ಅಥಣಿ: ತಂತ್ರಜ್ಞಾನ ಅದೆಷ್ಟೇ ಮುಂದುವರಿದಿದ್ದರೂ, ಕ್ಷಣಾರ್ಧದಲ್ಲಿಯೇ ಜಗತ್ತಿನ ಎಲ್ಲಾ ಸುದ್ದಿಗಳು ನಮ್ಮ ಬೆರಳ ತುದಿಯಲ್ಲಿದ್ದರೂ, ವಸ್ತುನಿಷ್ಠ ಸತ್ಯದ ವರದಿ ಸಿಗುವುದು ಇಂದಿಗೂ ದಿನಪತ್ರಿಕೆಗಳಲ್ಲಿ ಮಾತ್ರ ಎಂದು ಕಕಮರಿಯ ಆತ್ಮಾರಾಮ ಸ್ವಾಮೀಜಿ ಹೇಳಿದರು.
ಅವರು ಬುಧವಾರ ಅರಟಾಳ ಗ್ರಾಮದಲ್ಲಿ ಅಥಣಿ ತಾಲೂಕಾ ಕಾರ್ಯನಿರತ ಗ್ರಾಮೀಣ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡ ಪ್ರತಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು, ಪತ್ರಿಕೆ ಕೇವಲ ಕಾಗದದ ತುಂಡಲ್ಲ; ಅದು ಸಮಾಜದ ಕನ್ನಡಿ, ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ. ಇಂದಿನಿಂದಲೇ ಮೊಬೈಲ್ ಗಳಿಂದ ಹೊರಬಂದು, ದಿನಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸವನ್ನು ನಮ್ಮದಾಗಿಸಿಕೊಳ್ಳೋಣ. ಕನ್ನಡ ಪತ್ರಿಕೆಗಳನ್ನು ಉಳಿಸಿ ಬೆಳೆಸೋಣ ಎಂದರು.
ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ, ಇಂದು ಸಾಮಾಜಿಕ ಜಾಲತಾಣಗಳು ಸುಳ್ಳು ಸುದ್ದಿಗಳ ಗೂಡಾಗುತ್ತಿವೆ. ಅಲ್ಲಿ ಹರಡುವ ವದಂತಿಗಳಿಗೆ ಬ್ರೇಕ್ ಬಿದ್ದು, ಅಸಲಿ ಸತ್ಯ ಏನೆಂಬುದು ಜಗತ್ತಿಗೆ ಗೊತ್ತಾಗುವುದು ಮರುದಿನ ಬೆಳಗ್ಗೆ ಪತ್ರಿಕೆಯಲ್ಲಿ ಅಧಿಕೃತ ವರದಿ ಪ್ರಕಟವಾದಾಗ ಮಾತ್ರ. ಹಾಗಾಗಿಯೇ, ಇಂದಿನ ಡಿಜಿಟಲ್ ಯುಗದಲ್ಲೂ ಮುದ್ರಣ ಮಾಧ್ಯಮದ ವಿಶ್ವಾಸಾರ್ಹತೆ ಕುಗ್ಗಿಲ್ಲ. ಒಂದು ಪತ್ರಿಕೆ ಮುದ್ರಣವಾಗಿ ನಮ್ಮ ಮನೆ ತಲುಪಬೇಕಾದರೆ ಅದರ ಹಿಂದೆ ಬಹುದೊಡ್ಡ ಪರಿಶ್ರಮವಿದೆ. ಹಗಲು-ರಾತ್ರಿ ಎನ್ನದೆ, ಪ್ರಾಣದ ಹಂಗು ತೊರೆದು ಸುದ್ದಿ ಕಲೆಹಾಕುವ ಪತ್ರಕರ್ತರು. ಬಂದ ಸುದ್ದಿಗಳನ್ನು ಸತ್ಯಾಸತ್ಯತೆಯ ನೋಡಿ, ತಿದ್ದಿ ತೀಡುವ ಉಪಸಂಪಾದಕರು. ಮಧ್ಯರಾತ್ರಿಯಿಡೀ ನಿದ್ದೆಗೆಟ್ಟು ಪತ್ರಿಕೆ ಮುದ್ರಿಸುವ ತಾಂತ್ರಿಕ ಸಿಬ್ಬಂದಿ. ಈ ಇಡೀ ವ್ಯವಸ್ಥೆಯ ಪರಿಶ್ರಮವನ್ನು ಪ್ರತಿಯೊಬ್ಬ ನಾಗರಿಕನೂ ಅರ್ಥ ಮಾಡಿಕೊಳ್ಳಬೇಕು. ಆಧುನಿಕ ಯುಗದಲ್ಲೂ ಮುದ್ರಣ ಮಾಧ್ಯಮಕ್ಕೆ ಶಕ್ತಿ ನೀಡಿ, ಸಮಾಜವನ್ನು ತಿದ್ದುವ ಬಹುದೊಡ್ಡ ಜವಾಬ್ದಾರಿಯನ್ನು ಹೊತ್ತು ಮುನ್ನಡೆಯುತ್ತಿರುವ ಪತ್ರಕರ್ತರಿಗೆ ಹಾಗೂ ಒಟ್ಟಾರೆ ಪತ್ರಿಕೋದ್ಯಮಕ್ಕೆ ನಾವು ಕೃತಜ್ಞತೆ ಸಲ್ಲಿಸಲೇಬೇಕು ಎಂದರು.
