ಬೆಂಗಳೂರು, ಆ. 4: ರಾಜ್ಯ ಸರ್ಕಾರದ ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ರುದ್ರಪ್ಪ ಲಮಾಣಿ ಅವರಿಗೆ ಇಂದು ಬೆಂಗಳೂರಿನಲ್ಲಿ ಅಖಿಲ್ ಕರ್ನಾಟಕ ಬಂಜಾರ ಸೇವಾ ಸಂಘ (AIBSS) ಪದಾಧಿಕಾರಿಗಳು ಹಾಗೂ ಬಂಜಾರ ಸಮುದಾಯದ ಮುಖಂಡರು ಆತ್ಮೀಯವಾಗಿ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ AIBSS ತಾಲೂಕು ಅಧ್ಯಕ್ಷರಾದ ವೆಂಕಟೇಶ್ ಎನ್. ರಾಠೋಡ್, ಜಿಲ್ಲಾ ಅಧ್ಯಕ್ಷರಾದ ಅಮರೇಶ್ ರಾಠೋಡ್, ತಾಲೂಕು ಕಾರ್ಯದರ್ಶಿ ಲಾಲಪ್ಪ ರಾಠೋಡ್, ರಾಜ್ಯ ಸಂಘಟನಾ ಕಾರ್ಯದರ್ಶಿ ದೇವಪ್ಪ ರಾಠೋಡ್ ಸೇರಿದಂತೆ ಅಖಿಲ್ ಕರ್ನಾಟಕ ಬಂಜಾರ ಸಮುದಾಯದ ಪ್ರಮುಖರು ಸಚಿವರನ್ನು ಭೇಟಿಯಾಗಿ ಪುಷ್ಪಗುಚ್ಛ ನೀಡಿ ಗೌರವಿಸಿದರು.
ಸಚಿವರಾದ ರುದ್ರಪ್ಪ ಲಮಾಣಿ ಅವರು ಬಂಜಾರ ಸಮುದಾಯ ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಬದ್ಧತೆಯಿಂದ ಕಾರ್ಯನಿರ್ವಹಿಸಲಿದ್ದು, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವ ವಿಶ್ವಾಸವನ್ನು ಮುಖಂಡರು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪದಾಧಿಕಾರಿಗಳು, ಸಚಿವ ಸ್ಥಾನವು ರಾಜ್ಯದ ಅಭಿವೃದ್ಧಿಗೆ ಹೊಸ ಚೈತನ್ಯ ನೀಡಲಿ ಎಂದು ಹಾರೈಸಿದರು. ಜೊತೆಗೆ ಬಂಜಾರ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಸರ್ಕಾರ ವಿಶೇಷ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಮನವಿ ಮಾಡಿದರು.
ಅಭಿನಂದನೆ ಸ್ವೀಕರಿಸಿದ ಸಚಿವ ರುದ್ರಪ್ಪ ಲಮಾಣಿ ಅವರು ಶುಭಾಶಯ ಕೋರಿದ ಎಲ್ಲಾ ಮುಖಂಡರು ಹಾಗೂ ಬಂಜಾರ ಸಮುದಾಯದವರಿಗೆ ಕೃತಜ್ಞತೆ ಸಲ್ಲಿಸಿ, ಜನರ ನಿರೀಕ್ಷೆಗೆ ತಕ್ಕಂತೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಬಂಜಾರ ಸಮುದಾಯದ ಹಲವಾರು ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
