Sunday, May 10, 2026
Homeಕ್ರೈಂ ಸುದ್ದಿಗಳುಕನಕಪುರದಲ್ಲಿ ಮತ್ತೊಂದು ಆತ್ಮಹತ್ಯೆ: ವೈದ್ಯರ ಸಾವಿನ ಬೆನ್ನಲ್ಲೇ ನರ್ಸ್‌ ನೇಣಿಗೆ ಶರಣು

ಕನಕಪುರದಲ್ಲಿ ಮತ್ತೊಂದು ಆತ್ಮಹತ್ಯೆ: ವೈದ್ಯರ ಸಾವಿನ ಬೆನ್ನಲ್ಲೇ ನರ್ಸ್‌ ನೇಣಿಗೆ ಶರಣು

ರಾಮನಗರ ಜಿಲ್ಲೆ ಕನಕಪುರ ನಗರದಲ್ಲಿ ಆತ್ಮಹತ್ಯೆಗಳ ಸರಣಿ ಆತಂಕಕ್ಕೆ ಕಾರಣವಾಗಿದ್ದು, ವೈದ್ಯರ ಸಾವಿನ ಎರಡು ದಿನಗಳಲ್ಲೇ ಅದೇ ಆಸ್ಪತ್ರೆಯ ನರ್ಸ್‌ ಕೂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕನಕಪುರ ನಗರದ ಮಹದೇಶ್ವರ ಬಡಾವಣೆಯ ನಿವಾಸಿ ಹಾಗೂ ನವೋದಯ ಆಸ್ಪತ್ರೆಯ ನರ್ಸ್‌ ಆಗಿದ್ದ ಸರಸ್ವತಿ (45) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಇದೇ ಆಸ್ಪತ್ರೆಯ ವೈದ್ಯ ಡಾ. ಚೇತನ್ ಟೆಂಕರ್ ಕೌಟುಂಬಿಕ ಕಲಹದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ಡಾ. ಚೇತನ್ ಅವರ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಸರಸ್ವತಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದರು. ವೈದ್ಯರ ಸಾವಿನ ಬೆನ್ನಲ್ಲೇ ನರ್ಸ್‌ ಆತ್ಮಹತ್ಯೆ ಮಾಡಿಕೊಂಡಿರುವುದು ಇದೀಗ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಸ್ಥಳೀಯ ವಲಯದಲ್ಲಿ ವೈದ್ಯ ಮತ್ತು ನರ್ಸ್‌ ನಡುವೆ ಆಪ್ತ ಸಂಬಂಧವಿತ್ತು ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಎರಡೂ ಆತ್ಮಹತ್ಯೆಗಳ ಹಿಂದೆ ಬೇರೆ ಕಾರಣಗಳಿವೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಘಟನೆ ಸಂಬಂಧ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಹೆಚ್ಚಿನ ಸುದ್ದಿ