Monday, October 12, 2026
Homeಬೆಂಗಳೂರುಬೆಂಗಳೂರು ಜಾತ್ರೆಗೆ ದೊರೆತಿರುವ ಉತ್ಸಾಹದ ಪ್ರತಿಕ್ರಿಯೆ ಕೇವಲ ಆರಂಭವಷ್ಟೇ: ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು ಜಾತ್ರೆಗೆ ದೊರೆತಿರುವ ಉತ್ಸಾಹದ ಪ್ರತಿಕ್ರಿಯೆ ಕೇವಲ ಆರಂಭವಷ್ಟೇ: ಸಚಿವ ಕೃಷ್ಣ ಬೈರೇಗೌಡ

*ಬೆಂಗಳೂರಿನಾದ್ಯಂತ ಸಂಸ್ಥೆಗಳು, ಸಂಘಟನೆಗಳು ಮತ್ತು ಕಲಾವಿದರು ಮುಂದೆ ಬರುತ್ತಿದ್ದಂತೆ ಬಿರುಸುಗೊಳ್ಳುತ್ತಿರುವ ಬೆಂಗಳೂರು ಜಾತ್ರೆ

*ಸಿಐಐ (CII), ಬಿಸಿಐಸಿ (BCIC), ಐಐಎಂ-ಬಿ (IIM-B), ಆರ್.ವಿ ಟ್ರಸ್ಟ್, ಬಿಐಸಿ (BIC), ಎನ್.ಜಿ.ಎಂ.ಎ (NGMA), ಮಾನ್ಯತಾ ಟೆಕ್ ಪಾರ್ಕ್ ಮತ್ತು ಸಭಾ ಸೇರಿದಂತೆ ಬೆಂಗಳೂರು ಜಾತ್ರೆಯಲ್ಲಿ ಪಾಲ್ಗೊಳ್ಳಲು 300 ಸಂಘಟಕರು, 20 ಸಂಸ್ಥೆಗಳು ಮತ್ತು 80ಕ್ಕೂ ಹೆಚ್ಚು ಕಲಾವಿದರಿಂದ ಆಸಕ್ತಿ ವ್ಯಕ್ತ

*ಬೆಂಗಳೂರಿನ ವಿವಿಧಡೆಯಿಂದ ಹಲವಾರು ಆರ್‌ಡಬ್ಲ್ಯೂಎ (RWA) ಗಳು ಮತ್ತು ಸಂಘಟನೆಗಳಿಂದ ಆಸಕ್ತಿ; ಶೀಘ್ರದಲ್ಲೇ ಅಧಿಕೃತ ಖಚಿತತೆ ನಿರೀಕ್ಷೆ

ಬೆಂಗಳೂರು, ಅಕ್ಟೋಬರ್ 11, 2026:

ಬೆಂಗಳೂರನ್ನೇ ಹತ್ತು ದಿನಗಳ ಸಂಭ್ರಮದ ವೇದಿಕೆಯನ್ನಾಗಿ ಪರಿವರ್ತಿಸುವ ಕಲ್ಪನೆಗೆ ಆರಂಭಿಕ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ನಗರದಾದ್ಯಂತ ಇರುವ ಸಂಸ್ಥೆಗಳು, ಸಾಂಸ್ಕೃತಿಕ ಸಂಘಟನೆಗಳು, ನಾಗರಿಕ ಸಮಾಜದ ಗುಂಪುಗಳು ಮತ್ತು ಕಲಾವಿದರು ಬೆಂಗಳೂರು ಜಾತ್ರೆಯ ಭಾಗವಾಗಲು ಉತ್ಸಾಹ ತೋರುತ್ತಿದ್ದಾರೆ.

ಇಲ್ಲಿಯವರೆಗೆ 300 ಸಂಘಟಕರು ಮತ್ತು ಸಂಘಟನೆಗಳು, 80 ಕಲಾವಿದರು ಹಾಗೂ 20 ಸಂಸ್ಥೆಗಳು ಜಾತ್ರೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಿವೆ. ಇಂಡಿಯನ್ ಇಂಡಸ್ಟ್ರಿ ಕಾನ್ಫೆಡರೇಷನ್ (CII), ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ (BCIC), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM ಬೆಂಗಳೂರು), ರಾಷ್ಟ್ರೀಯ ವಿದ್ಯಾಲಯ ಟ್ರಸ್ಟ್, ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್ (BIC), ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (NGMA), ಸಭಾ, ಮಾನ್ಯತಾ ಟೆಕ್ ಪಾರ್ಕ್ ಮತ್ತು ಬೆಂಗಳೂರು ಕ್ರಿಯೇಟಿವ್ ಸರ್ಕಸ್ ಸೇರಿದಂತೆ ಅನೇಕರು ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ.

