ಬೆಂಗಳೂರು, ಜು.21: ಪ್ರಧಾನಿ ನರೇಂದ್ರ ಮೋದಿಯವರ ನಿವಾಸದ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರಾಹುಲ್ ಗಾಂಧಿಯವರನ್ನು ಬಂಧಿಸಿರುವುದನ್ನು ಖಂಡಿಸಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಲೋಕಭವನದ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರಾದ ಎಚ್.ಎಸ್.ಮಂಜುನಾಥ್ ಗೌಡ ಮಾತನಾಡಿ, ”ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಅನ್ನು ಖಂಡಿಸಿ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನೆ ನಡೆಯುತ್ತಿತ್ತು. ರಾಹುಲ್ ಗಾಂಧಿಯವರನ್ನು ನೇರವಾಗಿ ಎದುರಿಸಲಾಗದ ಹೇಡಿ ಮೋದಿ ಸರ್ಕಾರ ಪೊಲೀಸರನ್ನು ಬಿಟ್ಟು ವಶಕ್ಕೆ ಪಡೆಯುವ ಕುತಂತ್ರಕ್ಕೆ ಮುಂದಾಗಿದೆ,” ಎಂದು ಕಿಡಿಕಾರಿದರು.
”ಒಮ್ಮೆ ಬಿಜೆಪಿ ನಾಯಕರು ಚರಿತ್ರೆಯ ಪುಟಗಳನ್ನು ತಿರುವು ಹಾಕಲಿ. ಓದಲು ಕಷ್ಟವಾದರೆ, ವಿದ್ಯಾವಂತರ ಬಳಿ ಓದಿಸಿ ತಿಳಿಯಲಿ. ರಾಹುಲ್ ಗಾಂಧಿಯವರ ತಾತ, ಮುತ್ತಜ್ಜನವರು ದೇಶಕ್ಕಾಗಿ ಜೈಲಿಗೆ ಹೋದದ್ದು ಇತಿಹಾಸ. ರಾಹುಲ್ ಗಾಂಧಿಯವರು ಇಂತಹ ಹೇಡಿ ಕೃತ್ಯಗಳಿಗೆ ಹೆದರುತ್ತಾರೆ ಎಂದುಕೊಳ್ಳುವುದು ಮೂರ್ಖತನ. ಅವಿದ್ಯಾವಂತರ ಕೂಪವಾದ ಮೋದಿ ಸರ್ಕಾರಕ್ಕೆ ತಾಕತ್ತಿದ್ದರೆ ರಾಹುಲ್ ಗಾಂಧಿಯವರನ್ನು ನೇರವಾಗಿ ಎದುರಿಸಲಿ ಎಂದು ಸವಾಲು ಹಾಕಿದರು.
ಅವಿದ್ಯಾವಂತ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಶಿಕ್ಷಣ ಸಚಿವ ಸ್ಥಾನಕ್ಕೆ ಯೋಗ್ಯವಲ್ಲದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕಡ್ಡಾಯವಾಗಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ಪೊಲೀಸರು ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಹಾಕಿರುವ ಎಫ್ ಐ ಆರ್ ಹಿಂಪಡೆಯಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಈ ವೇಳೆ ಕೈಪಿವೈಸಿಸಿ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಸೇರಿದಂತೆ ನೂರಾರು ಮಂದಿ ಜಮಾಯಿಸಿದ್ದರು. ಪ್ರತಿಭಟನೆಯನ್ನು ಹತ್ತಿಕ್ಕುವ ಹುನ್ನಾರದಿಂದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ವರದಿಗಾರರು ಸೋಮಶೇಖರ ಲಮಾಣಿ