ಮಾಶಜಿ ಶಾಸಕ ಶಹಜಾನ ಡೊಂಗರಗಾಂವ ಮಾತನಾಡಿ, ಅಂದು ಭಾರತದ ಸ್ವಾತಂತ್ರ‍್ಯ ಹೋರಾಟ, ಸಾಮಾಜಿಕ ನ್ಯಾಯ, ತುಳಿತಕ್ಕೊಳಗಾದವರ ಧ್ವನಿಯಾಗಿ ವಿವಿಧ ಮಹತ್ತರ ಉದ್ದೇಶಗಳನ್ನು ಇಟ್ಟುಕೊಂಡು ಪತ್ರಿಕೆಗಳು ಆರಂಭವಾದವು. ಸಮಾಜವನ್ನು ಜಾಗೃತಗೊಳಿಸುವಲ್ಲಿ ಪತ್ರಿಕೆಗಳ ಪಾತ್ರ ಅನನ್ಯವಾಗಿತ್ತು. ಆದರೆ, ಇಂದು ಓದುಗರ ಹವ್ಯಾಸ ಕಡಿಮೆಯಾಗುತ್ತಿರುವುದು ನಿಜಕ್ಕೂ ವಿಷಾದದ ಸಂಗತಿ. ಬೆಳ್ಳಂಬೆಳಗ್ಗೆ ಚಳಿ, ಮಳೆ, ಗಾಳಿ ಎನ್ನದೆ ಸೈಕಲ್ ತುಳಿದು ಪ್ರತಿಯೊಬ್ಬರ ಮನೆ ಮನೆಗೆ ಪತ್ರಿಕೆ ತಲುಪಿಸುವ ಪತ್ರಿಕೆ ವಿತರಕರ ಶ್ರಮ ಬೆಲೆಕಟ್ಟಲಾಗದ್ದು. ಬೆಳಗ್ಗೆ ಎದ್ದು ಪತ್ರಿಕೆ ಓದದಿದ್ದರೆ ಏನೋ ಕಳೆದುಕೊಂಡ ಅನುಭವ. ಆ ಅನುಭವದ ಹಿಂದೆ ಈ ವಿತರಕರ ಬೆವರಿನ ಹನಿಗಳಿವೆ. ಇಂದು ಈ ವಿತರಕರ ಹಾಗೂ ಸಣ್ಣ ಪತ್ರಕರ್ತರ ಕುಟುಂಬ ನಿರ್ವಹಣೆ ಮತ್ತು ಆರೋಗ್ಯದ ಸ್ಥಿತಿ ಆಶಾದಾಯಕವಾಗಿಲ್ಲ. ಪತ್ರಿಕೆ ಹಂಚುವ ಜನರ ಆರೋಗ್ಯ ವಿಮೆ, ಅವರ ಕುಟುಂಬ ನಿರ್ವಹಣೆಗೆ ಆಸರೆ ಹಾಗೂ ನಿವೃತ್ತಿಯ ನಂತರ ಪಿಂಚಣಿ ಸವಲತ್ತುಗಳನ್ನು ನೀಡಿ ಪತ್ರಿಕೋದ್ಯಮವನ್ನು ತಳಮಟ್ಟದಿಂದ ಉಳಿಸುವ ಕೆಲಸವನ್ನು ಸರ್ಕಾರ ಆದ್ಯತೆಯ ಮೇಲೆ ಮಾಡಬೇಕಾಗಿದೆ ಎಂದರು.