ಬೆಂಗಳೂರು ಜಾತ್ರೆಯು ವಿವಿಧ ಸಂಗೀತ ಪ್ರಕಾರಗಳ ಕಲಾವಿದರು ಮತ್ತು ಪ್ರದರ್ಶಕರ ಗಮನವನ್ನೂ ಸೆಳೆಯುತ್ತಿದ್ದು, ಹಲವರು ಪಾಲ್ಗೊಳ್ಳುವ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇವರಲ್ಲಿ ಆದಿತ್ಯ ಪ್ರಕಾಶ್ ಎನ್‌ಸೆಂಬಲ್, ಸ್ವರಾತ್ಮ, ಸುಮ ಸುಧೀಂದ್ರ, ಮಾನಸಿ ಪ್ರಸಾದ್, ಕಾರ್ತಿಕ್ ಮಣಿ, ಮಿಸ್ಟಿಕ್ ವೈಬ್ಸ್, ಸ್ಪೂರ್ತಿ ಮತ್ತು ಚಿತ್ರಾ ಶ್ರೀಕೃಷ್ಣ ಮುಂತಾದ ಪ್ರಮುಖರು ಸೇರಿದ್ದಾರೆ.

ಈ ಸಂಸ್ಥೆಗಳು ಮತ್ತು ಕಲಾವಿದರು ಯಾವ ರೀತಿಯಲ್ಲಿ ಭಾಗವಹಿಸಲಿದ್ದಾರೆ—ಅವರು ಆಯೋಜಿಸಬಹುದಾದ, ಸಂಯೋಜಿಸಬಹುದಾದ, ಬೆಂಬಲಿಸಬಹುದಾದ ಅಥವಾ ಪಾಲ್ಗೊಳ್ಳಬಹುದಾದ ಕಾರ್ಯಕ್ರಮಗಳು ಯಾವುವು ಎಂಬ‒ವಿವರಗಳು ಪ್ರಸ್ತುತ ರೂಪುಗೊಳ್ಳುತ್ತಿದ್ದು, ಶೀಘ್ರದಲ್ಲೇ ಅಂತಿಮಗೊಳ್ಳಲಿವೆ. ಆದರೆ, ನಗರವೇ ಒಂದು ಏಕೈಕ ವೇದಿಕೆಯಾಗಬೇಕೆಂಬ ಈ ಉತ್ಸವದ ಮೂಲ ಕಲ್ಪನೆಗೆ ಸಿಕ್ಕಿರುವ ಈ ಆರಂಭಿಕ ಸ್ಪಂದನೆ ಅತ್ಯಂತ ಮಹತ್ವದ್ದಾಗಿದೆ.

ಕರ್ನಾಟಕ ಸರ್ಕಾರದ ವತಿಯಿಂದ 2026ರ ಡಿಸೆಂಬರ್ 4 ರಿಂದ 13ರವರೆಗೆ ಘೋಷಿಸಲಾಗಿರುವ ‘ಬೆಂಗಳೂರು ಜಾತ್ರೆ’ಯು, ಕರ್ನಾಟಕದ ಪರಂಪರೆಯ ಊರ ಹಬ್ಬ/ಜಾತ್ರೆಯಿಂದ ಸ್ಫೂರ್ತಿ ಪಡೆದ ನಗರ ಮಟ್ಟದ ಸಂಭ್ರಮವಾಗಿದೆ. ಒಂದೇ ಒಂದು ಹಬ್ಬದ ಮೈದಾನ ಅಥವಾ ಪ್ರಮುಖ ಕೇಂದ್ರ ವೇದಿಕೆಯ ಬದಲಿಗೆ, ವಿವಿಧ ನೆರೆಹೊರೆಗಳು, ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳು, ಸಾಂಸ್ಕೃತಿಕ ವೇದಿಕೆಗಳು, ಕ್ಯಾಂಪಸ್‌ಗಳು ಮತ್ತು ಸಮುದಾಯಗಳು ಒಂದೇ ಸಾಮಾನ್ಯ ಜಾತ್ರೆಯ ಹೆಸರಿನಲ್ಲಿ ತಮ್ಮದೇ ಆದ ಸಂಭ್ರಮಾಚರಣೆಗಳನ್ನು ಸೃಷ್ಟಿಸಲು ಆಹ್ವಾನಿಸಲಾಗಿದೆ.

