ತಯಾರಿಲ್ಲ. ಅವರ ಮಕ್ಕಳು ಪರೀಕ್ಷಾ ಅಕ್ರಮದಿಂದ ಉತ್ತೀರ್ಣರಾಗಿ ವಿದೇಶಗಳಲ್ಲಿ ಉತ್ತಮ ಹುದ್ದೆ ಪಡೆಯಬೇಕು ಎಂದು ಬಯಸುತ್ತಾರೆ. ಇದುವರೆಗೂ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಯಾವುದೇ ಪ್ರಕರಣದಲ್ಲಿ ಯಾರಿಗೂ ಶಿಕ್ಷೆಯಾಗಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಚುನಾವಣೆ ಮತ್ತು ಓಟ್ ಚೋರಿಯಲ್ಲಿ ವಿದ್ಯಾವಂತರಾಗಿರುವ ಬಿಜೆಪಿಯವರು ಪರೀಕ್ಷೆ ನಡೆಸಲು ಅವಿದ್ಯಾವಂತರಾಗಿದ್ದಾರೆ. ಪರೀಕ್ಷಾ ಅಕ್ರಮದಿಂದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು ಕನಿಷ್ಟ ಕ್ಷಮೆ ಕೇಳದ ಅವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ಹೊರಹಾಕಿದರು.
ಈ ವೇಳೆ ಎಂ ಎಲ್ ಸಿ ಡಿ.ಟಿ.ಶ್ರೀನಿವಾಸ್, ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ತಾರೀಖ್ ಬಾಗವಾನ್, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಚೈತ್ರಾ, ಕಾನೂನು ಘಟಕದ ರಾಜ್ಯಾಧ್ಯಕ್ಷರಾದ ಶ್ರೀಧರ್ ಜಾಧವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
*ಅಭಿಯಾನದ ಹಕ್ಕೊತ್ತಾಯಗಳು:*
1. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು.
2. ಎನ್‌ಟಿಎ ವ್ಯವಸ್ಥೆಯ ವಿರುದ್ಧ ಸಮಗ್ರ ತನಿಖೆ ಮತ್ತು ಸುಧಾರಣೆ ಆಗಬೇಕು.
3. ಪರೀಕ್ಷೆಗಳು, ಫಲಿತಾಂಶಗಳು ಮತ್ತು ಉದ್ಯೋಗಾವಕಾಶಗಳಿಗಾಗಿ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿ ಸಿದ್ಧಪಡಿಸಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು..
ವರದಿಗಾರರು: ಸೋಮಶೇಖರ ಲಮಾಣಿ
