ಬೆಂಗಳೂರು: ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಮತ್ತು ಯುವ ಜನರ ಭವಿಷ್ಯವನ್ನು ಭದ್ರಪಡಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂದು ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಆಗಸ್ಟ್ 2ರಂದು ನಡೆಯಲಿರುವ ಲಿಖಿತ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ಲೋಪಗಳಿಗೆ ಆಸ್ಪದ ನೀಡದಂತೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗೃಹ ಸಚಿವರ ಟ್ವೀಟ್
https://x.com/priyankkharge/status/2083502716052222347
ಪಾರದರ್ಶಕತೆಗಾಗಿ ಕಟ್ಟುನಿಟ್ಟಿನ ಕ್ರಮ: ಪ್ರಶ್ನೆಪತ್ರಿಕೆಯು ಪರೀಕ್ಷಾ ಕೇಂದ್ರವನ್ನು ತಲುಪಿದ ಬಳಿಕ, ಪ್ರಾಂಶುಪಾಲರ ನೇತೃತ್ವದಲ್ಲಿ ಹಾಗೂ ಐವರು ಅಭ್ಯರ್ಥಿಗಳ ಸಮ್ಮುಖದಲ್ಲಿಯೇ ಸೀಲ್ ತೆರೆಯುವಂತೆ ಆದೇಶಿಸಲಾಗಿದೆ.
ಒಎಂಆರ್ ಶೀಟ್ನಲ್ಲಿ 5ನೇ ಆಯ್ಕೆ ಕಡ್ಡಾಯ: ಈ ಹಿಂದೆ ಪರೀಕ್ಷೆ ಮುಗಿದ ನಂತರ ಒಎಂಆರ್ ಶೀಟ್ ತಿದ್ದಲಾಗುತ್ತಿದೆ ಎಂಬ ಆರೋಪಗಳಿಗೆ ಕಡಿವಾಣ ಹಾಕಲು ಈ ಬಾರಿ 5ನೇ ಕಾಲಂ ಅನ್ನು ಪರಿಚಯಿಸಲಾಗಿದೆ. ಪ್ರಶ್ನೆಗೆ ಉತ್ತರ ಗೊತ್ತಿಲ್ಲದವರು ಖಾಲಿ ಬಿಡುವಂತಿಲ್ಲ; 5ನೇ ಕಾಲಂ ಅನ್ನು ಕಡ್ಡಾಯವಾಗಿ ಶೇಡ್ ಮಾಡಬೇಕು. ತಪ್ಪಿದ್ದಲ್ಲಿ ಅರ್ಧ ಅಂಕ ಕಡಿತಗೊಳಿಸಲಾಗುತ್ತದೆ. ಹಾಗೂ ಪರೀಕ್ಷೆ ಮುಗಿದ 30 ನಿಮಿಷದೊಳಗೆ ಒಎಂಆರ್ ಶೀಟ್ಗಳನ್ನು ಕೆಇಎ ವೆಬ್ಸೈಟ್ಗೆ ಅಪ್ಲೋಡ್ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಅಾಧುನಿಕ ತಂತ್ರಜ್ಞಾನದ ಕಣ್ಗಾವಲು: ಪ್ರತಿ ಪರೀಕ್ಷಾ ಕೊಠಡಿಯಲ್ಲಿಯೂ ಹೈ ಡೆಫಿನಿಷನ್ ಕ್ಯಾಮೆರಾ, ಲೈವ್ ವೆಬ್ಕಾಸ್ಟಿಂಗ್, ನೆಟ್ವರ್ಕ್ ಜಾಮರ್, ಬೆರಳಚ್ಚು ಬಯೋಮೆಟ್ರಿಕ್ ಮತ್ತು ಮುಖಗುರುತು ಪತ್ತೆ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಅಭ್ಯರ್ಥಿಗಳಿಗೆ ಸೂಚನೆಗಳು: ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ 1 ಗಂಟೆ ಮುಂಚಿತವಾಗಿ ಆಗಮಿಸಿ ಕಡ್ಡಾಯ ತಪಾಸಣೆಗೆ ಒಳಪಡಬೇಕು. ನಕಲು ತಡೆಯಲು ಕಾವಲು ಬಿಗಿಗೊಳಿಸಲಾಗಿದ್ದರೂ, ಧಾರ್ಮಿಕ ನಂಬಿಕೆಯನ್ನು ಗೌರವಿಸಲು ಶಿವದಾರ, ಜನಿವಾರ ಹಾಗೂ ಮಾಂಗಲ್ಯಸರ ಧರಿಸಲು ಅನುಮತಿ ನೀಡಲಾಗಿದೆ.
ಶಾಶ್ವತ ಡಿಬಾರ್ ಎಚ್ಚರಿಕೆ: ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ಎಸಗುವುದು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳನ್ನು ಶಾಶ್ವತವಾಗಿ ಡಿಬಾರ್ ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ.
ಅರ್ಹ ಅಭ್ಯರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ನ್ಯಾಯಸಮ್ಮತವಾಗಿ ಪ್ರಕ್ರಿಯೆ ನಡೆಸುವುದು ಸರ್ಕಾರದ ಧ್ಯೇಯವಾಗಿದ್ದು, ನೇಮಕಾತಿ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮದ ಬಗ್ಗೆ ಸುಳಿವಿದ್ದರೆ ನೇರವಾಗಿ ಸಂಪರ್ಕಿಸುವಂತೆ ಗೃಹ ಸಚಿವರು ಉದ್ಯೋಗಾಂಕ್ಷಿಗಳಿಗೆ ತಮ್ಮ ಟ್ವೀಟ್ ಮೂಲಕ ನೇರೆ ಕರೆ ನೀಡಿದ್ದಾರೆ.
