Saturday, August 29, 2026
Homeಜಿಲ್ಲಾ ಸುದ್ದಿಗಳುಎಳೆನೀರು ಒಡೆಯುವ ಯಂತ್ರ ಆವಿಷ್ಕಾರ: ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲೆಯ ಪ್ರತಿಭೆಗೆ ಮೆಚ್ಚುಗೆ....

ಎಳೆನೀರು ಒಡೆಯುವ ಯಂತ್ರ ಆವಿಷ್ಕಾರ: ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲೆಯ ಪ್ರತಿಭೆಗೆ ಮೆಚ್ಚುಗೆ….

ಸಮಸ್ಯೆಗಳನ್ನು ಕಂಡು ಸುಮ್ಮನಾಗುವವರ ನಡುವೆ, ಆ ಸಮಸ್ಯೆಗೆ ತನ್ನ ಪುಟ್ಟ ಮೆದುಳಿನಿಂದಲೇ ವಿನೂತನ ಪರಿಹಾರವೊಂದನ್ನು ಶೋಧಿಸಿದ ಗ್ರಾಮೀಣ ಭಾಗದ ಬಾಲಕನೊಬ್ಬ ಇದೀಗ ಇಡೀ ರಾಜ್ಯವೇ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾನೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಯೊಬ್ಬನ ಹೆಜ್ಜೆಗಳು ಇದೀಗ ದೇಶದ ರಾಜಧಾನಿ ನವದೆಹಲಿಯ ಬೃಹತ್ ವಿಜ್ಞಾನ ವೇದಿಕೆಯತ್ತ ಸಾಗುತ್ತಿರುವುದು ನಿಜಕ್ಕೂ ರೋಮಾಂಚಕ.

ಸರ್ಕಾರಿ ಶಾಲೆಯ ಮಕ್ಕಳಲ್ಲಿ ಅದ್ಭುತವಾದ ಪ್ರತಿಭೆ ಅಡಗಿರುತ್ತದೆ, ಅವರಿಗೆ ಕೇವಲ ಬೆಂಬಲ ಮತ್ತು ಮಾರ್ಗದರ್ಶನದ ಅಗತ್ಯವಿರುತ್ತದೆ ಎಂಬುದನ್ನು ಕುಮಟಾ ತಾಲೂಕಿನ ಹೆಗಡೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ (ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ) ಶಾಲೆಯ ವಿದ್ಯಾರ್ಥಿ ಯುವರಾಜ್ ಲಕ್ಷ್ಮಣ್ ಅಂಬಿಗ ಸಾಬೀತುಪಡಿಸಿದ್ದಾರೆ.

ತನ್ನ ಅದ್ಭುತ ವೈಜ್ಞಾನಿಕ ಚಿಂತನೆಯ ಮೂಲಕ 2023-24ನೇ ಸಾಲಿನ ಪ್ರತಿಷ್ಠಿತ ‘ಇನ್‌ಸ್ಪೈರ್ ಅವಾರ್ಡ್ ಮಾನಕ್’ (INSPIRE Award MANAK) ಸ್ಪರ್ಧೆಯಲ್ಲಿ ಯುವರಾಜ್ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ, ಇಡೀ ಕುಮಟಾ ತಾಲೂಕಿಗೆ ಹಾಗೂ ಕರಾವಳಿ ಜಿಲ್ಲೆಗೆ ಅಪಾರ ಕೀರ್ತಿ ತಂದಿದ್ದಾನೆ.

