Saturday, August 29, 2026
Homeರಾಜ್ಯಆಯುಷ್‌ ಆರೋಗ್ಯ ಶಿಬಿರದಲ್ಲಿ 250 ಮಂದಿ ತಪಾಸಣೆ....

ಆಯುಷ್‌ ಆರೋಗ್ಯ ಶಿಬಿರದಲ್ಲಿ 250 ಮಂದಿ ತಪಾಸಣೆ….

ಯೋಗ, ಪಥ್ಯ ಪಾಲನೆಯಿಂದ ಅಸಾಂಕ್ರಾಮಿಕ ಕಾಯಿಲೆ ನಿಯಂತ್ರಣ ಸಾಧ್ಯ: ತಜ್ಞರು

ಮುಂಡಗೋಡ, ಸೆ. 28: ಅಸಾಂಕ್ರಾಮಿಕ ಕಾಯಿಲೆಗಳಿಂದ ದೂರವಿರಲು ಯೋಗಾಭ್ಯಾಸ, ಸಮತೋಲನ ಆಹಾರ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ತಜ್ಞ ವೈದ್ಯರು ಸಲಹೆ ನೀಡಿದರು.

ಕರ್ನಾಟಕ ಸರ್ಕಾರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಉತ್ತರ ಕನ್ನಡ ಜಿಲ್ಲಾ ಆಯುಷ್‌ ಇಲಾಖೆ ಹಾಗೂ ಸರ್ಕಾರಿ ಆಯುರ್ವೇದ ಆಸ್ಪತ್ರೆ, ಮುಂಡಗೋಡ ಇವರ ಆಶ್ರಯದಲ್ಲಿ 2026–27ನೇ ಸಾಲಿನ ರಾಷ್ಟ್ರೀಯ ಆಯುಷ್‌ ಅಭಿಯಾನದಡಿ ಪಟ್ಟಣದ ಲೊಯೋಲ ವಿಕಾಸ ಕೇಂದ್ರದ ಸಹಯೋಗದಲ್ಲಿ ಸೋಮವಾರ ವಿಶೇಷ ಆರೋಗ್ಯ ಶಿಬಿರ (ಔಟ್‌ರೀಚ್‌ ಕ್ಯಾಂಪ್‌) ನಡೆಯಿತು.
ಶಿಬಿರದಲ್ಲಿ ಅಂಗನವಾಡಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ನಿವೃತ್ತ ನೌಕರರು, ವಸತಿ ನಿಲಯಗಳ ಹಾಗೂ ಶಾಲೆಗಳ ಅಡುಗೆ ಸಿಬ್ಬಂದಿ, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಸೇರಿದಂತೆ ಸಾರ್ವಜನಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಒಟ್ಟು 250 ಮಂದಿ ಶಿಬಿರದ ಪ್ರಯೋಜನ ಪಡೆದಿದ್ದು, 25 ಮಂದಿಗೆ ಬಿಪಿ ಮತ್ತು ಶುಗರ್‌ ತಪಾಸಣೆ ಹಾಗೂ 190 ಮಂದಿಗೆ ಆಯುರ್ವೇದ ವೈದ್ಯಕೀಯ ಸೇವೆ ಮತ್ತು ಔಷಧಿಗಳನ್ನು ಉಚಿತವಾಗಿ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕ ಫಾದರ್‌ ಅನಿಲ್‌ ಡಿಸೋಜಾ ವಹಿಸಿದ್ದರು. ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ್‌ ಶಿಬಿರವನ್ನು ಉದ್ಘಾಟಿಸಿದರು. ಸರ್ಕಾರಿ ಆಯುರ್ವೇದ ಆಸ್ಪತ್ರೆ ಮುಂಡಗೋಡದ ಆಡಳಿತ ವೈದ್ಯಾಧಿಕಾರಿ ಡಾ. ಯೋಗೇಶ ಮಡಗಾಂವಕರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಒತ್ತಡ ನಿರ್ವಹಣೆಗೆ ಯೋಗ ಅಗತ್ಯ
