Sunday, September 6, 2026
HomeUncategorizedಪೊಲೀಸ್ ವ್ಯವಸ್ಥೆ ಮತ್ತಷ್ಟು ಜನ ಸ್ನೇಹಿಯಾಗಬೇಕು; ಡಿಸಿಪಿ ವಂಶಿಕೃಷ್ಣ

ಪೊಲೀಸ್ ವ್ಯವಸ್ಥೆ ಮತ್ತಷ್ಟು ಜನ ಸ್ನೇಹಿಯಾಗಬೇಕು; ಡಿಸಿಪಿ ವಂಶಿಕೃಷ್ಣ

ಎಸ್.ಎಂ.ಜೆ ಸಮೂಹ ಸಂಸ್ಥೆ ಶಿಕ್ಷಕರ ದಿನಾಚರಣೆ

25 ಅತ್ಯುತ್ತಮ ಪೊಲೀಸ್ ಅಧಿಕಾರಿಗಳು ಹಾಗೂ 150 ಶಿಕ್ಷಕರಿಗೆ ಸನ್ಮಾನ

ಬೆಂಗಳೂರು, ಸೆ. 5; ಶಿಕ್ಷಕರ ದಿನಾಚರಣೆಯ ಅಂಗವಾಗಿ, ಬೆಂಗಳೂರಿನ ಪೊಲೀಸ್ ಪಡೆಯಲ್ಲಿ ಸಲ್ಲಿಸುತ್ತಿರುವ ಅತ್ಯುತ್ತಮ ಸೇವೆ ಹಾಗೂ ಅಸಾಧಾರಣ ಕೊಡುಗೆಗಳನ್ನು ಗೌರವಿಸಿ ಎಸ್.ಎಂ.ಜೆ ಸಮೂಹ ಸಂಸ್ಥೆಗಳಿಂದ 25 ಪೊಲೀಸ್ ಅಧಿಕಾರಿಗಳು, 150 ಕ್ಕೂ ಅಧಿಕ ಶಿಕ್ಷಕರನ್ನು ಸನ್ಮಾನಿಸಲಾಯಿತು.

ನಗರದ ಬಿಬಿಯುಎಲ್ ಜೈನ್ ವಿದ್ಯಾಲಯ ಮತ್ತು ಸಿ.ಬಿ ಭಂಡಾರಿ ಜೈನ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗಣ್ಯ ಅತಿಥಿಗಳು ಸೇರಿ 250ಕ್ಕೂ ಅಧಿಕ ಪೊಲೀಸರು ಭಾಗವಹಿಸಿದ್ದರು.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಾಗೂ ಸಮಾಜದ ಸೇವೆಯಲ್ಲಿ ಅಸಾಧಾರಣ ಧೈರ್ಯ, ಬದ್ಧತೆ ಮತ್ತು ಸಮರ್ಪಣಾ ಮನೋಭಾವ ಪ್ರದರ್ಶಿಸಿರುವ 25 ಪೊಲೀಸ್ ಅಧಿಕಾರಿಗಳನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.

ಡಿಸಿಪಿ ವಂಶಿ ಕೃಷ್ಣ ಮಾತನಾಡಿ, ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಇರಬೇಕು. ಅದಕ್ಕಾಗಿಯೇ ಸಮುದಾಯ ಪೊಲೀಸ್ ವ್ಯವಸ್ಥೆಗೆ ಹೆಚ್ಚಿನ ಮಾನ್ಯತೆ ದೊರೆತಿದೆ. ಪೊಲೀಸರು ಮತ್ತಷ್ಟು ಜನ ಸ್ನೇಹಿಯಾಗಬೇಕು.
ಸವಾಲಿನ ಸನ್ನಿವೇಶಗಳಲ್ಲಿ ಕರ್ತವ್ಯದ ಮಿತಿಯನ್ನು ಮೀರಿ ಕಾರ್ಯನಿರ್ವಹಿಸಿರುವ ಈ ಅಧಿಕಾರಿಗಳು ನಾಗರಿಕರ ಸುರಕ್ಷತೆ ಮತ್ತು ಕ್ಷೇಮಾಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.
ಸಂಸ್ಥೆಯ ಅಧ್ಯಕ್ಷ ಚಂಪಾಲಾಲ್‌ಜಿ ಭಂಡಾರಿ ಮಾತನಾಡಿ, ಸಮಾಜದ ಒಳಿತಿಗಾಗಿ ನಿಸ್ವಾರ್ಥವಾಗಿ ದುಡಿಯುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುpವ ನಂಬಿಕೆಯನ್ನು ಸಂಸ್ಥೆ ಹೊಂದಿದೆ. ಪೊಲೀಸ್ ಸಮುದಾಯದ ಸೇವೆಯನ್ನು ಮೆಚ್ಚಿ ಗೌರವ ಸೂಚಿಸುವ ಕ್ರಮವಾಗಿ, ಎಸ್.ಎಂ.ಜೆ ಸಮೂಹ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಪೊಲೀಸರ ಮಕ್ಕಳಿಗೆ ಶುಲ್ಕದಲ್ಲಿ ಶೇ.15ರಷ್ಟು ವಿಶೇಷ ರಿಯಾಯಿತಿ ನೀಡಲು ಸಂಸ್ಥೆ ನಿರ್ಧರಿಸಿದೆ ಎಂದರು.

ಭವಿಷ್ಯ ರೂಪಿಸುವ ಶಿಕ್ಷಕರಿಗೆ ಗೌರವ
ಶಿಕ್ಷಕರ ದಿನಾಚರಣೆಯ ಅಂಗವಾಗಿ ಸಂಸ್ಥೆಯ 150 ಶಿಕ್ಷಕರನ್ನು ಸನ್ಮಾನಿಸಲಾಯಿತು. ಯುವ ಮನಸ್ಸುಗಳನ್ನು ರೂಪಿಸುವ ಹಾಗೂ ಭವಿಷ್ಯದ ಪೀಳಿಗೆಯನ್ನು ಸಿದ್ಧಗೊಳಿಸುವಲ್ಲಿ ಅವರು ಸಲ್ಲಿಸುತ್ತಿರುವ ಅಮೂಲ್ಯ ಕೊಡುಗೆಯನ್ನು ಗುರುತಿಸುವುದು ಇದರ ಉದ್ದೇಶವಾಗಿದೆ. ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರು ಮತ್ತು ಪೊಲೀಸರು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬುದು ಸಂಸ್ಥೆಯ ನಂಬಿಕೆ. ಶಿಕ್ಷಕರು ಜ್ಞಾನ ಮತ್ತು ಮೌಲ್ಯಗಳ ಮೂಲಕ ಮುಂದಿನ ಪೀಳಿಗೆಯನ್ನು ಸಬಲೀಕರಿಸಿದರೆ, ಪೊಲೀಸ್ ಅಧಿಕಾರಿಗಳು ಸಮಾಜದ ಸುರಕ್ಷತೆ ಕಾಪಾಡಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಎತ್ತಿಹಿಡಿಯುತ್ತಾರೆ ಎಂದರು.

ಮಹಿಳಾ ಸುರಕ್ಷತೆ ಮತ್ತು ಪೋಕ್ಸೊ ಕುರಿತು ವಿಶೇಷ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಹೆಚ್ಚಿನ ಸುದ್ದಿ