ಗಮನ ಸೆಳೆದ ‘ಎಳನೀರು ಒಡೆಯುವ ಯಂತ್ರ’ (Tender Coconut Opener and Cutter)
ಕರಾವಳಿ ಭಾಗದಲ್ಲಿ ಎಳನೀರು ಕತ್ತರಿಸುವುದು ದೈನಂದಿನ ಹಾಗೂ ಶ್ರಮದಾಯಕ ಕೆಲಸ. ಇದನ್ನು ಅತ್ಯಂತ ಸುಲಭವಾಗಿ ಮತ್ತು ಸುರಕ್ಷಿತವಾಗಿ ಮಾಡುವ ನಿಟ್ಟಿನಲ್ಲಿ ಯುವರಾಜ್ ಸಿದ್ಧಪಡಿಸಿದ “Tender Coconut Opener and Cutter” ಎಂಬ ಗೃಹಬಳಕೆಯ ಬಹುಪಯೋಗಿ ಸಾಧನವು ವಿಜ್ಞಾನಿಗಳ ಮತ್ತು ತೀರ್ಪುಗಾರರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬರೋಬ್ಬರಿ ೭೪೩ ವಿದ್ಯಾರ್ಥಿಗಳ ಪೈಕಿ, ಕೇವಲ ೬೩ ವಿದ್ಯಾರ್ಥಿಗಳು ಮಾತ್ರ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಆ ಟಾಪ್ ಪಟ್ಟಿಯಲ್ಲಿ ಕರುನಾಡಿನ ಈ ಕುವರನೂ ಒಬ್ಬನಾಗಿರುವುದು ಹೆಮ್ಮೆಯ ಸಂಗತಿ.

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಆಗಸ್ಟ್ 13 ಮತ್ತು 14ರಂದು ಸುರತ್ಕಲ್‌ನ ಎನ್‌ಐಟಿಕೆ (NITK) ಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಮೆಂಟರಿಂಗ್ ಕಾರ್ಯಾಗಾರದಲ್ಲಿ ಯುವರಾಜ್ ಪಾಲ್ಗೊಂಡು ತಜ್ಞರಿಂದ ಉನ್ನತ ಮಾರ್ಗದರ್ಶನ ಪಡೆದುಕೊಂಡಿದ್ದಾನೆ. ಇದೀಗ ಮುಂಬರುವ ಅಕ್ಟೋಬರ್ ತಿಂಗಳಲ್ಲಿ ನವದೆಹಲಿಯ ಪ್ರತಿಷ್ಠಿತ ‘ಭಾರತ್ ಮಂಟಪಂ’ನ ಪ್ರಗತಿ ಮೈದಾನದಲ್ಲಿ ನಡೆಯಲಿರುವ ಬೃಹತ್ ರಾಷ್ಟ್ರಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಯುವರಾಜ್ ತನ್ನ ಈ ವಿನೂತನ ಮಾದರಿಯನ್ನು ಪ್ರದರ್ಶಿಸಲಿದ್ದಾನೆ.

ವಿದ್ಯಾರ್ಥಿಯ ಈ ಬೆರಗುಗೊಳಿಸುವ ಸಾಧನೆಯ ಹಿಂದೆ ಮಾರ್ಗದರ್ಶಿ ಶಿಕ್ಷಕಿಯಾದ ಶ್ರೀಮತಿ ನಾಗರತ್ನಾ ಭಟ್ ಅವರ ಶ್ರಮ ಮತ್ತು ಪ್ರೋತ್ಸಾಹ ದೊಡ್ಡದಿದೆ. ಯುವರಾಜನ ಈ ಸಾಧನೆಗೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ಶಿಕ್ಷಕ ವೃಂದ, ಪಾಲಕ-ಪೋಷಕರು, ಸಹಪಾಠಿಗಳು ಮತ್ತು ಊರಿನ ಜನತೆ ಹರ್ಷ ವ್ಯಕ್ತಪಡಿಸಿದ್ದು, ದೆಹಲಿಯಲ್ಲೂ ವಿಜಯ ಪತಾಕೆ ಹಾರಿಸಿ ಬರಲಿ ಎಂದು ತುಂಬು ಹೃದಯದ ಶುಭ ಹಾರೈಸಿದ್ದಾರೆ…

ಹೆಚ್ಚಿನ ಸುದ್ದಿ