ಕಲಬುರಗಿ.ಅ.5 : ಕಲಬುರಗಿ ಮತ್ತು ಯಾದಗಿರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ್ನು ಸಾರ್ವಜನಿಕ ಪ್ರಾಧಿಕಾರ ಎಂದು ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತರಾದ ಬಿ.ವೆಂಕಟಿಸಿಂಗ್ ಮಹತ್ವದ ತೀರ್ಪು ನೀಡಿದ್ದಾರೆ.
ರಾಜಕುಮಾರ ಆಳಂದ ಎನ್ನುವವರು ಮಾಹಿತಿ ಹಕ್ಕು ಅಧಿನಿಯಮ 6(1) ರಡಿ ತಾವು ಕಲಬುರಗಿ ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಳಂದ ಶಾಖೆಗೆ 25.01.2022 ರಂದು ಬರೆದ ಪತ್ರದ ಬಗ್ಗೆ, ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಕೋರಿದ್ದರು.
ಮೇಲ್ಮನವಿದಾರು ಕೋರಿದ ಮಾಹಿತಿಗೆ ಸಂಬಂಧಿಸಿದಂತೆ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ನ ಆಳಂದ ಶಾಖೆ ವ್ಯವಸ್ಥಾಪಕರು ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರವಾದ ಕಲಬುರಗಿ-ಯಾದಗಿರ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಪ್ರಧಾನ ಕಛೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಪತ್ರ ಬರೆದು ನೀಡಿ ತಮ್ಮ ಬ್ಯಾಂಕ್ ಸರ್ಕಾರ ದಿಂದ ಯಾವುದೇ ರೀತಿಯಲ್ಲಿ ಗಣನೀಯ ಪ್ರಮಾಣದ ಆರ್ಥಿಕ ನೇರವು ಪಡೆದಿಲ್ಲ. ಹೀಗಾಗಿ ತಮ್ಮ ಬ್ಯಾಂಕ್ ಸಾರ್ವಜನಿಕ ಪ್ರಾಧಿಕಾರ ಅಲ್ಲಾ ತಾವು ಮಾಹಿತಿ ಹಕ್ಕು ಅಧಿನಿಯಮ 2005ರಡಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.
ಪ್ರತಿವಾದಿ ಬ್ಯಾಂಕ್ ಬರೆದ ಪತ್ರ ದಿಂದ ತೃಪ್ತರಾಗದ ಮೇಲ್ಮನವಿದಾರ ರಾಜಕುಮಾರ ಆಳಂದ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದಲ್ಲಿ ದ್ವಿತೀಯ ಮೇಲ್ಮನವಿ ಸಲ್ಲಿಸಿದ್ದರು.
ಮೇಲ್ಮನವಿದಾರು ಸಲ್ಲಿಸಿದ ದ್ವಿತೀಯ ಮೇಲ್ಮನವಿ ವಿಚಾರಣೆ ಕೈಗೆತ್ತಿಕೊಂಡ ಆಯೋಗವು ವಿಚಾರಣೆ ನಡೆಸಿ, ಕೊನೆಗೆ ದಿನಾಂಕ:30.07.2026 ರಂದು ಕಲಬುರಗಿ ಯಾದಗಿರ ಡಿ.ಸಿ.ಸಿ. ಬ್ಯಾಂಕ್ ಸಾರ್ವಜನಿಕ ಪ್ರಾಧಿಕಾರ ಎಂದು ಘೋಷಿಸಿ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತರಾದ ಬಿ.ವೆಂಕಟ್ ಸಿಂಗ್ ಮಹತ್ವದ ತೀರ್ಪು ನೀಡಿ ಆದೇಶಿಸಿದ್ದಾರೆ.
