Tuesday, August 11, 2026
HomeUncategorized“ಚಿಗುರು” ಬೇಸಿಗೆ ಶಿಬಿರದ ಮಕ್ಕಳಿಂದ ಮುಂಡಗೋಡ ಪೊಲೀಸ್ ಠಾಣೆಗೆ ಭೇಟಿ (ತೆರೆದ ಮನೆ ಕಾರ್ಯಕ್ರಮ)

“ಚಿಗುರು” ಬೇಸಿಗೆ ಶಿಬಿರದ ಮಕ್ಕಳಿಂದ ಮುಂಡಗೋಡ ಪೊಲೀಸ್ ಠಾಣೆಗೆ ಭೇಟಿ (ತೆರೆದ ಮನೆ ಕಾರ್ಯಕ್ರಮ)

ನ್ಯಾಸರ್ಗಿ: ಗ್ರಾಮದ ಗ್ರಾಮಾಭಿವೃದ್ಧಿ ಸಮಿತಿ ಹಾಗೂ ಸಂತೃಪ್ತಿ ಯುವತಿಯರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ೫ ದಿನಗಳ “ಚಿಗುರು” ಬೇಸಿಗೆ ಶೈಕ್ಷಣಿಕ ಶಿಬಿರದ ಅಂಗವಾಗಿ ಮಕ್ಕಳಿಗೆ ಜಾಗೃತಿ ಮತ್ತು ಅನುಭವಾಧಾರಿತ ಕಲಿಕೆಯ ಉದ್ದೇಶದಿಂದ ಮುಂಡಗೋಡ ಪೊಲೀಸ್ ಠಾಣೆಗೆ ಭೇಟಿ (ತೆರೆದ ಮನೆ ಕಾರ್ಯಕ್ರಮ) ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಶಿಬಿರದ ವಿದ್ಯಾರ್ಥಿಗಳು ಮುಂಡಗೋಡ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಸಿಪಿಐ ಶ್ರೀ ರಂಗನಾಥ್ ನೀಲಮ್ಮನವರು ಮಕ್ಕಳಿಗೆ ಪೊಲೀಸ್ ಇಲಾಖೆಯ ಕರ್ತವ್ಯ, ಕಾನೂನು ಸುವ್ಯವಸ್ಥೆ ಕಾಪಾಡುವ ಕ್ರಮಗಳು, ಸಾರ್ವಜನಿಕ ಸುರಕ್ಷತೆ, ಹಾಗೂ ಠಾಣೆಯ ಕಾರ್ಯವಿಧಾನ ಕುರಿತು ವಿವರವಾದ ಮಾಹಿತಿ ನೀಡಿದರು. ಜೊತೆಗೆ ಠಾಣೆಯ ವಿವಿಧ ವಿಭಾಗಗಳನ್ನು ಮಕ್ಕಳಿಗೆ ವೀಕ್ಷಿಸಲು ಅವಕಾಶ ಕಲ್ಪಿಸಿ, ಮಕ್ಕಳ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುವ ಮೂಲಕ ಪೊಲೀಸ್ ಇಲಾಖೆಯ ಕಾರ್ಯಚಟುವಟಿಕೆಗಳ ಕುರಿತು ಅರಿವು ಮೂಡಿಸಿದರು.

ಪೊಲೀಸ್ ಸಿಬ್ಬಂದಿ ಶ್ರೀಮತಿ ಮಂಗಳಾ ಅವರು ಠಾಣೆಯ ಪ್ರತಿಯೊಂದು ವಿಭಾಗದ ಕಾರ್ಯವೈಖರಿಯನ್ನು ಮಕ್ಕಳಿಗೆ ಸ್ಥಳದಲ್ಲೇ ತೋರಿಸಿ ವಿವರಿಸಿದರು. ಮಕ್ಕಳು “ಠಾಣೆಯಲ್ಲಿ ಎಷ್ಟು ಪೊಲೀಸರು ಕಾರ್ಯನಿರ್ವಹಿಸುತ್ತಾರೆ?”, “ಮಹಿಳಾ ಪೊಲೀಸ್ ಸಿಬ್ಬಂದಿ ಎಷ್ಟು?”, “ರಾತ್ರಿ ಪಾಳಿಯಲ್ಲಿ ಎಷ್ಟು ಸಿಬ್ಬಂದಿ ಇರುತ್ತಾರೆ?”, “ದೊಡ್ಡ ಕಾರ್ಯಕ್ರಮಗಳಲ್ಲಿ ಎಷ್ಟು ಪೊಲೀಸರು ನಿಯೋಜನೆಗೊಳ್ಳುತ್ತಾರೆ?” ಎಂಬಂತಹ ಹಲವು ಕುತೂಹಲಕಾರಿ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದರು.

ಠಾಣೆ ವೀಕ್ಷಣೆ ನಂತರ *ಸಿಪಿಐ ಶ್ರೀ ರಂಗನಾಥ್ ನೀಲಮ್ಮನವರು ಮಕ್ಕಳಿಂದ ಅನುಭವದ ಕುರಿತು ಅಭಿಪ್ರಾಯ ಕೇಳಿದರು. *ಶಿಬಿರದ ವಿದ್ಯಾರ್ಥಿನಿ ಭೂಮಿಕಾ ಕೊರವರ* ಅವರು “ನಮಗೆ ಪೊಲೀಸ್ ಇಲಾಖೆಯ ಬಗ್ಗೆ ಹಲವು ಹೊಸ ವಿಷಯಗಳು ತಿಳಿದುಬಂದಿವೆ. ಭೇಟಿ ತುಂಬಾ ಉಪಯುಕ್ತವಾಗಿದೆ” ಎಂದು ಹೇಳಿ ಪೊಲೀಸ್ ಇಲಾಖೆಗೆ ಹಾಗೂ ಆಯೋಜಕರಿಗೆ ಧನ್ಯವಾದ ಅರ್ಪಿಸಿದರು.

ಈ ಸಂದರ್ಭದಲ್ಲಿ ಶಿಕ್ಷಣ ಸಮಿತಿಯ ಸದಸ್ಯರಾದ ಕೃಷ್ಣಪ್ಪ ಗವಾಣಿ, ಯುವಕರಾದ ಕೇಶವ ಗವಾಣಿ, ಮಕ್ಕಳ ಪಾಲಕರಾದ ಸುನೀತಾ ಗೌಳಿ, ಯುವರತ್ನ ಒಕ್ಕೂಟದ ಅಧ್ಯಕ್ಷರಾದ ತನ್ವೀರ್ ಮಿರ್ಜಾನಕರ, ಶಿಬಿರದ ಆಯೋಜಕರಾದ ಶ್ರೀಮತಿ ಮಂಗಳಾ ಮೋರೆ, ಎಲ್.ವಿ.ಕೆ ಸಿಬ್ಬಂದಿಗಳಾದ ಶ್ರೀದೇವಿ ಭದ್ರಾಪೂರ ಮತ್ತು ದೀಪಾ ಕೊಳೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