ಒತ್ತಡದಿಂದ ಮೈಗ್ರೇನ್‌, ತಲೆನೋವು, ಮೈಕೈ ನೋವು, ಗಂಟು-ಕೀಲು ನೋವು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಇಂತಹ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಯೋಗವೆಂದರೆ ಕೇವಲ ಕೆಲವು ಆಸನಗಳನ್ನು ಮಾಡುವುದಲ್ಲ; ಯಮ, ನಿಯಮ, ಆಸನ, ಪ್ರಾಣಾಯಾಮ ಮತ್ತು ಪ್ರತ್ಯಾಹಾರ ಸೇರಿದಂತೆ ಅಷ್ಟಾಂಗ ಯೋಗದ ಮೂಲತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಧು ಕ್ಲಿನಿಕ್‌ನ ಯೋಗ ಥೆರಪಿಸ್ಟ್‌ ಡಾ. ಲಕ್ಷ್ಮಿ ಬಡೀಗೇರ ಹೇಳಿದರು.
ಪ್ರತಿದಿನ ಕನಿಷ್ಠ 10 ನಿಮಿಷ ಯೋಗಾಭ್ಯಾಸ ಹಾಗೂ ಅನುಲೋಮ–ವಿಲೋಮದಂತಹ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡುವುದರಿಂದ ಒತ್ತಡ ನಿರ್ವಹಣೆಗೆ ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.
ಆರೋಗ್ಯ ಸೇವೆಯ ಸದುಪಯೋಗ ಪಡೆಯಿರಿ
ಆಯುರ್ವೇದವು ರೋಗದ ಲಕ್ಷಣಗಳನ್ನು ಮಾತ್ರವಲ್ಲದೆ ರೋಗದ ಮೂಲ ಕಾರಣಗಳನ್ನು ಅರ್ಥಮಾಡಿಕೊಂಡು ಆರೋಗ್ಯ ಕಾಪಾಡುವ ಪರಂಪರೆಯನ್ನು ಹೊಂದಿದೆ. ಸಾರ್ವಜನಿಕರಿಗೆ ಅಗತ್ಯವಿರುವ ವೈದ್ಯಕೀಯ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವುದು ಆರೋಗ್ಯ ಇಲಾಖೆಯ ಮುಖ್ಯ ಉದ್ದೇಶವಾಗಿದೆ ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ್‌ ಹೇಳಿದರು.
ಆಯುರ್ವೇದ ಮತ್ತು ಆಧುನಿಕ ವೈದ್ಯಕೀಯ ಪದ್ಧತಿಗಳ ಸೇವೆಗಳು ಸಾರ್ವಜನಿಕರಿಗೆ ಅಗತ್ಯವಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಎರಡೂ ವೈದ್ಯಕೀಯ ವ್ಯವಸ್ಥೆಗಳ ಸೇವೆಗಳನ್ನು ಬಲಪಡಿಸುವ ಕುರಿತು ಚಿಂತನೆ ನಡೆಯುತ್ತಿದೆ ಎಂದರು.
ಅಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಜಾಗೃತಿ ಅಗತ್ಯ
ಪ್ರಭಾರ ಜಿಲ್ಲಾ ಆಯುಷ್‌ ಅಧಿಕಾರಿ ಹಾಗೂ ಸರ್ಕಾರಿ ಆಯುರ್ವೇದ ಆಸ್ಪತ್ರೆ ಶಿರಸಿಯ ವೈದ್ಯಾಧಿಕಾರಿ ಡಾ. ಜಗದೀಶ ಯಾಜಿ ವಿ. ಮಾತನಾಡಿ, ಅಸಾಂಕ್ರಾಮಿಕ ಕಾಯಿಲೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್‌, ಮೂತ್ರಪಿಂಡದ ಕಾಯಿಲೆಗಳು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದರು.
