ಅಂಕಣಕಾರರು:ಭಾಸ್ಕರ ಮುದೇನೂರು
ನ್ಯಾಯವಾದಿಗಳು
ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಭಾರತೀಯರೆಲ್ಲರೂ ಸಂಕಲ್ಪ ಮಾಡಲೇಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವಿದ್ದೇವೆ!
ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂದು, ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ ನಮಗೆ ಸ್ವಾತಂತ್ರ್ಯ ಲಭಿಸಿದೆ!
ಆದರೆ ಸ್ವಾತಂತ್ರ್ಯ ಸ್ವೇಚ್ಛಾಚಾರವಾಯಿತೇ?
ಭಾರತ ಬ್ರಿಟೀಷರಿಂದ ಮುಕ್ತವಾಗಿ ಸ್ವಾತಂತ್ರ್ಯವಾಯಿತೇನೋ ಸತ್ಯ!
ಆದರೆ ಅಂದು ದೇಶ ಬಿಟ್ಟು ತೊಲಗಿದ್ದ ಬ್ರಿಟೀಷರು ಮತ್ತೆ ದೇಶದಲ್ಲಿ ಭ್ರಷ್ಟ ರಾಜಕಾರಣಿಗಳಾಗಿ ಒಕ್ಕರಿಸಿದರಾ?
ನಮ್ಮ ಕಾಲಘಟ್ಟದ ದೌರ್ಭಾಗ್ಯವೇ ಇದು!
ಯಾವೊಬ್ಬ ರಾಜಕಾರಣಿ ಮಾದರಿಯಾಗಿದ್ದಾನೆ ಹೇಳಿ? ಹೆಸರಿಸಲು ಹೊರಟರೆ ಕೈ ಬೆರಳೆಣಿಕೆಯಷ್ಟು ಹೆಸರುಗಳು ದೊರೆಯುವುದು ಕಷ್ಟ!
ಈ ಶಾಸಕಾಂಗದ ಅರ್ಥವನ್ನು ನಾವು ತಿಳಿಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದೇವೆ! ಈ ಕಾರಣಕ್ಕಾಗಿಯೇ ಮೌಲ್ಯಯುತ ರಾಜಕಾರಣಿಗಳನ್ನು ಆಯ್ಕೆ ಮಾಡುವಲ್ಲಿ ಎಡವುತ್ತಿದ್ದೇವೆ!
ನಾವು ಯಾವುದನ್ನು ಬಿತ್ತಿದ್ದೇವೆಯೋ ಅಂತಹದ್ದೇ ಬೆಳೆಯನ್ನು ಬೆಳೆದಿದ್ದೇವೆ! ಅಂತೆಯೇ ಎಂತಹ ಶಾಸಕರನ್ನು ಸಂಸದರನ್ನು ಆಯ್ಕೆ ಮಾಡಿದ್ದೇವೆಯೋ ಅಂತಹದ್ದೇ ಆಡಳಿತವನ್ನು ಪಡೆದಿದ್ದೇವೆ!
ಹಾಗೆಯೇ ಒಂದು ಉದಾಹರಣೆ ಗಮನಿಸಿ!
ನದಿಗಳಿಂದ ನೀರು ಆವಿಯಾಗುತ್ತದೆ! ಆವಿ ಮೋಡವಾಗುತ್ತದೆ! ಮೋಡಗಳು ಮಳೆ ಸುರಿಸುತ್ತವೆ!
ಮರಗಳು, ಬೆಟ್ಟ ಗುಡ್ಡಗಳು, ಕಾಡು ಈ ಪರಿಸರವೇ ಇಲ್ಲದಿದ್ದರೆ? ಸಮತೋಲನವೇ ತಪ್ಪಿ ಬಿಡುವಂತೆ, ನಮ್ಮ ವ್ಯವಸ್ಥೆಯೂ ಹಾಗೆಯೇ ಆಗಿದೆ!
ಭ್ರಷ್ಟರನ್ನು ಆಯ್ಕೆ ಮಾಡಿದರೆ ಭ್ರಷ್ಟರು, ಭ್ರಷ್ಟಾಚಾರವನ್ನೇ ಮಾಡುತ್ತಾರೆ!
ಭ್ರಷ್ಟ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳನ್ನೇ (ಕಾರ್ಯಾಂಗ & ನ್ಯಾಯಾಂಗ) ನೇಮಕ ಆಗುವಂತೆ ನೋಡಿಕೊಳ್ಳುತ್ತಾರೆ!
