Friday, July 31, 2026
Homeರಾಜ್ಯದೊಂಬರಾಟ ಬಿಡಿ, ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಿ :: ಜನಹಿತಕ್ಕಿಂತ ಸಚಿವ ಸಂಪುಟವೇ ಮುಖ್ಯ:...

ದೊಂಬರಾಟ ಬಿಡಿ, ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಿ :: ಜನಹಿತಕ್ಕಿಂತ ಸಚಿವ ಸಂಪುಟವೇ ಮುಖ್ಯ: ಯಡಿಯೂರಪ್ಪ

ಮಂಡ್ಯ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಾಜ್ಯದ ಜನರ ಹಿತಕ್ಕಿಂತ ದೆಹಲಿಯಲ್ಲಿ ರಾಹುಲ್ ಗಾಂಧಿ ಮನೆ ಕಾದು ಸಚಿವ ಸಂಪುಟ ವಿಸ್ತರಣೆ ಮಾಡುವುದೇ ಮುಖ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆರೋಪಿಸಿದ್ದಾರೆ.
ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಂಡಿಸಿ, ಶ್ರೀರಂಗಪಟ್ಟಣದ ಕೆ.ಆರ್.ಎಸ್ ಡ್ಯಾಂ ಬಳಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಶಿವಕುಮಾರ್ ಅವರು ಪ್ರಾಮಾಣಿಕರಾಗಿದ್ದರೆ ಹನಿ ನೀರನ್ನೂ ಕೆಆರ್‍ಎಸ್‍ನಿಂದ ಬಿಡಲ್ಲ; ಅಗತ್ಯ ಬಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎನ್ನುತ್ತಿದ್ದರು. ಆದರೆ ಅವರು ಅದನ್ನು ಹೇಳದೆ ರಾಜಕೀಯ ದೊಂಬರಾಟ ಮಾಡುತ್ತಿದ್ದಾರೆ. ಲಜ್ಜೆಗೆಟ್ಟ ಕಾಂಗ್ರೆಸ್ ಮುಖಂಡರಿಗೆ ಎಷ್ಟು ಬಾರಿ ಧಿಕ್ಕಾರ ಹೇಳಿದರೂ ಕಡಿಮೆ ಎಂದರು.
ಶಿವಕುಮಾರ್ ಅವರು ಈಗಲಾದರೂ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರನ್ನು ಕರೆದುಕೊಂಡು ಬಂದು ಕೆಆರ್‍ಎಸ್ ಅನ್ನು ತೋರಿಸಲಿ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತೊಂದರೆಯಾಗಲಿ ಎಂದು ಮನವರಿಕೆ ಮಾಡಿಕೊಡಲಿ ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರ ಸರಿಯಾದ ಸಮಯದಲ್ಲಿ ಸುಪ್ರೀಂ ಕೋರ್ಟ್‍ಗೆ ನೀರಿನ ಕೊರತೆ ಬಗ್ಗೆ ಸೂಕ್ತವಾಗಿ ಮನವರಿಕೆ ಮಾಡಿಕೊಡಬೇಕಿತ್ತು. ಆಗ ಇಂದಿನ ಗಂಡಾಂತರದಿಂದ ತಪ್ಪಿಸಿಕೊಳ್ಳಬಹುದಿತ್ತು. ಆದರೆ ಈಗ ನೀರಿಗೆ ಹಾಹಾಕಾರ ಇದೆ. ಉಸಿರುಕಟ್ಟುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ರಾಜ್ಯದ ಜನರು ಸಂಕಷ್ಟದಲ್ಲಿ ಇದ್ದಾಗ ಅವರ ಪರ ನಿಲ್ಲಬೇಕಾಗಿದ್ದು ಮುಖ್ಯಮಂತ್ರಿಗಳ ಜವಾಬ್ದಾರಿ. ಆದರೆ ಅವರು ಹಾಗೆ ಮಾಡಲಿಲ್ಲ. ಯಾವುದೇ ಕಾರಣಕ್ಕೂ ಹನಿ ನೀರನ್ನೂ ತಮಿಳುನಾಡಿಗೆ ಬಿಡಕೂಡದು ಎಂದು ಹೇಳಿದರು. ಕಾವೇರಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ರಾಜ್ಯ ಸರ್ಕಾರ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಮೇಕೆದಾಟು ಯೋಜನೆ ಆರಂಭಿಸಲಿ. ಭಾರತೀಯ ಜನತಾ ಪಕ್ಷ ಸದಾ ರೈತರ ಪರವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.