ಕಲಬುರಗಿ-ಯಾದಗಿರ ಡಿ.ಸಿ.ಸಿ. ಬ್ಯಾಂಕ್ ಸರ್ಕಾರದಿಂದ ಗಣನೀಯ ಪ್ರಮಾನದಲ್ಲಿ ‘ಆರ್ಥಿಕ ನೇರವು ಪಡೆಯುತ್ತಿಲ್ಲವಾದರೂ ಬ್ಯಾಂಕ್ ವ್ಯವಹಾರಗಳು, ಸರ್ಕಾರದ ನಿಯಮಗಳು, ನಿರ್ದೇಶನಗಳು ಸೂಚನೆ ಮೇರೆಗೆ ನಡೆಸುತ್ತಿದೆ. ಆದ್ದರಿಂದ ಪ್ರತಿವಾದಿ ಬ್ಯಾಂಕ್ ಸಾರ್ವಜನಿಕ ಪ್ರಾಧಿಕಾರವಾಗಿದೆ ಎಂದು ಆಯೋಗವು ತೀರ್ಪು ನೀಡಿದೆ.
ಪ್ರತಿವಾದಿ ಬ್ಯಾಂಕ್ಗೆ ಸರ್ಕಾರದಿಂದ ಷೇರು ಬಂಡವಾಳ ಬಿಡುಗಡೆ ಆಗಿದೆ. ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರದಿಂದ ನೇಮಿಸಲ್ಪಟ್ಟವರಾಗಿರುತ್ತಾರೆ, ಬ್ಯಾಂಕ್ನಲ್ಲಿ ಅಕ್ರಮ ಜರುಗಿದರೆ ಸಹಕಾರ ಇಲಾಖೆ ವತಿಯಿಂದ ಅಧಿಕಾರಿಗಳ ತಂಡ ರಚಿಸಿ ತನಿಖೆಗೊಳಪಡಿಸಿ, ಅದರಲ್ಲಿ ಆರೋಪ ಸಾಬೀತಾದಲ್ಲಿ ಸದರಿ ಬ್ಯಾಂಕ್ನ್ನು ಸುಪರಸೀಡ್ ಮಾಡುವ ಅಧಿಕಾರ ಸರ್ಕಾರವು ಹೊಂದಿರುತ್ತದೆ.
ಪ್ರತಿವಾದಿ ಬ್ಯಾಂಕ್ಗೆ ಸರ್ಕಾರದಿಂದ ಅಧಿಕಾರೇತರ ಒಬ್ಬ ಸದಸ್ಯ ಹಾಗೂ ಅಧಿಕಾರಿಯೊಬ್ಬರನ್ನು ಆಡಳಿತ ಮಂಡಳಿಗೆ ಸದಸ್ಯರೆಂದು ನಾಮಕರಣ ಮಾಡುತ್ತಿದೆ. ನಬಾರ್ಡ್ ನಿಂದ ರೈತರಿಗೆ ವಿತರಿಸಲು ಪ್ರತಿವಾದಿ ಬ್ಯಾಂಕ್ ಸಾಲ ಪಡೆದು ರೈತರಿಗೆ ವಿತರಿಸುವ ಸಾಲದ ಬಡ್ಡಿ ಸರ್ಕಾರವೇ ಪಾವತಿ ಮಾಡುತ್ತಿದೆ. ಸರ್ಕಾರ ರೈತರ ಸಾಲ ಮನ್ನಾ ಮಾಡಿದರೆ ಸದರಿ ಸಾಲ ಪ್ರತಿವಾದಿ ಬ್ಯಾಂಕ್ಗೆ ಸರ್ಕಾರವೇ ಪಾವತಿ ಮಾಡುತ್ತಿದೆ. ಪ್ರತಿವಾದಿ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸರ್ಕಾರದ ಅನುಮತಿ ಪಡೆದು ನಡೆಸಲಾಗುತ್ತದೆ ಹಾಗೂ ಆ ಪ್ರಕ್ರಿಯೆಯಲ್ಲಿ ಸರ್ಕಾರದ ಒಬ್ಬ ಪ್ರತಿನಿಧಿ ಇರುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವರೋಕ್ಷ ನಿಯಂತ್ರಣದಲ್ಲಿರುವ ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕ್ನವರು ಪ್ರತಿವಾದಿ ಬ್ಯಾಂಕ್ ವ್ಯವಹಾರದ ಬಗ್ಗೆ, ಪ್ರತಿ ವರ್ಷ ಪರಿಶೀಲನೆ ಮಾಡಿ, ಸರ್ಕಾರದ ಸಹಕಾರ ಸಂಘದ ನಿಬಂಧಕರಿಗೆ ವರದಿ ನೀಡುತ್ತಾರೆ. ಹೀಗಾಗಿ ಮೇಲಿನ ಎಲ್ಲಾ ಅಂಶಗಳು ಸೇರಿದಂತೆ ಕರ್ನಾಟಕ ಮಾಹಿತಿ ಆಯೋಗದೆ ಬೆಂಗಳೂರು ಪೀಠ ಸಂಖ್ಯೆ-5 ರಲ್ಲಿ ದಾಖಲಾದ ಪ್ರಕರಣ ಸಂಖ್ಯೆ.ಕ. ಮಾ. ಆ 24802 ಎ. ಪಿ.ಎಲ್. 2024 ರ ವಿಚಾರಣೆ ನಡೆಸಿ ದಿನಾಂಕ:09.02.2026 ರಂದು ತೀರ್ಪನ್ನು ಆಧರಿಸಿ ಪ್ರತಿವಾದಿ ಕಲಬುರಗಿ-ಯಾದಗಿರ ಡಿಸಿಸಿ ಬ್ಯಾಂಕ್ ಸಾರ್ವಜನಿಕ ಪ್ರಾಧಿಕಾರ ಎಂದು ಘೋಷಿಸಲಾಗಿದೆ.
ಆಯೋಗದ ಈ ತೀರ್ಪಿನ ಆಧಾರದ ಮೇಲೆ ಪ್ರತಿವಾದಿ ಬ್ಯಾಂಕ್ ಮಾಹಿತಿ ಹಕ್ಕು ಅಧಿನಿಯಮ 2005ರನ್ನಯ ಸಾರ್ವಜನಿಕ ಪ್ರಾಧಿಕಾರವಾಗಿದ್ದು, ಮಾಹಿತಿ ಹಕ್ಕು ಅಧಿನಿಯಮ 2005ರ 4(1)(ಎ) ಮತ್ತು 4(1)(ಬಿ) ಯನ್ನು ಪ್ರಕಟಿಸಲು ಕ್ರಮವಹಿಸಬೇಕು. ಹಾಗೂ ಪ್ರತಿ ಬ್ಯಾಂಕ್ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರವನ್ನು ಘೋಷಿಸಬೇಕು ಎಂದು ನಿರ್ದೇಶನ ನೀಡಲು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಹಕಾರ ಇಲಾಖೆ, ಸಹಕಾರ ಸಂಘಗಳ ನಿಬಂಧಕರು, ಸಹಕಾರ ಇಲಾಖೆ, ಬೆಂಗಳೂರು ಹಾಗೂ ಸಹಕಾರ ಸಂಘಗಳ ಜಂಟಿ ನಿಬಂಧಕರು, ಕಲಬುರಗಿ ಇವರಿಗೆ ಆಯೋಗ ಸೂಚಿಸಿದೆ.
, ಬಾಕ್ಸ್ ಐಟಂ : ———– ಜುಲೈ ತಿಂಗಳಲ್ಲಿ ಹೆಚ್ಚು ದಂಡ ವಸೂಲಿ ಮತ್ತು ಅರ್ಧ ಪ್ರಕರಣಗಳ ವಿಲೇವಾರಿ.
ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠದಲ್ಲಿ ಜುಲೈ ತಿಂಗಳಲ್ಲಿ ಗಣನೀಯ ಪ್ರಮಾಣದಲ್ಲಿ ದಂಡ ವಸೂಲಿ ಮಾಡುವುದರ ಜೊತೆಗೆ ಅಧಿಕ ಪ್ರಮಾಣದ ಪ್ರಕರಣಗಳ ವಿಲೇವಾರಿ ಮಾಡಲಾಗಿದೆ.