ಹೀಗಿರುವಾಗ ವ್ಯವಸ್ಥೆ ಪಾರದರ್ಶಕವಾಗಿರಲು ಹೇಗೆ ತಾನೇ ಸಾಧ್ಯ?
ಯಾವುದು ಮಾದರಿ ವ್ಯವಸ್ಥೆ ಇದೆ ಹೇಳಿ?
ನಮ್ಮದೇ ದೇಶ, ನಮ್ಮವರೇ ಆಳಬೇಕು ಎಂದು, ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡು ಸರಕಾರವನ್ನು ರಚಿಸಿಕೊಂಡಿದ್ದೇವೆ!
ಆದರೂ ಸಹ ಚುನಾವಣೆಗಳು, ರಾಜಕಾರಣಿಗಳು ಎಲ್ಲರೂ ಭ್ರಷ್ಟರಾಗಿ ಹೋಗಿದ್ದಾರೆ!
ಯಾವುದು ಮಾದರಿಯಾಗಿದೆ ಹೇಳಿ?
ಸಂವಿಧಾನ ರಚನೆಯಾಗಿ ಏಳು ದಶಕಗಳೇ ಕಳೆದಿವೆ, ಆದರೂ ಸಹ ಸಂವಿಧಾನವನ್ನು ಸರ್ವಸಮ್ಮತವಾಗಿ ಒಪ್ಪಲು ನಮ್ಮಿಂದ ಸಾಧ್ಯವಾಗಿಲ್ಲ!
ಒಂದು ಕಡೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಂಡರೆ, ಮತ್ತೊಂದು ಕಡೆ ಸ್ವಾತಂತ್ರ್ಯ ಸ್ವೇಚ್ಛೆಯಾಗಿ ಬಳಕೆಯಾಗುತ್ತಿದೆ!
ಯಾವುದೇ ರಾಜಕೀಯ ಪಕ್ಷಗಳು, ಯಾವುದೇ ರಾಜಕಾರಣಿಗಳು ಇಂದು ಜನಪರವಾಗಿಲ್ಲ!
ಸ್ವಾತಂತ್ರ್ಯ ಪೂರ್ವದಲ್ಲಿ ಅರಸರ ಆಳ್ವಿಕೆ ಇತ್ತು, ನಂತರ ಬ್ರಿಟೀಷರು ಆಳಿದರು, ನಂತರ ದೇಶ ಪ್ರಜಾಪ್ರಭುತ್ವ ದ ಅಡಿಯಲ್ಲಿ ಸರಕಾರವನ್ನು ರಚಿಸಿಕೊಳ್ಳುವ ಅವಕಾಶವನ್ನು ನೀಡಿದರೂ ಸಹ, ಅದಕ್ಕೆ ಅಪವಾದವೆಂಬಂತೆ ಪ್ರಜಾಪ್ರಭುತ್ವ ದ ಅಡಿಯಲ್ಲೇ ರಾಜಕಾರಣಿಗಳ ಮಕ್ಕಳೇ ಆಯ್ಕೆಯಾಗುತ್ತಿದ್ದಾರೆ!
ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳೇ ಆಗುತ್ತಿದ್ದಾರೆ! ಜೀ ಹುಜೂರ್ ಎನ್ನುವವರು ಮಾತ್ರ ಕಾರ್ಯಕರ್ತರ ಹೆಸರಲ್ಲಿ ಅಧಿಕಾರ ಹಿಡಿದಿದ್ದಾರೆ ( ಅಪವಾದಗಳು ಕೆಲವು ಇರಬಹುದು)
ಹೀಗೆಯೇ ಮುಂದುವರೆದೆ ಜನರ ಪರವಾಗಿ ಜನಮಿಡಿತವನ್ನು ಬಲ್ಲ ಅದ್ಯಾವ ನಾಯಕರು ಆಯ್ಕೆಯಾಗುತ್ತಾರೆ? ಅದ್ಯಾವಾಗ ಜನಪರ ಶಾಸನಗಳು ರಚನೆಯಾಗುತ್ತವೆ?
