ಮುಂಡಗೋಡ, ಜುಲೈ 22:
ತಾಲೂಕಾ ನಾಗರಿಕ ಮತ ಕಾವಲು ಸಮಿತಿ, ಮುಂಡಗೋಡ ವತಿಯಿಂದ ಇಂದು ಸಂಜೆ 5.00 ಗಂಟೆಗೆ ಮುಂಡಗೋಡ ತಹಸೀಲ್ದಾರರ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ, ಕಾರವಾರ ಅವರಿಗೆ ಸರ್ಕಾರದ ಇತ್ತೀಚಿನ ಆಡಳಿತಾತ್ಮಕ ಆದೇಶವನ್ನು ವಿರೋಧಿಸಿ ಮನವಿ ಸಲ್ಲಿಸಲಾಯಿತು.
ಸಮಿತಿಯ ಉಸ್ತುವಾರಿಯಾಗಿ ಡಾ. ಇಸೇಬೆಲ್ಲಾ ಜೇವಿಯರ್ ಅವರ ನೇತೃತ್ವದಲ್ಲಿ ಸಲ್ಲಿಸಲಾದ ಮನವಿಯಲ್ಲಿ, ಕರ್ನಾಟಕ ಸರ್ಕಾರದ ಆದೇಶದನ್ವಯ ಜಾತಿ ಪ್ರಮಾಣಪತ್ರಗಳನ್ನು ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒ) ವರದಿಯನ್ನು ಆಧರಿಸಿ ನೀಡುವ ವ್ಯವಸ್ಥೆಯು ಜಿಲ್ಲಾಧಿಕಾರಿಗಳ ಕಾನೂನುಬದ್ಧ ಅಧಿಕಾರ ಹಾಗೂ ಆಡಳಿತಾತ್ಮಕ ಸ್ವಾಯತ್ತತೆಯನ್ನು ದುರ್ಬಲಗೊಳಿಸುವ ಸಾಧ್ಯತೆ ಇರುವುದರಿಂದ, ಸರ್ಕಾರ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಲಾಯಿತು.
ಜಾತಿ ಪ್ರಮಾಣಪತ್ರವು ನಾಗರಿಕರ ಹಕ್ಕು, ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಅತ್ಯಂತ ಮಹತ್ವದ ದಾಖಲೆಯಾಗಿದ್ದು, ಅದರ ಪರಿಶೀಲನೆ ಮತ್ತು ವಿತರಣೆಯಲ್ಲಿ ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆ ಹಾಗೂ ಕಾನೂನುಬದ್ಧ ಪ್ರಕ್ರಿಯೆಯೇ ಮುಂದುವರಿಯಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಬಿಎಲ್ಒ ವರದಿಯನ್ನು ಮಾತ್ರ ಆಧಾರವಾಗಿಸಿಕೊಂಡು ನಿರ್ಧಾರ ಕೈಗೊಳ್ಳುವುದರಿಂದ ಅನಗತ್ಯ ಗೊಂದಲಗಳು, ತಪ್ಪು ಮಾಹಿತಿ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಇಸೇಬೆಲ್ಲಾ ಜೇವಿಯರ್ ಅವರು, “ಜಿಲ್ಲಾಧಿಕಾರಿಗಳು ಜಿಲ್ಲೆಯ ಆಡಳಿತದ ಮುಖ್ಯಸ್ಥರಾಗಿದ್ದು, ಅವರ ಅಧಿಕಾರವನ್ನು ಕುಗ್ಗಿಸುವ ಯಾವುದೇ ಕ್ರಮವು ಉತ್ತಮ ಆಡಳಿತದ ತತ್ವಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಸರ್ಕಾರ ಈ ಆದೇಶವನ್ನು ತಕ್ಷಣ ಮರುಪರಿಶೀಲಿಸಿ ಹಿಂಪಡೆಯಬೇಕು ಹಾಗೂ ಜಿಲ್ಲಾಡಳಿತದ ಗೌರವ ಮತ್ತು ಸ್ವಾಯತ್ತತೆಯನ್ನು ಕಾಪಾಡಬೇಕು” ಎಂದು ಆಗ್ರಹಿಸಿದರು.
ಈ ಮನವಿ ಸಲ್ಲಿಕೆ ಸಂದರ್ಭದಲ್ಲಿ ತಾಲೂಕಾ ನಾಗರಿಕ ಮತ ಕಾವಲು ಸಮಿತಿಯ ತಾಲೂಕು ಸಂಚಾಲಕರಾದ ಶ್ರೀ ಎಸ್. ಡಿ. ಮುಡೆಣ್ಣವರ, ಶ್ರೀಮತಿ ಅಕ್ಷತಾ ಬುದ್ನಿ, ಕು. ಜ್ಯೋತಿ ಕೊರವರ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ತಾಲೂಕಾ ನಾಗರಿಕ ಮತ ಕಾವಲು ಸಮಿತಿ, ಮುಂಡಗೋಡ (ಉತ್ತರ ಕನ್ನಡ)
