ಕಲಬುರಗಿ,ಆ.10 :: ಸೂಪರ್ ಎಲ್ನಿನೋ ಪರಿಣಾಮ ಶೇ.75ರಷ್ಟು ಮಳೆ ಕೊರತೆಯಿಂದ ಈ ಬಾರಿ ರಾಜ್ಯದಲ್ಲಿ ಬರದ ಛಾಯೆ ಅವರಿಸಿದ್ದು, ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುತ್ತದೆ ಎಂದು ರಾಜ್ಯದ ಗೃಹ, ಐ.ಟಿ-ಬಿ.ಟಿ, ಇ.-ಆಡಳಿತ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ (ಪ್ರಕೃತಿ ವಿಕೋಪ) ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸೋಮವಾರ ಕಲಬುರಗಿ ತಾಲೂಕಿನ ಅವರಾದ ಬಿ. ಗ್ರಾಮಕ್ಕೆ ಭೇಟಿ ನೀಡಿ ಸರ್ವೇ ನಂ.67/6 ರಲ್ಲಿನ ವಿಮಲಾಬಾಯಿ ಅಮವಾರಾಯ ಮತ್ತು ಸರ್ವೆ ನಂ.67/7 ಶಕುಂತಲಾ ಸೂರ್ಯಕಾಂತ ಅವರ ಹೊಲಕ್ಕೆ ಭೇಟಿ ನೀಡಿ ಮುಂಗಾರು ಮಳೆ ಇಲ್ಲದೆ ಹಾಳಾದ ಬೆಳೆ ಪ್ರದೇಶ ವೀಕ್ಷಣೆ ಮಾಡಿದ ಅವರು, ಈಗಾಗಲೆ ಪ್ರತಿ ಜಿಲ್ಲೆಗೆ ಬರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ವರದಿ ನೀಡುವಂತೆ ಮುಖ್ಯಮಂತ್ರಿಗಳ ನಿರ್ದೇಶನವಿದ್ದು, ಅದರಂತೆ ಇಂದಿಲ್ಲಿ ಕ್ಷೇತ್ರ ಭೇಟಿಗೆ ಬಂದಿರುವೆ ಎಂದರು.
ರಾಜ್ಯದಲ್ಲಿನ ಬರದ ಸ್ಥಿತಿ ಕುರಿತು ಈಗಾಗಲೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದು ಮನವರಿಕೆ ಮಾಡಿಕೊಟ್ಟಿದ್ದಾರೆ. ಕೇಂದ್ರದ ಕಠಿಣ ಎನ್.ಡಿ.ಆರ್.ಎಫ್ ನಿಯಮಾವಳಿಯಿಂದ ರೈತರಿಗೆ ನ್ಯಾಯಯುತ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ, ಇದನ್ನು ಸರಳಿಕರಣ ಮಾಡುವಂತೆ ರಾಜ್ಯ ದ ಬೇಡಿಕೆ ಇದ್ದು, ಅದನ್ನು ಕೇಂದ್ರ ಸರ್ಕಾರ ಪುಸ್ಕರಿಸಲಿ ಎಂದರು.
ಕಳೆದ ವರ್ಷ ಕಲಬುರಗಿ ಜಿಲ್ಲೆಗೆ ದಾಖಲೆ ಪ್ರಮಾಣದಲ್ಲಿ 650 ಕೋಟಿ ರೂ. ಪರಿಹಾ ಒದಗಿಸಲಾಗಿದೆ. ಇಡೀ ದೇಶದಲ್ಲಿ ಹೆಚ್ಚು ಪರಿಹಾರ ಪಡೆದ ಎರಡನೆ ಜಿಲ್ಲೆ ನಮ್ಮದಾಗಿದೆ. ಈ ಬಾರಿಯೂ ಇದೂವರೆಗೆ 4.50 ಲಕ್ಷ ರೈತರು ಬೆಳೆ ವಿಮೆನಡಿ ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ಬಾರಿ ಶೇ.20ರಷ್ಟು ಗ್ರಾಮ ಪಂಚಾಯತ್ ಪ್ರದೇಶದಲ್ಲಿ ಸರಿಯಾದ ಪರಿಹಾರ ಸಿಕ್ಕಿಲ್ಲ ಎಂಬುವುದು ರೈತರ ಅಳಲಾಗಿದ್ದು, ಈ ಬಾರಿ ಅದು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಲು ಕಂದಾಯ, ಕೃಷಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದೇನೆ ಎಂದರು.
ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ರೂ. ಕುಡಿಯುವ ನೀರು ಪೂರೈಕೆಗೆ ನೀಡಲಾಗಿದೆ. ಹೀಗಾಗಿ ಕುಡಿಯುವ ನೀರು ಪೂರೈಕೆಗೆ ಯಾವುದೆ ಅನುದಾನ ಕೊರತೆ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ 5 ಕೋಟಿ ರೂ. ಈಗಾಗಲೆ ಒದಗಿಸಿದ್ದು, ಅದರಲ್ಲಿ ಕೆಲಸ ಕಾರ್ಯಗಳು ನಡೆದಿವೆ ಎಂದು ಸಚಿವರು ತಿಳಿಸಿದರು.
ಪರಿಹಾರ ಕೊಡಿ,ರೈತರ ಬೇಡಿಕೆ:
ಕ್ಷೇತ್ರ ಭೇಟಿಗೆ ಬಂದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ರೈತ ಮಹಿಳೆ ವಿಮಲಾಬಾಯಿ ಅಂಬಾರಾಯ ಅವರು, ಈಗಾಗಲೆ 50 ಸಾವಿರ ರೂ. ಖರ್ಚು ಮಾಡಿ ಡಿ.ಎ.ಪಿ, ಬೀಜ ಹಾಕಿ ಉದ್ದು ಬಿತ್ತವರಿ. ಮಳೆ ಇಲ್ಲದಕ್ ಬೆಳೆ ಹಾಳಾಗಿ ಹರ್ಗಿವ್ರೀ. ಇದೀಗ ಮತ್ 4 ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತಿವ್ರೀ. ಇದು ಸಹ ಕೈಗೆ ಹತ್ತಲ್ರಿ. ನಮಗ್ ಪರಿಹಾರ ಕೊಡ್ರಿ ಎಂದು ಸಚಿವರಲ್ಲಿ ಬೇಡಿಕೆ ಇಟ್ಟರು.
ವಸತಿ ನಿಲಯಕ್ಕೆ ಭೇಟಿ ನೀಡಲು ಡಿ.ಸಿ, ಸಿ.ಇ.ಓಗೆ ಸೂಚನೆ:
ಜಿಲ್ಲೆಯ ವಸತಿ ನಿಲಯದಲ್ಲಿ ಕಳಪೆ ಅಹಾರ ಸೇವಿಸಿ ನಡೆದ ದುರ್ಘಟನೆ ಹಿನ್ನೆಲೆಯಲ್ಲಿ ಪತ್ರಕರ್ತ ವಸತಿ ನಿಲಯಕ್ಕೆ ಭೇಟಿ ನಿಡಿ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ, ಶುಚಿತ್ವ ಮತ್ತು ನೈರ್ಮಲ್ಯ ಕುರಿತು ತಪಾಸಣೆ ನಡೆಸುವಂತೆ ಡಿ.ಸಿ, , ಜಿಲ್ಲಾ ಪಂಚಾಯತ್ ಸಿ.ಇ.ಓ ಅವರಿಗೆ ನಿರ್ದೇಶನ ನೀಡಿದ್ದೇನೆ ಎಂದರು.
ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಶಾಸಕ ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾಧಿಕಾರಿ ಇಕ್ರಂ ಶರೀಫ್, ಐ.ಜಿ.ಪಿ. ಶಾಂತನು ಸಿನ್ಹಾ, ಕಲಬುರಗಿ ನಗರ ಪೊಲೀಸರ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಡಿ.ಸಿ.ಪಿ ಶಾಲು, ಎಸ್.ಪಿ. ಅಡ್ಡೂರು ಶ್ರೀನಿವಾಸುಲು, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಉಪನಿರ್ದೇಶಕ ಡಾ.ಬಾಲರಾಜ ಬಿರಾದಾರ ಇದ್ದರು.
ನಂತರ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೆರೆ ಭೋಸಗಾ ಗ್ರಾಮಕ್ಕೆ ಭೇಟಿ ನೀಡಿ ಸರ್ವೆ ನಂ. 99/3 ರಲ್ಲಿನ ಶಬ್ಬಿರ ಅಹ್ಮದ್ ಅವರು ಎರಡು ಬಾರಿ ಬೆಳೆದ ತೊಗರಿ ಬಿತ್ತನೆ ಪ್ರದೇಶ ವೀಕ್ಷಿಸಿದರು. ಶಾಸಕ ಅಲ್ಲಮಪ್ರಭು ಪಾಟೀಲ ಅವರು ಸಚಿವರಿಗೆ ಜೊತೆಯಾಗಿದ್ದರು.