ನಮಗೆ ಚುನಾವಣಾ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ನೆನಪಿಗೆ ಬಾರದ ಆಯ್ಕೆಯ ಮಾನದಂಡಗಳು, ಸಾಮಾಜಿಕ ಅವ್ಯವಸ್ಥೆ,
ದಿನನಿತ್ಯದ ಜೀವನದಲ್ಲಿ ಅನುಭವಿಸುವಾಗ ವ್ಯವಸ್ಥೆ ನೆನಪಿಗೆ ಬರುತ್ತದೆ!
ಮತದಾರರಿಗೆ ಗೊತ್ತಿಲ್ಲ, ಆದರೆ ಶಾಸಕರಿಗೆ ಗೊತ್ತೂ ಇಲ್ಲ, ಬೇಕಾಗಿಯೂ ಇಲ್ಲ ಎಂಬಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ!
ದುಡಿದು ತಿನ್ನುವ ಚಾಲಕರಿಗೆ ಕನಿಷ್ಠ ವಿದ್ಯಾರ್ಹತೆ ಬೇಕು, ನಮ್ಮನ್ನಾಳುವ ಕೋಟಿ ಕೋಟಿ ರೂಪಾಯಿಗಳ ಯೋಜನೆಯನ್ನು ಜಾರಿಗೆ ತರಬೇಕಾದ ಶಾಸಕರಿಗೆ ವಿದ್ಯಾರ್ಹತೆಯೇ ಬೇಕಾಗಿಲ್ಲ!
ಸಮಾಜ ಸೇವೆಯಾಗಿದ್ದ ರಾಜಕಾರಣ ಇಂದು ಉದ್ಯಮವಾಗಿದೆ!
ಬಂಡವಾಳವನ್ನು ಹೂಡಿಕೆ ಮಾಡಿ ಲಾಭಗಳಿಸುವ ಬೃಹತ್ ಉದ್ಯಮವಾಗಿದೆ!
ಜನ ಸೇವೆಗಾಗಿ ತಿಂಗಳಿಗೆ ಲಕ್ಷ ಲಕ್ಷ ಸಂಬಳ ಪಡೆಯುವುದಾದರೆ ರಾಜಕಾರಣ ಸಮಾಜ ಸೇವೆಯೇ? ಯೋಚಿಸಿ!
ಇಂತಹ ರಾಜಕಾರಣಿಗಳು ಕಟ್ಟುನಿಟ್ಟಾದ ಶಾಸನಗಳನ್ನು, ಕಾನೂನುಗಳನ್ನು ಹೇಗೆ ಮಾಡುತ್ತಾರೆ?
ಅಷ್ಟಕ್ಕೂ ಅದೆಷ್ಟು ಜನಪ್ರತಿನಿಧಿಗಳಿಗೆ ಕನಿಷ್ಟ ಕಾನೂನಿನ ಪರಿಜ್ಞಾನ ಇದೆಯೇ?
ಎಷ್ಟೋ ಹಗರಣಗಳು ನೆಡೆದಿವೆ, ಎಷ್ಟೋ ಪ್ರಕರಣಗಳು ದಾಖಲಾಗಿವೆ, ಆದರೆ ಎಷ್ಟು ಹಗರಣಗಳಲ್ಲಿ ರಚನೆಯಾದ ಆಯೋಗಗಳು ಕಾಲಮಿತಿಯಲ್ಲಿ ವರದಿ ನೀಡಿವೆ?
ಎಷ್ಟು ಪ್ರಕರಣದಲ್ಲಿ ಶಿಕ್ಷೆಯಾಗಿವೆ?
ಆದರೆ ಈ ಮಾನದಂಡಗಳು ಜನಸಾಮಾನ್ಯರಿಗೇಕಿಲ್ಲ?
ಬಡವರು ಬಡವರಾಗಿಯೇ ಉಳಿದಿದ್ದಾರೆ, ಶ್ರೀಮಂತರು ಶ್ರೀಮಂತರಾಗುತ್ತಲೇ ಹೋಗುತ್ತಿದ್ದಾರೆ! ಆದರೆ ರಾಜಕಾರಣಿಗಳು, ರಾಜಕಾರಣಿಗಳ ಮಕ್ಕಳ ವ್ಯವಹಾರಗಳು, ಆಸ್ತಿಪಾಸ್ತಿಗಳು ಹೇಗೆ ಯಾವುದೇ ನಷ್ಟವಿಲ್ಲದೇ ಲಾಭದತ್ತ ಮುಖ ಮಾಡುತ್ತವೆ?
ಏನಿದರ ಮರ್ಮ?