ಉಪನ್ಯಾಸ ನೀಡಿದ ನ್ಯಾಯವಾದಿ ಅಮೋಘಸಿದ್ಧ್ದ ಖೊಬ್ರಿ ಮಾತನಾಡಿ, ಇಂದು ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಅವರ ಭವಿಷ್ಯವನ್ನು ಹಾಳುಮಾಡುವ ಬದಲು, ಅವರ ಕೈಗೆ ದಿನಪತ್ರಿಕೆಯನ್ನು ನೀಡಿ ಜ್ಞಾನವನ್ನು ಬೆಳೆಸಬೇಕಾದ ತುರ್ತು ಅಗತ್ಯವಿದೆ. ನಮ್ಮ ಹೆಮ್ಮೆಯ ಕನ್ನಡ ಪತ್ರಿಕೆಗಳ ಉಳಿವಿಗಾಗಿ ಅನಿವಾರ್ಯತೆ ಬಂದಿರುವುದು ಇಂದಿನ ಸಮಾಜದ ದೊಡ್ಡ ವಿಪರ್ಯಾಸ. ಪತ್ರಿಕೆಗಳನ್ನು ಓದುವುದು ಮತ್ತು ಅವುಗಳನ್ನು ಬೆಳೆಸುವುದು ನಮ್ಮ ಕರ್ತವ್ಯ ಎಂಬುದನ್ನು ನಾವು ಮರೆತು ಕುಳಿತಿದ್ದೇವೆ. ಕೇವಲ ಮೊಬೈಲ್ ಪರದೆಯ ಮೇಲೆ ಹೆಡ್‌ಲೈನ್ಸ್ ನೋಡಿ ಸ್ಕ್ರಾಲ್ ಮಾಡುವ ಇಂದಿನ ಕಾಲದಲ್ಲಿ, ಪತ್ರಿಕೆಯನ್ನು ಕೈಯಲ್ಲಿ ಹಿಡಿದು ಅದರಲ್ಲಿನ ಆಳವಾದ ವಿಶ್ಲೇಷಣಾತ್ಮಕ ಲೇಖನಗಳು, ಅಂಕಣಗಳು ಮತ್ತು ಸಾಹಿತ್ಯವನ್ನು ಓದುವುದರಲ್ಲಿ ಸಿಗುವ ಆನಂದ ಹಾಗೂ ಜ್ಞಾನ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಇಂತಹ ಸತ್ವಯುತ ಲೇಖನಗಳನ್ನು ಪ್ರಕಟಿಸಿ, ಓದುಗರ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಇಂದಿನ ಪತ್ರಿಕೋದ್ಯಮದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಅರಟಾಳ ಗ್ರಾಪಂ ಮಾಜಿ ಅಧ್ಯಕ್ಷೆ ಕಾಂತಾಬಾಯಿ ಯ. ಹಟ್ಟಿ, ಗಿರೀಶ ಬುಟಾಳಿ, ಶಿವು ಗುಡ್ಡುಪುರ, ಶಿವಪ್ಪ ಲ. ಹಟ್ಟಿ, ರಾಮಪ್ಪಾ ಮಾ. ಪೂಜಾರಿ, ಈಶ್ವರಲಿಂಗ ಕಲಫಟಗಿ, ಡಾ|| ವಿಲಾಸ ಜಂಬಗಿ, ಮಲ್ಲಪ್ಪ ನಾ. ಪೂಜಾರಿ, ಮಲ್ಲಪ್ಪ ಡಂಗಿ, ಕಳಸಪ್ಪಾ ಹೊನಗೌಡ, ಹಣಮಂತ ಪೂಜಾರಿ, ರಾಕೇಶ ಮೈಗೂರ, ಪಾಂಡಪ್ಪಾ ಮಾಂಗ, ಮಡಿವಾಳಪ್ಪಾ ರಾಮಗೊಂಡ, ಮೈನುದ್ದಿನ ಡೊಂಗರಗಾಂವ,ಪರಮಾನಂದ ಖ್ಯಾಡಿ ಉಪಸ್ಥಿತರಿದ್ದರು. ಸದಾನಂದ ಮಾಡಗ್ಯಾಳ ಕಾರ್ಯಕ್ರಮ ನಡೆಸಿಕೊಟ್ಟರು.
