Thursday, August 6, 2026
Homeಉದ್ಯೋಗಮುಂಬೈ ರೋಡ್ ಶೋ: 2ನೇ ದಿನ 7 ಕಂಪನಿಗಳೊಂದಿಗೆ ಮಾತುಕತೆ

ಮುಂಬೈ ರೋಡ್ ಶೋ: 2ನೇ ದಿನ 7 ಕಂಪನಿಗಳೊಂದಿಗೆ ಮಾತುಕತೆ

ರಾಜ್ಯದಲ್ಲಿ ಸಿಪ್ಲಾದಿಂದ ₹200 ಕೋಟಿ ರಾಕೆಟ್ ಇಂಡಿಯಾದಿಂದ ₹100 ಕೋಟಿ ಹೂಡಿಕೆ

ಬೆಂಗಳೂರು:

ಔಷಧ ತಯಾರಿಕೆಗೆ ಹೆಸರಾಗಿರುವ ಸಿಪ್ಲಾ ಕಂಪನಿಯು ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ತನ್ನ ತಯಾರಿಕಾ ಘಟಕದ ಸಾಮರ್ಥ್ಯ ವಿಸ್ತರಣೆಗೆ 200 ಕೋಟಿ ರೂ. ಮತ್ತು ಗಿಡಮೂಲಿಕೆ ಆಧಾರಿತ ಪ್ರೋಟೀನ್ ಉತ್ಪಾದನೆಯಲ್ಲಿ ತೊಡಗಿರುವ ರಾಕೆಟ್ ಇಂಡಿಯಾ ಕಂಪನಿಯು ಗೋಕಾಕದಲ್ಲಿರುವ ತನ್ನ ಸ್ಥಾವರ ವಿಸ್ತರಣೆಗೆ ₹100 ಕೋಟಿ ಹೂಡಿಕೆ ಮಾಡಲು ತೀರ್ಮಾನಿಸಿವೆ ಎಂದು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ತಿಳಿಸಿದ್ದಾರೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಬಂಡವಾಳ ಆಕರ್ಷಣೆ ಉದ್ದೇಶದಿಂದ ಮುಂಬೈನಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ರೋಡ್-ಶೋ ಎರಡನೇ ದಿನವಾದ ಬುಧವಾರ ಅವರು ಹಲವು ಕಂಪನಿಗಳ ಜತೆ ಮಾತುಕತೆ ನಡೆಸಿದರು.

ಈ ಮಾತುಕತೆಯಲ್ಲಿ ಬ್ಲ್ಯಾಕ್ ಸ್ಟೋನ್, ಸೇಂಟ್ ಗೋಬಿಯನ್, ಹೊರೈಝಾನ್, ಹೆನ್ಕೆಲ್, ಕೆಇಸಿ ಇಂಟರ್ನ್ಯಾಷನಲ್, ಐಡಿಯಾ ಫೋರ್ಜ್ ಕಂಪನಿಗಳು ಪಾಲ್ಗೊಂಡಿದ್ದವು.

ಈ ಬಗ್ಗೆ ಮಾತನಾಡಿರುವ ಸೆಲ್ವಕುಮಾರ್, ಸಿಪ್ಲಾ ಕಂಪನಿಯು ಈಗಾಗಲೇ ತನ್ನ ಸ್ಥಾವರ ವಿಸ್ತರಣೆಯನ್ನು ಕೈಗೆತ್ತಿಕೊಂಡಿದ್ದು, ಈ ವರ್ಷದ ಡಿಸೆಂಬರ್ ಹೊತ್ತಿಗೆ ಇಲ್ಲಿ ಉತ್ಪಾದನಾ ಚಟುವಟಿಕೆ ಆರಂಭವಾಗಲಿದೆ. ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ತನ್ನ ಉತ್ಪಾದನಾ ಘಟಕ ಹೊಂದಿರುವ ರಾಕೆಟ್ ಇಂಡಿಯಾ ಕಂಪನಿಗೆ ಅದಕ್ಕೆ ಬೇಕಾದ ಕಚ್ಚಾವಸ್ತುವಾಗಿರುವ ಮೆಕ್ಕೆಜೋಳದ ಪೂರೈಕೆಯ ಖಾತ್ರಿ ನೀಡಲಾಗಿದೆ. ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಈ ಬೆಳೆಯನ್ನು ಬೆಳೆಯುತ್ತಿದ್ದು, ಕೃಷಿ ಉತ್ಪನ್ನಕ್ಕೆ ದೊಡ್ಡ ಮಾರುಕಟ್ಟೆ ಸಿಗಲಿದೆ. ಇದಕ್ಕೆ ಪೂರಕವಾಗಿ ಕಂಪನಿಯು ಬೆಂಗಳೂರಿನಲ್ಲಿ ತನ್ನ ಜಿಸಿಸಿ ಕೇಂದ್ರ ಸ್ಥಾಪಿಸಲು ಆಸಕ್ತಿ ತೋರಿಸಿದೆ ಎಂದಿದ್ದಾರೆ.