“ಇದು ಕೇವಲ ಆರಂಭವಷ್ಟೇ: ಕೃಷ್ಣ ಬೈರೇಗೌಡ”

ಈ ಉತ್ಸಾಹದ ಪ್ರತಿಕ್ರಿಯೆಯನ್ನು ಸ್ವಾಗತಿಸಿರುವ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ಸಂಘಟಕರು, ಸಂಸ್ಥೆಗಳು ಮತ್ತು ಕಲಾವಿದರು ತೋರಿರುವ ಆಸಕ್ತಿಯು ಬೆಂಗಳೂರು ಜಾತ್ರೆಯು ನಿಜವಾದ ಅರ್ಥದಲ್ಲಿ ನಗರ ಮಟ್ಟದ ಸಂಭ್ರಮವಾಗಿ ಬೆಳೆಯುವ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ ಎಂದರು.

ಇಲ್ಲಿಯವರೆಗೆ ಬಂದಿರುವ ಆಸಕ್ತಿಯ ಅಭಿವ್ಯಕ್ತಿಗಳು ಕೇವಲ ವಿಶಾಲವಾದ ಸಾರ್ವಜನಿಕ ಸಹಭಾಗಿತ್ವದ ಆರಂಭವಷ್ಟೇ ಆಗಿದ್ದು, ಬೆಂಗಳೂರಿನೊಳಗಿನಿಂದ ಹಾಗೂ ಹೊರಗಿನಿಂದಲೂ ವಿಚಾರಣೆಗಳು ಮುಂದುವರಿದಿವೆ ಎಂದು ಅವರು ತಿಳಿಸಿದರು.

“ಜಾತ್ರೆಯು ಬೆಂಗಳೂರಿನ ಅಸಾಧಾರಣ ವೈವಿಧ್ಯತೆಯನ್ನು ಪ್ರತಿಬಿಂಬಿಸಬೇಕೆಂದು ನಾವು ಬಯಸುತ್ತೇವೆ. ಆರ್‌ಡಬ್ಲ್ಯೂಎ (RWA) ತನ್ನ ನೆರೆಹೊರೆಯಲ್ಲಿ ಏನನ್ನಾದರೂ ಆಯೋಜಿಸಬಹುದು, ಸಾಂಸ್ಕೃತಿಕ ಸಂಸ್ಥೆಯೊಂದು ಕಾರ್ಯಕ್ರಮವನ್ನು ರೂಪಿಸಬಹುದು, ಐಟಿ ಕಂಪನಿಯು ತನ್ನ ಕ್ಯಾಂಪಸ್ ಅನ್ನು ಸಾಂಸ್ಕೃತಿಕ ಅಥವಾ ಸಮುದಾಯ ಕಾರ್ಯಕ್ರಮಕ್ಕಾಗಿ ಮುಕ್ತಗೊಳಿಸಬಹುದು, ಕಾಲೇಜೊಂದು ಪ್ರದರ್ಶನ ಅಥವಾ ಕಲಾ ಪ್ರದರ್ಶನವನ್ನು ಹಮ್ಮಿಕೊಳ್ಳಬಹುದು, ಹಾಗೂ ಎನ್‌ಜಿಒ (NGO) ಅಥವಾ ಸಮುದಾಯ ಗುಂಪು ತನ್ನದೇ ಆದ ಕಲ್ಪನೆಯೊಂದಿಗೆ ಜಾತ್ರೆಗೆ ಕೈಜೋಡಿಸಬಹುದು. ಇಲ್ಲಿ ಯಾವುದೇ ನಿರ್ದಿಷ್ಟ ಒಂದೇ ಮಾದರಿ ಇಲ್ಲ. ಆಹ್ವಾನವು ಮುಕ್ತವಾಗಿದೆ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುಂದೆ ಬರುತ್ತಾರೆ ಎಂದು ನಾವು ಆಶಿಸುತ್ತೇವೆ” ಎಂದು ಸಚಿವರಾದ ಕೃಷ್ಣಬೈರೇಗೌಡರು ಹೇಳಿದರು.

ಬೆಂಗಳೂರು ಜಾತ್ರೆಯಲ್ಲಿ ಭಾಗವಹಿಸುವುದು ಹೇಗೆ?

ಹತ್ತು ದಿನಗಳ ಈ ಸಂಭ್ರಮದ ಅವಧಿಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲು, ಸಂಯೋಜಿಸಲು, ನಿರ್ವಹಿಸಲು, ಬೆಂಬಲಿಸಲು ಅಥವಾ ಪಾಲುದಾರರಾಗಲು ಬಯಸುವ ಸಂಸ್ಥೆಗಳನ್ನು ಬೆಂಗಳೂರು ಜಾತ್ರೆ ಆಹ್ವಾನಿಸುತ್ತಿದೆ. ಭಾಗವಹಿಸಲು ಆಸಕ್ತಿ ಇರುವವರು www.bengalurujatre.in ಜಾಲತಾಣಕ್ಕೆ ಭೇಟಿ ನೀಡಬಹುದು ಅಥವಾ support@bengalurujatre.in ವಿಳಾಸಕ್ಕೆ ಇಮೇಲ್ ಕಳುಹಿಸಬಹುದು.

ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಾಂಪ್ರದಾಯಿಕವಾಗಿ ಗುರುತಿಸಿಕೊಂಡಿರುವ ಸಂಸ್ಥೆಗಳು ಮಾತ್ರವಲ್ಲದೆ, ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್‌ಗಳು, ಐಟಿ ಮತ್ತು ಇತರೆ ಕಂಪನಿಗಳು, ಶೈಕ್ಷಣಿಕ ಸಂಸ್ಥೆಗಳು, ಎನ್‌ಜಿಒಗಳು, ಸಮುದಾಯ ಗುಂಪುಗಳು, ವೃತ್ತಿಪರ ಸಂಘಗಳು ಮತ್ತು ಜಾತ್ರೆಗೆ ಹೊಸ ಕಲ್ಪನೆಗಳನ್ನು ತರಲು ಬಯಸುವ ಇತರೆ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುವಂತೆ ಸಂಘಟಕರು ಆಹ್ವಾನಿಸುತ್ತಿದ್ದಾರೆ.

ಆರ್‌ಡಬ್ಲ್ಯೂಎಗಳು, ಐಟಿ ಮತ್ತು ಇತರೆ ಕಂಪನಿಗಳು, ಎನ್‌ಜಿಒಗಳಿಗೆ ನಗರ ಮಟ್ಟದ ಆಹ್ವಾನ
ಈ ಹೊರಹೊಮ್ಮುತ್ತಿರುವ ಪ್ರತಿಕ್ರಿಯೆಯು ಬೆಂಗಳೂರು ಜಾತ್ರೆಯ ಮೂಲ ದೃಷ್ಟಿಕೋನಕ್ಕೂ ಅನುಗುಣವಾಗಿದೆ: ಇದು ಯಾವುದೇ ಒಂದು ಸಂಸ್ಥೆಗೆ ಮಾತ್ರ ಸೇರಿದ್ದಲ್ಲ, ಬದಲಿಗೆ ನಗರವನ್ನು ರೂಪಿಸುವ ಜನತೆ ಮತ್ತು ಸಂಘಟನೆಗಳಿಂದ ಒಟ್ಟಾಗಿ ಸೃಷ್ಟಿಸಲ್ಪಡುವ ಹಬ್ಬವಾಗಿದೆ.

ಜಾತ್ರೆಯನ್ನು ಘೋಷಿಸಿದಾಗ, ನೆರೆಹೊರೆಗಳು, ಶಾಲೆಗಳು ಮತ್ತು ಕಾಲೇಜುಗಳು, ವಸ್ತುಸಂಗ್ರಹಾಲಯಗಳು, ಗ್ಯಾಲರಿಗಳು, ವಿಜ್ಞಾನ ಕೇಂದ್ರಗಳು, ಸಾಂಸ್ಕೃತಿಕ ಸಂಸ್ಥೆಗಳು, ಉದ್ಯಮಗಳು, ಕಲಾವಿದರು, ಸಮುದಾಯಗಳು ಮತ್ತು ನಾಗರಿಕರೆಲ್ಲರೂ ಈ ಸಂಭ್ರಮದ ಭಾಗವಾಗಬಹುದು ಎಂದು ಸರ್ಕಾರ ತಿಳಿಸಿತ್ತು. ಸಾವಿರಾರು ಪ್ರತ್ಯೇಕ ಕಾರ್ಯಕ್ರಮಗಳನ್ನು ಒಂದು ದೊಡ್ಡ ಬೆಂಗಳೂರು ಜಾತ್ರೆಯ ಅಡಿಯಲ್ಲಿ ತರುವುದು ಇದರ ಮಹತ್ವಾಕಾಂಕ್ಷೆಯಾಗಿದೆ.

ಈ ಮೊದಲ ಹಂತದ ನೋಂದಣಿಗಳು ಆ ಕಲ್ಪನೆಯು ಹೇಗೆ ರೂಪುಗೊಳ್ಳಬಹುದು ಎಂಬುದರ ಆರಂಭಿಕ ಸೂಚನೆಯನ್ನು ನೀಡುತ್ತಿವೆ. ಈ ಪಟ್ಟಿಯು ಅಂತಿಮವಲ್ಲ. ಬೆಂಗಳೂರಿನ ವಿವಿಧ ಭಾಗಗಳಿಂದ ಹಾಗೂ ದೇಶದ ಇತರ ಭಾಗಗಳಿಂದಲೂ ಹಲವಾರು ವಿಚಾರಣೆಗಳು ಈಗಾಗಲೇ ಬಂದಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಖಚಿತತೆಗಳು ನಿರೀಕ್ಷಿತವಾಗಿವೆ.

ಹೆಚ್ಚಿನ ಸುದ್ದಿ