ಇಂದು ಸಾಮಾಜಿಕ ಜಾಲತಾಣಗಳು ಸುಳ್ಳು ಸುದ್ದಿಗಳ ಗೂಡಾಗುತ್ತಿವೆ. ಅಲ್ಲಿ ಹರಡುವ ವದಂತಿಗಳಿಗೆ ಬ್ರೇಕ್ ಬಿದ್ದು, ಅಸಲಿ ಸತ್ಯ ಏನೆಂಬುದು ಜಗತ್ತಿಗೆ ಗೊತ್ತಾಗುವುದು ಮರುದಿನ ಬೆಳಗ್ಗೆ ಪತ್ರಿಕೆಯಲ್ಲಿ ಅಧಿಕೃತ ವರದಿ ಪ್ರಕಟವಾದಾಗ ಮಾತ್ರ. ಹಾಗಾಗಿಯೇ, ಇಂದಿನ ಡಿಜಿಟಲ್ ಯುಗದಲ್ಲೂ ಮುದ್ರಣ ಮಾಧ್ಯಮದ ವಿಶ್ವಾಸಾರ್ಹತೆ ಕುಗ್ಗಿಲ್ಲ.
-ಚಿದಾನಂದ ಸವದಿ. ಕಾಂಗ್ರೆಸ್ ಮುಖಂಡರು ಅಥಣಿ.
ಇಂದು ಈ ವಿತರಕರ ಹಾಗೂ ಸಣ್ಣ ಪತ್ರಕರ್ತರ ಕುಟುಂಬ ನಿರ್ವಹಣೆ ಮತ್ತು ಆರೋಗ್ಯದ ಸ್ಥಿತಿ ಆಶಾದಾಯಕವಾಗಿಲ್ಲ. ಪತ್ರಿಕೆ ಹಂಚುವ ಜನರ ಆರೋಗ್ಯ ವಿಮೆ, ಅವರ ಕುಟುಂಬ ನಿರ್ವಹಣೆಗೆ ಆಸರೆ ಹಾಗೂ ನಿವೃತ್ತಿಯ ನಂತರ ಪಿಂಚಣಿ ಸವಲತ್ತುಗಳನ್ನು ನೀಡಿ ಪತ್ರಿಕೋದ್ಯಮವನ್ನು ತಳಮಟ್ಟದಿಂದ ಉಳಿಸುವ ಕೆಲಸವನ್ನು ಸರ್ಕಾರ ಆದ್ಯತೆಯ ಮೇಲೆ ಮಾಡಬೇಕಾಗಿದೆ.
-ಶಹಜಾನ ಡೊಂಗರಗಾಂವ. ಮಾಜಿ ಶಾಸಕ ಅಥಣಿ.
ಕೇವಲ ಮೊಬೈಲ್ ಪರದೆಯ ಮೇಲೆ ಹೆಡ್‌ಲೈನ್ಸ್ ನೋಡಿ ಸ್ಕ್ರಾಲ್ ಮಾಡುವ ಇಂದಿನ ಕಾಲದಲ್ಲಿ, ಪತ್ರಿಕೆಯನ್ನು ಕೈಯಲ್ಲಿ ಹಿಡಿದು ಅದರಲ್ಲಿನ ಆಳವಾದ ವಿಶ್ಲೇಷಣಾತ್ಮಕ ಲೇಖನಗಳು, ಅಂಕಣಗಳು ಮತ್ತು ಸಾಹಿತ್ಯವನ್ನು ಓದುವುದರಲ್ಲಿ ಸಿಗುವ ಆನಂದ ಹಾಗೂ ಜ್ಞಾನ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಇಂತಹ ಸತ್ವಯುತ ಲೇಖನಗಳನ್ನು ಪ್ರಕಟಿಸಿ, ಓದುಗರ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಇಂದಿನ ಪತ್ರಿಕೋದ್ಯಮದ ಕಾರ್ಯ ನಿಜಕ್ಕೂ ಶ್ಲಾಘನೀಯ.
-ಅಮೋಘಸಿದ್ಧ್ದ ಖೊಬ್ರಿ. ನ್ಯಾಯವಾದಿ ಅಥಣಿ.