ಬ್ಲ್ಯಾಕ್ ಸ್ಟೋನ್ ಕಂಪನಿಯು ರಾಜ್ಯದಲ್ಲಿ ಡೇಟಾ ಸೆಂಟರ್, ಮರುಬಳಕೆ ಇಂಧನ ಮತ್ತು ಫೈಬರ್ ಆಪ್ಟಿಕ್ ವಲಯದ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೂಡಿಕೆ ಮಾಡಲು ಬಯಸಿದೆ. ಗಾಜು ಮತ್ತಿತರ ವಸ್ತುಗಳ ತಯಾರಿಕೆಗೆ ಹೆಸರಾಗಿರುವ ಸೇಂಟ್ ಗೋಬಿಯನ್ ಕಂಪನಿಯು ರಾಜ್ಯದಲ್ಲಿ ತನ್ನ ತಯಾರಿಕಾ ಸೌಲಭ್ಯದ ವಿಸ್ತರಣೆಗೆ ಮುಂದಾಗಿದೆ. ಇದಕ್ಕೆ ಬೇಕಾದ ಅಗತ್ಯ ಭೂಮಿ ಎಲ್ಲೆಲ್ಲಿದೆ ಎಂದು ತಿಳಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಹೊರೈಝಾನ್ ಕಂಪನಿಗೆ ರಾಜ್ಯದ 2ನೇ ಹಂತದ ನಗರಗಳಲ್ಲಿ ಹೂಡಿಕೆ ಮಾಡುವಂತೆ ಕೇಳಲಾಗಿದೆ. ಅದು ಬಳಸಲು ಸಿದ್ಧವಾಗಿರುವ ಮತ್ತು ಪ್ಲಗ್ ಅಂಡ್ ಪ್ಲೇ ಮಾದರಿಯಲ್ಲಿ ಈ ಕೆಲಸ ಮಾಡಬಯಸಿದೆ. ಇದರಿಂದ ರಾಜ್ಯವು ಕೈಗಾರಿಕಾ ಪ್ರಗತಿಯಲ್ಲಿ ಪ್ರಾದೇಶಿಕ ಸಮಾನತೆ ಸಾಧಿಸಬಹುದು ಎಂದು ಅವರು ನುಡಿದಿದ್ದಾರೆ.

ಮಾತುಕತೆಗಳಲ್ಲಿ ಬ್ಲ್ಯಾಕ್ ಸ್ಟೋನ್ ಮುಖ್ಯಸ್ಥ ನಿಖಿಲ್ ಜಾಲನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ರಚಿತ್ ಮೋಹನ್, ಸೇಂಟ್ ಗೋಬಿಯಾನ್ ಸಿಎಫ್ಒ ಹರಿ ಸಿಂಘುದಾಸು ಮತ್ತು ಪ್ರಕಾಶ್ ಸಬರದ, ಹೊರೈಝಾನ್ ಸಿಇಒ ಊರ್ವಿಶ್ ರಾಂಭಿಯಾ ಮತ್ತು ವೆಂಕಟರಾಮನ್, ಸಿಪ್ಲಾದ ಜಾಗತಿಕ ಮುಖ್ಯಸ್ಥ ಪ್ರಭಾಕರನ್ ನಾಯರ್, ರಾಕೆಟ್ ಇಂಡಿಯಾದ ಪ್ರಸನ್ನ ವೆಂಕಟೇಶ್, ಐಡಿಯಾ ಫೋರ್ಜ್ ನಿರ್ದೇಶಕ ಸಚಿನ್ ಮಾಥೂರ್ ಭಾಗವಹಿಸಿದ್ದರು.

ಕೈಗಾರಿಕಾ ಇಲಾಖೆ ಆಯುಕ್ತೆ ಖುಷ್ಬು ಗೋಯಲ್ ಸೇರಿದಂತೆ ಇತರರು ಇದ್ದರು.

ಹೆಚ್ಚಿನ ಸುದ್ದಿ