ಡಿಕೆಶಿ ತಮಿಳುನಾಡಿನ ನೀರುಗಂಟಿ: ಆರ್ ಅಶೋಕ್

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಸಿಎಂ ಶಿವಕುಮಾರ್ ಅವರು ತಮಿಳುನಾಡಿನ ಜೊತೆ ಶಾಮೀಲಾಗಿ ಆ ರಾಜ್ಯದ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ದೆಹಲಿಯಲ್ಲೇ ಇದ್ದ ಶಿವಕುಮಾರ್ ಅವರು ಕಾನೂನು ತಜ್ಞರ ಜೊತೆ ಮಾತನಾಡಿ, ನ್ಯಾಯಾಧೀಕರಣದ ಮುಂದೆ ಯಾವ ರೀತಿ ವಾದ ಮಾಡಬೇಕು ಎಂಬುದನ್ನು ಚರ್ಚೆ ಮಾಡಬೇಕಿತ್ತು. ಆದರೆ ಮಾಡಲಿಲ್ಲ. ಈಗ ನೀರು ಖಾಲಿಯಾಗ್ತ ಇದೆ. ರಾಜ್ಯದ ಜನರ ಹಿತಾಸಕ್ತಿಗಿಂತ ದೆಹಲಿಯಲ್ಲಿ ರಾಹುಲ್ ಗಾಂಧಿ ಮನೆ ಕಾಯುವುದೇ ಸಿಎಂಗೆ ಮುಖ್ಯವಾಗಿತ್ತು ಎಂದು ದೂರಿದರು,
ರೈತರಿಗೆ ಬೆಳೆ ಬೆಳೆಯಬೇಡಿ ಎಂದು ಸಿಎಂ ಹೇಳಿದ್ದಾರೆ. ಆದರೆ ಅವರಿಗೆ ಪರ್ಯಾಯ ವ್ಯವಸ್ಥೆ ಸಹ ಮಾಡಿಲ್ಲ. ಪರಿಹಾರ ನೀಡಿಲ್ಲ. ಬರಗಾಲ ಸಹ ಘೋಷಣೆ ಮಾಡಿಲ್ಲ. ಕೇಂದ್ರಕ್ಕೆ ವರದಿ ಸಹ ನೀಡಿಲ್ಲ. ರಾಜ್ಯ ಸರ್ಕಾರಕ್ಕೆ ನಾಚಿಕೆಯೇ ಇಲ್ಲವಾಗಿದೆ. ಉತ್ತರ ಕರ್ನಾಟಕದಲ್ಲಿ ಜನ ಗುಳೇ ಹೋಗುತ್ತಿದ್ದಾರೆ. ಇವರ ಗಮನವೆಲ್ಲ ಸಚಿವ ಸಂಪುಟ ರಚನೆ ಮಾಡುವುದರಲ್ಲೇ ಮುಳುಗಿದೆ ಎಂದರು.
ರಾಜ್ಯದ ನದಿಗಳು, ಜಲಾಶಯಗಳು ಖಾಲಿ ಖಾಲಿ. ಅದೇ ರೀತಿ ರಾಜ್ಯದ ಖಜಾನೆ ಸಹ ಖಾಲಿಯಾಗಿದೆ. ಇದೇ ಶಿವಕುಮಾರ್ ಅವರು ಮಾಡಿದ ಸಾಧನೆ. ಡಿಕೆಶಿ ಸಿಎಂ ಆದ ತಕ್ಷಣ ಬರಗಾಲ ಬಂತು. ಈ ಸರ್ಕಾರ ಜನರ ಪಾಡಿಗೆ ಸತ್ತು ಹೋಗಿದೆ ಎಂದು ವ್ಯಂಗ್ಯÀವಾಡಿದರು.
ಯಾಕಾದರೂ ಈ ಮನೆಹಾಳು ಕಾಂಗ್ರೆಸ್‍ಗೆ ಓಟು ಹಾಕಿದೆ ಎಂದು ರಾಜ್ಯದ ಜನ ಪಶ್ಚಾತ್ತಾಪ ಪಡ್ತಾ ಇದ್ದಾರೆ. ಶಾಪ ಹಾಕ್ತ ಇದ್ದಾರೆ. ಕೆಆರ್‍ಎಸ್‍ನಿಂದ ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ಆಗ್ರಹಿಸಿದರು.