ಆರೋಗ್ಯಕರ ಜೀವನಶೈಲಿ, ಪಥ್ಯಾಹಾರ, ಯೋಗ ಮತ್ತು ನಿಯಮಿತ ಆರೋಗ್ಯ ತಪಾಸಣೆಗಳಿಗೆ ಆದ್ಯತೆ ನೀಡಬೇಕು. ರುಚಿಗಾಗಿ ಎಲ್ಲೆಂದರಲ್ಲಿ ಆಹಾರ ಸೇವಿಸುವ ಬದಲು ದೇಹಕ್ಕೆ ಅಗತ್ಯವಾದ ಸಮತೋಲನ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಯುಷ್‌ ಇಲಾಖೆಯ ವತಿಯಿಂದ ಔಟ್‌ರೀಚ್‌ ಕಾರ್ಯಕ್ರಮಗಳ ಮೂಲಕ ಜಿಲ್ಲೆಯ ಕಾರವಾರ, ಶಿರಸಿ, ಮುಂಡಗೋಡ, ಕುಮಟಾ ಹಾಗೂ ದಾಂಡೇಲಿ ತಾಲೂಕುಗಳಲ್ಲಿ ಆಯುಷ್‌ ಸೇವೆಗಳನ್ನು ವಿಸ್ತರಿಸುವ ಉದ್ದೇಶವಿದ್ದು, ಅದರ ಭಾಗವಾಗಿ ಮುಂಡಗೋಡದಲ್ಲಿ ಮೊದಲ ವಿಶೇಷ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮಕ್ಕಳ ಆರೋಗ್ಯದ ದೃಷ್ಟಿಯಿಂದ ಊಟ, ಆಟ ಮತ್ತು ಪಾಠಕ್ಕೆ ಸಮಾನ ಆದ್ಯತೆ ನೀಡಬೇಕು. ಆಯುಷ್‌ ಇಲಾಖೆಯ ‘ಯೋಗ ಫಾರ್ ಆಲ್‌’ ಆ್ಯಪ್‌ ಮೂಲಕ ಕುರ್ಚಿಯಲ್ಲಿಯೇ ಕುಳಿತು ಸುಲಭವಾಗಿ ಮಾಡಬಹುದಾದ ಯೋಗಾಭ್ಯಾಸಗಳ ಮಾಹಿತಿಯನ್ನು ಪಡೆಯಬಹುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಮುದಾಯದ ಆರೋಗ್ಯಕ್ಕಾಗಿ ಸಹಕಾರ
ಲೊಯೋಲ ವಿಕಾಸ ಕೇಂದ್ರವು ಆರೋಗ್ಯ ಇಲಾಖೆಯೊಂದಿಗೆ ಸಮುದಾಯದಲ್ಲಿ ಪ್ರತಿವರ್ಷ ವಿವಿಧ ಆರೋಗ್ಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸುವ ಕಾರ್ಯದಲ್ಲಿಯೂ ಸಮುದಾಯ ಮತ್ತು ಇಲಾಖೆಯೊಂದಿಗೆ ಕೈಜೋಡಿಸುತ್ತಿದೆ. ಸಾರ್ವಜನಿಕರ ಆರೋಗ್ಯಕ್ಕಾಗಿ ಅಗತ್ಯವಿರುವ ಸಹಕಾರವನ್ನು ಸಂಸ್ಥೆಯ ವತಿಯಿಂದ ಮುಂದೆಯೂ ನೀಡಲು ಸಿದ್ಧವಿರುವುದಾಗಿ ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕ ಫಾದರ್‌ ಅನಿಲ್‌ ಡಿಸೋಜಾ ಹೇಳಿದರು.
ಶಿಬಿರದಲ್ಲಿ ಡಾ. ಸ್ವರೂಪ ರಾಣಿ, ಡಾ. ಭಾಗ್ಯಲಕ್ಷ್ಮಿ ಕೆ., ಡಾ. ಭಾಗ್ಯಶ್ರೀ, ಡಾ. ಮಲ್ಲಿಕಾರ್ಜುನ ಕಮತರ್‌, ಡಾ. ವಿಕ್ರಮ ದೇಶಭಂಡಾರಿ ಸೇರಿದಂತೆ ಆಯುರ್ವೇದ ತಜ್ಞ ವೈದ್ಯರು ಹಾಗೂ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಕೆ. ಬೋರ್ಕರ್‌ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ಮಂಗಳಾ ಮೋರೆ ನಿರೂಪಿಸಿದರು. ಶ್ರೀ ಪ್ರವೀಣ ಶೆದಿಯಣ್ಣನವರ ಸ್ವಾಗತಿಸಿದರು. ಶ್ರೀಮತಿ ನಕುಲಾಬಾಯಿ ಕೊಕರೆ ಸಂವಿಧಾನದ ಪೀಠಿಕೆ ವಾಚಿಸಿದರು. ಶ್ರೀ ನಾಗರಾಜ ಕಟ್ಟಿಮನಿ ವಂದನಾರ್ಪಣೆ ಸಲ್ಲಿಸಿದರು. ತೇಜಸ್ವಿನಿ ಬೇಗೂರ ಕಾರ್ಯಕ್ರಮ ಸಂಯೋಜಿಸಿದರು.

ಹೆಚ್ಚಿನ ಸುದ್ದಿ