Monday, October 12, 2026
Homeರಾಜ್ಯ₹10ಕ್ಕೆ ಇ-ಪ್ರಮಾಣೀಕೃತ ಪ್ರತಿಗಳ ವಿತರಣೆ: ಇ-ಫೈಲಿಂಗ್ ಅಳವಡಿಸಿಕೊಳ್ಳಲು ನ್ಯಾ. ಸೂರಜ್ ಗೋವಿಂದರಾಜ್ ಕರೆ

₹10ಕ್ಕೆ ಇ-ಪ್ರಮಾಣೀಕೃತ ಪ್ರತಿಗಳ ವಿತರಣೆ: ಇ-ಫೈಲಿಂಗ್ ಅಳವಡಿಸಿಕೊಳ್ಳಲು ನ್ಯಾ. ಸೂರಜ್ ಗೋವಿಂದರಾಜ್ ಕರೆ

ಬೆಂಗಳೂರು, ಅಕ್ಟೋಬರ್ 10: ಕರ್ನಾಟಕ ಹೈಕೋರ್ಟ್‌ನಲ್ಲಿ ಕೇವಲ ₹10ಕ್ಕೆ ಇ-ಪ್ರಮಾಣೀಕೃತ (e-Certified) ಪ್ರತಿಗಳನ್ನು ಪಡೆಯುವ ವ್ಯವಸ್ಥೆ ಜಾರಿಯಲ್ಲಿದ್ದು, ಪುಟವಾರು ಶುಲ್ಕ ಪಾವತಿಸಿ ಪ್ರಮಾಣೀಕೃತ ಪ್ರತಿಗಳಿಗಾಗಿ ಅರ್ಜಿ ಸಲ್ಲಿಸುವ ಅಗತ್ಯವನ್ನು ಇದು ನಿವಾರಿಸಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ತಿಳಿಸಿದ್ದಾರೆ.

ಹೈಕೋರ್ಟ್ ಆವರಣದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕಚೇರಿ ವತಿಯಿಂದ ಆಯೋಜಿಸಿದ್ದ ‘ಸ್ವಚ್ಛತಾ ಹಿ ಸೇವಾ–2026’ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಪರ ವಕೀಲರು ಇ-ಫೈಲಿಂಗ್ ವ್ಯವಸ್ಥೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸಿಕೊಳ್ಳುವ ಮೂಲಕ ಕಾಗದದ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಕರೆ ನೀಡಿದರು.

ಹೆಚ್ಚುವರಿ ಸಾಲಿಸಿಟರ್ ಜನರಲ್ ಕಚೇರಿ ಸರ್ಕಾರದ ಹಿತಾಸಕ್ತಿಗಳನ್ನು ರಕ್ಷಿಸುವ ಪ್ರಮುಖ ಸಂಸ್ಥೆಯಾಗಿದ್ದು, ಅಲ್ಲಿನ ವಕೀಲರು ಪರಸ್ಪರ ಅಸೂಯೆ ಹಾಗೂ ಅನಾರೋಗ್ಯಕರ ಪೈಪೋಟಿಗೆ ಅವಕಾಶ ನೀಡದೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಅರವಿಂದ್ ಕಾಮತ್ ಮಾತನಾಡಿ, ಸ್ವಚ್ಛತೆ ಎಂದರೆ ಕೇವಲ ಪರಿಸರದ ಸ್ವಚ್ಛತೆ ಮಾತ್ರವಲ್ಲ, ಮನಸ್ಸು, ಆಲೋಚನೆ ಮತ್ತು ಅಭಿವ್ಯಕ್ತಿಯ ಸ್ವಚ್ಛತೆಯೂ ಅಷ್ಟೇ ಮುಖ್ಯ ಎಂದು ಹೇಳಿದರು.

“ಅಸ್ತವ್ಯಸ್ತವಾದ ಪರಿಸರವು ಆಲೋಚನೆಯ ಸ್ಪಷ್ಟತೆಯ ಮೇಲೆ ಪರಿಣಾಮ ಬೀರುತ್ತದೆ. ಆಲೋಚನೆಯಲ್ಲಿ ಸ್ಪಷ್ಟತೆ ಇಲ್ಲದಿದ್ದರೆ ಅಭಿವ್ಯಕ್ತಿಯಲ್ಲಿಯೂ ಸ್ಪಷ್ಟತೆ ಇರುವುದಿಲ್ಲ. ಅಭಿವ್ಯಕ್ತಿಯ ಸ್ಪಷ್ಟತೆಯೇ ವಕೀಲರ ಪ್ರಮುಖ ಸಾಧನವಾಗಿದೆ,” ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನ್ಯಾಯಮೂರ್ತಿ ಎಚ್. ಶಾಂತಿ ಭೂಷಣ್, ವಕೀಲರು ಪ್ರತಿದಿನ ಬಳಸುವ ಕಡತಗಳನ್ನು ಸ್ವಚ್ಛವಾಗಿ ಹಾಗೂ ವ್ಯವಸ್ಥಿತವಾಗಿ ಇಟ್ಟುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಕೇಂದ್ರ ಸರ್ಕಾರದ ವಕೀಲರನ್ನು ಅವರು ಅಭಿನಂದಿಸಿದರು.

ಬೆಳಿಗ್ಗೆ 7.30ಕ್ಕೆ ಹೈಕೋರ್ಟ್ ವಕೀಲರ ಸಂಘದ ಲಾಂಜ್‌ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸುಮಾರು 40 ಮಂದಿ ಕೇಂದ್ರ ಸರ್ಕಾರದ ವಕೀಲರು ಭಾಗವಹಿಸಿದ್ದರು. ಬಳಿಕ ನ್ಯಾಯಮೂರ್ತಿಗಳು ಮತ್ತು ಅಧಿಕಾರಿಗಳು ವಕೀಲರಿಗೆ ಸ್ವಚ್ಛತಾ ಸಾಮಗ್ರಿಗಳನ್ನು ವಿತರಿಸಿ, ಹೈಕೋರ್ಟ್‌ನ 4 ಮತ್ತು 5ನೇ ಗೇಟ್ ಸಮೀಪದ ವಾಹನ ನಿಲುಗಡೆ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.

ಅಭಿಯಾನದ ವೇಳೆ ಪ್ಲಾಸ್ಟಿಕ್ ಬಾಟಲಿಗಳು, ಪಾನ್ ಮಸಾಲಾ ಪೊಟ್ಟಣಗಳು, ಬಾಟಲಿ ಮುಚ್ಚಳಗಳು, ಬಳಸಿದ ತಟ್ಟೆಗಳು, ಪಾದರಕ್ಷೆಗಳು ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಸಂಗ್ರಹಿಸಿ ವಾಹನ ನಿಲುಗಡೆ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು.

‘ಸ್ವಚ್ಛತಾ ಮೇಂ ಸಹಭಾಗ್ – ಸ್ವಚ್ಛ ಭಾರತ್, ವಿಕಸಿತ ಭಾರತ್’ ಎಂಬ ರಾಷ್ಟ್ರೀಯ ಆಶಯದಡಿ ಈ ಅಭಿಯಾನ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಸಂಚಾಲಕರಾಗಿ ವಕೀಲ ಜಗದೀಶ್ ಕುಂಬಾರ್ ಹಾಗೂ ಸಹ-ಸಂಚಾಲಕರಾಗಿ ಆತ್ಮ ಹಿರೇಮಠ ಕಾರ್ಯನಿರ್ವಹಿಸಿದರು.

ಹೆಚ್ಚಿನ ಸುದ್ದಿ