ಸಿಡಬ್ಲ್ಯೂಸಿಗೆ ಮನವರಿಕೆ ಮಾಡಿಕೊಟ್ಟಿಲ್ಲ: ಛಲವಾದಿ ನಾರಾಯಣಸ್ವಾಮಿ

ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ನೀರಿನ ಕೊರತೆ ಬಗ್ಗೆ ಸಿಡಬ್ಲ್ಯೂಸಿಗೆ ರಾಜ್ಯ ಸರ್ಕಾರ ಮನವರಿಕೆ ಮಾಡಿಕೊಟ್ಟಿಲ್ಲ. ಯಾವ ಸಮಯದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿತ್ತೊ ಅದನ್ನು ಸರ್ಕಾರ ಮಾಡಲಿಲ್ಲ ಎಂದು ದೂರಿದರು.
ಬಿಜೆಪಿ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ಕಾಂಗ್ರೆಸ್ ಸರ್ಕಾರ ರೈತರ ಹಿತ ಕಾಪಾಡುವ ಕೆಲಸವನ್ನು ಮಾಡಬೇಕು. ಯಾವುದೇ ಕಾರಣಕ್ಕೂ ಕೆಆರ್‍ಎಸ್‍ನಿಂದ ನೀರು ಬಿಡಲ್ಲ ಎಂದು ಸರ್ಕಾರ ಹೇಳಿದರೆ ಸರ್ಕಾರದ ಜೊತೆ ಬಿಜೆಪಿ ಕೈ ಜೋಡಿಸಲಿದೆ ಎಂದರು.

ಮೊದಲೇ ಸರ್ವ ಪಕ್ಷ ಸಭೆ ಕರೆಯಬೇಕಿತ್ತು: ಸಿ.ಟಿ.ರವಿ

ನೀರಿನ ಸಮಸ್ಯೆ ಉಲ್ಬಣವಾಗಿರುವ ಈ ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರ ಸರ್ವ ಪಕ್ಷ ಸಭೆ ಕರೆದಿದೆ. ಇದನ್ನು ಮೊದಲೇ ಮಾಡಬೇಕಿತ್ತು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆಗ್ರಹಿಸಿದರು.
ವಕೀಲರ ತಂಡದ ಜೊತೆ ಸಮಾಲೋಚನೆ ಮಾಡಿ ವಾಸ್ತವಿಕ ಪರಿಸ್ಥಿತಿಯನ್ನು ನ್ಯಾಯಾಲಯಕ್ಕೆ ಸರ್ಕಾರ ಮನವರಿಕೆ ಮಾಡಬೇಕಿತ್ತು. ಆದರೆ ಅದನ್ನು ಮಾಡಲಿಲ್ಲ. ರಾಜ್ಯದ ರೈತರ ಹಿತಕ್ಕಿಂತ ಶಾಸಕರಿಗೆ ಅಧಿಕಾರ ನೀಡುವುದೇ ಸಿಎಂಗೆ ಮುಖ್ಯವಾಗಿದೆ. ಈಗ ರಾತ್ರೋರಾತ್ರಿ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಡುತ್ತಿದ್ದೀರಿ. ನಾವು ತಮಿಳುನಾಡಿನ ವಿರೋಧಿಗಳಲ್ಲ. ಆದರೆ ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಸಬೇಕಿತ್ತು ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಅವರೇ ಕರ್ನಾಟಕದ ಜನರಿಗೆ ದ್ರೋಹ ಮಾಡಬೇಡಿ. ನಿಮ್ಮನ್ನು ಬಂಡೆ ಎನ್ನುತ್ತಾರೆ. ಈಗ ನೀವು ಬಂಡೆ ರೀತಿ ನಿಂತು ನೀರು ಬಿಡಬೇಡಿ. ಇಲ್ಲದೇ ಇದ್ದರೆ ಬಂಡೆಗೆ ಡೈನಮೆಟ್ ಅನ್ನು ರಾಜ್ಯದ ಜನ ಇಡುತ್ತಾರೆ ಎಂದು ಎಚ್ಚರಿಸಿದರು. ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆ ಮಾಡಿದ ನೀವು ಈಗ ಜನರ ಹಕ್ಕು ರಕ್ಷಿಸಿ. ನಾಡಿಗೆ ದ್ರೋಹ ಮಾಡಿದರೆ ಜನ ಕ್ಷಮಿಸಲ್ಲ ಎಂದು ಹೇಳಿದರು.

ಹೆಚ್ಚಿನ ಸುದ್ದಿ