ಯೋಚಿಸಿ! ದೇಶದ ಜನರ ಜೀವನ ಮಟ್ಟ ಸುಧಾರಣೆಯಾಗದೇ ದೇಶದ ಸಂಪತ್ತು ಕೆಲವೇ ವ್ಯಕ್ತಿಗಳು, ಹಾಗೂ ಬಹುತೇಕ ರಾಜಕಾರಣಿಗಳಲ್ಲಿ ಇರುವುದಾದರೂ ಹೇಗೆ?
ಭ್ರಷ್ಟ ರಾಜಕಾರಣಿಗಳು ಸುದಾರಿಸದ ಹೊರತು ವ್ಯವಸ್ಥೆ ಸುದಾರಿಸುವುದಿಲ್ಲ, ಜನಸಾಮಾನ್ಯರಿಗೆ ತಿಳಿದಿಲ್ಲ! ಆದರೆ ಜನಪ್ರತಿನಿಧಿಗಳಿಗೂ ತಿಳಿದಿಲ್ಲ, ತಿಳಿದ ಕೆಲವು ಜನಪ್ರತಿನಿಧಿಗಳಿಗೆ ಯಾವುದು ಬೇಕಾಗಿಲ್ಲ!
ಜನಸಾಮಾನ್ಯರಿಗೆ ತಿಳಿದಿಲ್ಲ ಎನ್ನುವುದೇ ರಾಜಕಾರಣಿಗಳ ಬಂಡವಾಳವಾಗಬಾರದು!
ಎಷ್ಟೋ ಲಕ್ಷ ಲಕ್ಷ ನೌಕರರು ಗುತ್ತಿಗೆಯ ಆಧಾರದಲ್ಲಿ ಹೊರಗುತ್ತಿಗೆ ನೌಕರರಾಗಿ, ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರಾಗಿ, ದುಡಿಯುತ್ತಿದ್ದಾರೆ! ಕಂದಾಯ, ಆರೋಗ್ಯ, ಶಿಕ್ಷಣ, ಹೀಗೆ ಎಲ್ಲಾ ಇಲಾಖೆಗಳಲ್ಲೂ ಗುತ್ತಿಗೆ ಆಧಾರದಲ್ಲಿ ಡಾಟಾ ಎಂಟ್ಎಇ ಆಪರೇಟರ್ ಗಳಾಗಿ, ಅತಿಥಿ ಶಿಕ್ಷಕರಾಗಿ, ಅಟೆಂಡರ್ ಗಳಾಗಿ ಹತ್ತು ಹದಿನೈದು ವರ್ಷಗಳಿಂದ ಸತತವಾಗಿ ದುಡಿಯುತ್ತಿದ್ದಾರೆ! ಆದರೆ ಐದು ವರ್ಷಗಳಿಗೆ ಆಯ್ಕೆಯಾದ ನೀವು, ನಿಮ್ಮ ಮಕ್ಕಳು ಮೊಮ್ಮಕ್ಕಳು ಕುಳಿತು ತಿನ್ನುವಷ್ಟು ಆಸ್ತಿ ಮಾಡಿದ್ದೀರಿ, ಮಾಡುತ್ತಿದ್ದೀರಿ, ತಿಂಗಳಿಗೆ ಲಕ್ಷ ಲಕ್ಷ ಸಂಬಳ ಪಡೆಯುತ್ತೀರಿ! ಆದರೂ ಭ್ರಷ್ಟರಾಗಿದ್ದೀರಿ!
ಹಾಗೆ ನೋಡಿದರೆ ಐದು ವರ್ಷಗಳಿಗೆ ನೀವು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಬೇಕು!
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಮಾಲಿಕರಾಗಬೇಕು, ಜನ ಪ್ರತಿನಿಧಿಗಳು ಸೇವಕರಾಗಬೇಕಿತ್ತು! ಆದರೆ ವ್ಯವಸ್ಥೆಯನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೀರಿ?
ಭ್ರಷ್ಟ ರಾಜಕಾರಣಿಗಳು ನೆಟ್ಟಗಾಗಬೇಕು!
ಇಲ್ಲದಿದ್ದರೆ ದೇಶ ಬಿಟ್ಟು ತೊಲಗಬೇಕು ಅಷ್ಟೇ!
ಭಾಸ್ಕರ ಮುದೇನೂರು
ನ್ಯಾಯವಾದಿಗಳು
ರಾಣೇಬೆನ್ನೂರು