ಜುಲೈ ತಿಂಗಳಿನಲ್ಲಿ 767 ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದು ಅದರಲ್ಲಿ ಒಟ್ಟು 526 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.
ಇದರ ಜೊತೆಗೆ ಮಾಹಿತಿ ನೀಡಲು ನಿರ್ಲಕ್ಷ್ಯವಹಿಸಿದ ಪ್ರತಿವಾದಿ ಅಧಿಕಾರಿಗಳಿಗೆ ಜುಲೈ ತಿಂಗಳಿನಲ್ಲಿ ರೂ. 60 ಸಾವಿರಗಳ ದಂಡ ವಿಧಿಸಿದ್ದಲ್ಲದೆ ಆರು ಜನ ಮೇಲ್ಮನವಿದಾರರಿಗೆ ರೂ. 27 ಸಾವಿರಗಳ ಪರಿಹಾರ ನೀಡಲು ಆದೇಶಿಸಲಾಗಿದೆ.
ಪಂಚಾಯತ್ ರಾಜ್ ಇಂಜನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಾಜಕುಮಾರ ಇವರಿಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಲಾ ರೂ. 10 ಸಾವಿರದಂತೆ ಒಟ್ಟು ರೂ. 20 ಸಾವಿರಗಳ ದಂಡ ವಿಧಿಸಲಾಗಿದೆ. ಇನ್ನುಳಿದಂತೆ ಸಿರವಾರ ತಾಲೂಕ ಹರೇಹಣಗಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಈಶಪ್ಪ, ಸಿಂಧನೂರು ತಾಲೂಕು ಬಸ್ಸಾಪುರ ಗ್ರಾಮ ಪಂಚಾಯತಿ ಕಾರ್ಯದರ್ಶಿ ವಿಜಯಕುಮಾರ, ಶಹಪುರ ತಾಲೂಕಿನ ಖಾನಾಪುರ ಗ್ರಾಮ ಪಂಚಾಯತಿ ಕಾರ್ಯುದರ್ಶಿ ದೇವೇಂದ್ರಪ್ಪ ಹಾಗೂ ಗಂಗಾವತಿ ತಾಲೂಕಿನ ಚಿಕ್ಕ ಜಂತಕಲ್ ಗ್ರಾಮ ಪಂಚಾಯತಿ ಕಾರ್ಯದರ್ಶಿ ರವೀಂದ್ರ ಸೇರಿದಂತೆ ಈ ನಾಲ್ಕು ಜನ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಿಗೆ ಅನುಕ್ರಮವಾಗಿ ತಲಾ ರೂ.10 ಸಾವಿರಗಳಂತೆ ದಂಡ ವಿಧಿಸಿ ಪಾವತಿಗೆ ಆದೇಶಿಸಲಾಗಿದೆ. ದಿನಾಂಕ:24.11.2025 ರಿಂದ 31.07.2026 ರವರೆಗೆ (140 ದಿನ) ಕಲಬುರಗಿ ಪೀಠದಲ್ಲಿ ಒಟ್ಟು 5123 ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡು ಅದರಲ್ಲಿ ಒಟ್ಟು 2448 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ, ಈ ಅವಧಿಯಲ್ಲಿ ಒಟ್ಟಾರೆ ರೂ. 5 ಲಕ್ಷ 93 ಸಾವಿರಗಳ ದಂಡ ವಿಧಿಸಿದ್ದು, ಅದರಲ್ಲಿ ಒಟ್ಟು ರೂ. 4 ಲಕ್ಷ 72 ಸಾವಿರಗಳ ದಂಡವನ್ನು ವಸೂಲಿ ಮಾಡಲಾಗಿದ್ದು, ರೂ. 86 ಸಾವಿರ ಪರಿಹಾರವನ್ನು ಮೇಲ್ಮನವಿದಾರರಿಗೆ ನೀಡಲು ಆದೇಶಿಸಲಾಗಿದೆ.
